ಎನ್.ಪಂಪನಗೌಡ ಬಾದನಹಟ್ಟಿ
ನದಿಯಲ್ಲಿ ನೀರು ಬತ್ತಿದ್ದು, ಅನ್ನದಾತರ ಜೀವನವೂ ದುಸ್ತರವಾಗಿದೆ. ಸಮೀಪದ ಎಮ್ಮಿಗನೂರು, ಮಣ್ಣೂರು ಸೂಗೂರು, ರುದ್ರಪಾದ, ನಡವಿ, ಮಣ್ಣೂರು ಕ್ಯಾಂಪ್,ರಾಮಚಂದ್ರಾಪುರ ಕ್ಯಾಂಪ್, ಸಣಾಪುರ, ಇಟಗಿ, ನಂ.2 ಮುದ್ರಾಪುರ ಸೇರಿದಂತೆ ನದಿ ಆಧರಿಸಿದ ಸಾವಿರಾರು ಎಕರೆ ಪ್ರದೇಶದ ಜಮೀನುಗಳಲ್ಲಿ ಭತ್ತ ಬೆಳೆ ಬೆಳೆಯಲಾಗಿದೆ. ರೈತರು 1 ಎಕರೆಗೆ ಗೊಬ್ಬರದೊಂದಿಗೆ ಸುಮಾರು 25 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿದ್ದಾರೆ. ಈಗ ಬೆಳೆದ ಬೆಳೆ ತೆಗೆದುಕೊಳ್ಳಲು ಹರಸಾಹಸಪಡುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ನದಿಯಲ್ಲಿ ನೀರಿನ ಹರಿವು ಬತ್ತಿದ್ದು, ಬೆಳೆಗಳಿಗೆ ನೀರು ಹರಿಸುವುದು ತ್ರಾಸದಾಯಕವಾಗಿದೆ.
ಮಧ್ಯ ಪ್ರದೇಶದ ಯುದ್ಧದಿಂದಾಗಿ ಡೀಸೆಲ್, ಪೆಟ್ರೋಲ್, ರಸಗೊಬ್ಬರ ಬೆಲೆಗಳು ಗಗನಕ್ಕೇರಿದೆ. ಅನಿವಾರ್ಯವಾಗಿ ಬೆಳೆದ ಬೆಳೆಗೆ ಬೆಂಬಲ ಬೆಲೆ ಏರಿಕೆ ಮಧ್ಯದಲ್ಲಿ ರೈತರ ಬದುಕು ನೆಲಕಚ್ಚಿದೆ.ರೈತರು ಕಳೆದ ಬಾರಿ ಕ್ರಸ್ಟ್ ಗೇಟ್ ಕಟ್ಟಾದ ಪರಿಣಾಮ ಎದುರಿಸಿದ್ದರು. ಈಗ ಜಲಾಶಯದ ಹೊಸ ಕ್ರಸ್ಟ್ ಗೇಟ್‌ಗಳನ್ನು ಅಳವಡಿಸಿದ ಹಿನ್ನೆಲೆ ಈ ಬಾರಿಯಾದರೂ ರೈತರ ಬದುಕಿಗೆ ಬೆಳೆಗಳು ಆಸರೆಯಾಗಬಹುದು ಎಂಬ ನಿರೀಕ್ಷೆ ಹೊಂದಿದ್ದರು. ಆದರೆ, ಈ ಸಲ ಮಳೆ ಕೈಕೊಟ್ಟ ಪರಿಣಾಮ ಮುಂಗಾರು ಬೆಳೆಗೆ ನೀರಿಲ್ಲದಂತಾಗಿದೆ. ನದಿಯಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದೆ.
ಜಲಾಶಯದಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಇದರಿಂದ ಅಂತರ್ಜಲ ಕೂಡ ಸಂಪೂರ್ಣವಾಗಿ ಕುಸಿದಿದೆ. ರೈತರ ಬದುಕು ಅತಂತ್ರದಲ್ಲಿ ಸಾಗಿದೆ. ನದಿಗೆ ನೀರು ಹರಿಸಿದರೆ ಬೆಳೆಗಳನ್ನು ಉಳಿಸಲು ಸಾಧ್ಯವಾಗಲಿದೆ.
ನೀರು ಇಲ್ಲದೇ ನದಿ ಬರಿದಾಗಿ ಒಣಗುತ್ತಿರುವ ಪರಿಣಾಮ ಮೀನು, ಏಡಿ, ಮೊಸಳೆ ಸೇರಿದಂತೆ ಪ್ರಾಣಿ- ಪಕ್ಷಿಗಳು ವಾಸಿಸುವುದು ತುಂಬ ಕಷ್ಟಕರವಾಗಿದೆ. ಎಲ್ಲೆಂದರಲ್ಲಿ ನೀರು, ಆಹಾರ ಇಲ್ಲದೇ ಸತ್ತು ಬಿದ್ದಿವೆ.