ಕನ್ನಡಪ್ರಭ ವಾರ್ತೆ ಮುಂಡಗೋಡ
ಮಳೆಯ ಕೊರತೆಯಿಂದ ತೀವ್ರ ಬರಗಾಲ ಎದುರಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನಾವೃಷ್ಟಿಯಿಂದ ಬಿತ್ತನೆ ಮಾಡಿದ ಬೆಳೆಗಳೆಲ್ಲ ಸಂಪೂರ್ಣ ಹಾಳಾಗಿವೆ. ಸಾಲ-ಸೋಲ ಮಾಡಿ ಬೀಜ ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ ಬೆಳೆಗಳೆಲ್ಲ ಸಂಪೂರ್ಣವಾಗಿ ಮಳೆಯ ಅಭಾವದಿಂದ ಒಣಗಿ ಹೋಗಿವೆ. ಕೂಡಲೇ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಜಿಲ್ಲಾ ಸಮಿತಿಯವರು ಜಂಟಿ ಸಮೀಕ್ಷೆ ಮಾಡಿ ಮುಂಡಗೋಡ ತಾಲೂಕನ್ನು ತೀವ್ರ ಬರಗಾಲ ತಾಲೂಕು ಎಂದು ಪರಿಗಣಿಸಿ ಕೂಡಲೇ ಬರ ಪರಿಹಾರ ಒದಗಿಸಬೇಕು. ಅಲ್ಲದೆ ರೈತರು ಮಾಡಿದ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂಬುದು ರೈತರ ಆಗ್ರಹವಾಗಿದೆ.
ಪ್ರತಿವರ್ಷ ರೈತರು ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಬೆಳೆ ವಿಮೆ ಮಾಡಿಸುತ್ತ ಬಂದಿದ್ದು, ಈ ವರ್ಷವೂ ರೈತರು ಸಂಪೂರ್ಣವಾಗಿ ಬೆಳೆ ವಿಮೆ ಮಾಡಿಸಿದ್ದಾರೆ. ಕೂಡಲೇ ರಾಜ್ಯ ಮತ್ತು ಕೇಂದ್ರ ಸರ್ಕಾರ ಬೆಳೆ ವಿಮೆ ನೀಡಬೇಕು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ರೈತರ ಕಷ್ಟಗಳಿಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ತೀವ್ರ ಪ್ರತಿಭಟನೆ ಮಾಡುವ ಮುಖಾಂತರ ನಮ್ಮ ಹಕ್ಕಿಗಾಗಿ ನಾವು ಹೋರಾಡುವ ಅನಿವಾರ್ಯತೆ ಇದೆ. ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿನ ಕಟ್ಟಬಾಕಿದಾರ ರೈತರಿಗೆ ಬ್ಯಾಂಕುಗಳಿಂದ ಯಾವುದೇ ರೀತಿಯ ಹಣ ಮರುಪಾವತಿಸಲು ಒತ್ತಾಯ ಮಾಡಬಾರದು. ಅಲ್ಲದೆ ಬೆಳೆ ವಿಮೆ ತುಂಬಿಸಿಕೊಂಡ ವಿಮಾ ಕಂಪನಿಯವರು ಪ್ರತಿವರ್ಷ ರೈತರಿಗೆ ಮೋಸ ಮಾಡುತ್ತಿದ್ದು, ಅಂತಹ ವಿಮಾ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಫಿರಜ್ಜ ಸಾಗರ, ರಾಜು ಗುಬ್ಬಕ್ಕನವರ, ಶಿವಾನಂದ ಕುರುಬರ, ಎಸ್.ಎಸ್. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.