ಸುಷ್ಮಾ ಗೋಡಬೋಲೆ ನಿರ್ದೇಶನ, ಬರ ಪರಿಸ್ಥಿತಿ ನಿರ್ವಹಣೆ-ಕಾರವಾರದಲ್ಲಿ ಸಭೆ
ಜಿಲ್ಲೆಯಲ್ಲಿ ಪ್ರಸ್ತುತ ಮಳೆಯ ಪ್ರಮಾಣ ಕಡಿಮೆ ಇರುವುದರಿಂದ ರೈತರಿಗೆ ಕಡಿಮೆ ಅವಧಿಯಲ್ಲಿ ಇಳುವರಿ ನೀಡುವ ಬೆಳೆಗಳನ್ನು ಬೆಳೆಯಲು ಉತ್ತೇಜಿಸುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಷ್ಮಾ ಗೋಡಬೋಲೆ ನಿರ್ದೇಶನ ನೀಡಿದರು.
ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲೆಯ ಬರ ಪರಿಸ್ಥಿತಿ ನಿರ್ವಹಣೆ ಹಾಗೂ ಪೂರ್ವ ತಯಾರಿ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಶೇ. 24ರಷ್ಟು ಮಳೆಯ ಕೊರತೆಯಿರುವುದರಿಂದ ರೈತರು ಹೆಚ್ಚು ನೀರಿನ ಅವಶ್ಯಕತೆ ಬೇಡುವ ಬೆಳೆಗಳನ್ನು ಬೆಳೆಯದೇ, ಕಡಿಮೆ ಪ್ರಮಾಣದ ನೀರನ್ನು ಬಳಸಿಕೊಂಡು ಬೆಳೆಯಬಹುದಾದ ಬೆಳೆಯ ತಳಿಗಳನ್ನು ಬಿತ್ತನೆ ಮಾಡಲು ಪ್ರೋತ್ಸಾಹಿಸುವಂತೆ ತಿಳಿಸಿದ ಅವರು, ಈ ರೀತಿಯ ಬಿತ್ತನೆ ಬೀಜಗಳ ಕೊರತೆ ಮತ್ತು ರಸಗೊಬ್ಬರದ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು.ಜಿಲ್ಲೆಯಲ್ಲಿನ ಹೆಚ್ಚಿನ ಪ್ರಮಾಣದ ಕೃಷಿ ಭೂಮಿ ಹೊಂದಿರುವ ಮುಂಡಗೋಡ, ಹಳಿಯಾಳ ಮತ್ತು ಯಲ್ಲಾಪುರ ಭಾಗದಲ್ಲಿ ನೀರಿನ ಕೊರತೆಯನ್ನು ತಪ್ಪಿಸಲು ಕೃಷಿ ಹೊಂಡಗಳ ನಿರ್ಮಾಣ, ಬಾವಿ ಮತ್ತು ಬೋರ್‌ವೆಲ್‌ಗಳಿಗೆ ಅಂತರ್ಜಲ ಮರುಪೂರಣ ವ್ಯವಸ್ಥೆಯನ್ನು ಕಲ್ಪಿಸುವಂತೆ ತಿಳಿಸಿದರು.
ರೈತರಿಗೆ ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟವಾದಲ್ಲಿ ಬೆಳೆ ವಿಮೆ ಹಾನಿಯ ಪರಿಹಾರ ಪಡೆಯಲು ಅನುಕೂಲವಾಗುವಂತೆ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆಗೆ ನೋಂದಾಯಿಸಲು ಮತ್ತು ವಿಮಾ ಕಂತು ಪಾವತಿಸುವ ಕುರಿತಂತೆ ಅರಿವು ಮೂಡಿಸಬೇಕು. ಜಿಲ್ಲೆಯಲ್ಲಿರುವ ಮಳೆ ಮಾಪನ ಯಂತ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವ ಕುರಿತಂತೆ ಅಗತ್ಯ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಬೇಕು ಹಾಗೂ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಎಚ್ಚರವಹಿಸಬೇಕು ಎಂದರು.
ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಪಂ ಸಿಇಒ ಡಾ. ದಿಲೀಷ್ ಶಶಿ, ಕಾರವಾರ ಡಿಎಫ್‌ಒ ಆಂಥೋನಿ ಮರಿಯಪ್ಪ, ಅಪರ ಜಿಲ್ಲಾಧಿಕಾರಿ ಸಜಿದ್ ಮುಲ್ಲಾ ಇದ್ದರು.