ತಾಲೂಕಿನಲ್ಲಿ 80 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಇದ್ದರೆ ಈವರೆಗೂ ಶೇ.10ರಷ್ಟು ಮಾತ್ರ ಬಿತ್ತನೆಯಾಗಿದೆ.
ಹರಪನಹಳ್ಳಿ: ಮಳೆ ಇಲ್ಲದೇ ಬೆಳೆಗಳು ಒಣಗಿ ಹೋಗಿ ರೈತರು ಕಂಗಾಲಾಗಿರುವ ಹಿಂದುಳಿದ ಹರಪನಹಳ್ಳಿ ತಾಲೂಕನ್ನು ಬರ ಪೀಡಿತ ತಾಲೂಕು ಎಂದು ಘೋಷಿಸಬೇಕು. ಬರ ಕಾಮಗಾರಿ ಆರಂಭಿಸಿ ಬೆಳೆಗಳಿಗೆ ವೈಜ್ಞಾನಿಕ ಪರಿಹಾರ ನೀಡಬೇಕೆಂದು ಮಾಜಿ ಸಚಿವ ಗಾಲಿ ಕರುಣಾಕರರೆಡ್ಡಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಅವರು ನಗರದ ಆಚಾರ ಬಡಾವಣೆಯ ತಮ್ಮ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ 80 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಇದ್ದರೆ ಈವರೆಗೂ ಶೇ.10ರಷ್ಟು ಮಾತ್ರ ಬಿತ್ತನೆಯಾಗಿದೆ. ಬಿತ್ತಿದ ಬೆಳೆ ಸಹ ಒಣಗಿ ಹೋಗಿದೆ ಎಂದು ಅವರು ಹೇಳಿದರು.
ಇನ್ನು ಮೇಲೆ ಮಳೆ ಬಂದರೂ ಬೆಳೆ ಬರುವ ಲಕ್ಷಣಗಳು ಇಲ್ಲ. ರಾಜ್ಯ ಸರ್ಕಾರ ಕೂಡಲೇ ಹರಪನಹಳ್ಳಿ ತಾಲೂಕನ್ನು ಬರ ಪೀಡಿತ ಎಂದು ಘೋಷಿಸಿ ಎಕರೆಗೆ 50 ಸಾವಿರ ದಂತೆ ವೈಜ್ಞಾನಿಕ ಪರಿಹಾರ ನೀಡಬೇಕು ಎಂದ ಅವರು ರೈತರ ಸಾಲಮನ್ನಾ ಮಾಡಲು ಸಹ ಈ ಸಂದರ್ಭದಲ್ಲಿ ಒತ್ತಾಯಿಸಿದರು.
ತೋಟಗಾರಿಕೆ ಬೆಳೆ ಸಹ1500 ಹೆ ಗುರಿ ಇದ್ದು, ಸರಿಯಾಗಿ ಈರುಳ್ಳಿ ಸೇರಿದಂತೆ ಇತರ ಬೆಳೆಗಳು ನಾಟಿ ಆಗಿಲ್ಲ, ಅದೂ ಸಹ ಬೆಳೆ ನಷ್ಟವಾಗಿದೆ, ಅದಕ್ಕೂ ಪರಿಹಾರ ನೀಡಬೇಕು ಎಂದು ಹೇಳಿದರು.
ಅವಶ್ಯಕತೆ ಇರವಲ್ಲಿ ಗೋಶಾಲೆ ತೆರೆಯಬೇಕು, ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಬೇಕು ಎಂದ ಅವರು ಕುಡಿಯುವ ನೀರಿನ ಅಭಾವ ಉಂಟಾಗಿದ್ದು, ನಾನು ಶಾಸಕನಿದ್ದಾಗ ಪ್ರತಿ ಗ್ರಾಮಕ್ಕೂ ಕೊಳವೆ ಬಾವಿ ಕೊರೆಸಿ ನೀರಿನ ಅಭಾವ ಆಗದಂತೆ ನೋಡಿಕೊಂಡಿದ್ದೆ, ಇಂದು ತಾಲೂಕಿನ ವಿವಿಧೆಡೆ ಸಾಕಷ್ಟು ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ, ಸುಟ್ಟು ಹೋದ ರೈತರ ಪಂಪಸೆಟ್ ಗಳನ್ನು ಕೂಡಲೇ ಬದಲಾವಣೆ ಮಾಡುತ್ತಾ ಇಲ್ಲ ಎಂದು ಅವರು ದೂರಿದರು.
ತಾಲೂಕಿನಲ್ಲಿ ಬಹಳಷ್ಟು ಪಿಡಿಒಗಳ ಕೊರತೆ ಇದೆ, ಒಬ್ಬೊಬ್ಬರಿಗೆ 2-3 ಗ್ರಾ.ಪಂಗಳನ್ನು ನೀಡಲಾಗಿದೆ, ಇದರಿಂದ ಪಿಡಿಒಗಳಿಗೆ ಸಮರ್ಪಕವಾಗಿ ಕೆಲಸ ಮಾಡಲು ಆಗುತ್ತಾ ಇಲ್ಲ, ಜನರಿಗೂ ಸಹ ಸ್ಪಂದನೆ ಸಿಗುತ್ತಾ ಇಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿದರು.
ಎಸ್ ಐ ಆರ್ ಪ್ರಗತಿ ಕುಂಠಿತ -
ಈಗ ನಡೆಯುತ್ತಿರುವ ಮತದಾರರ ಪರಿಷ್ಕರಣೆ (ಎಸ್ ಐ ಆರ್ ) ಪ್ರಗತಿ ಬಹಳಷ್ಟು ನಿಧಾನಗತಿಯಲ್ಲಿ ಆಗುತ್ತಲಿದೆ, ಈವರೆಗೂ ಶೇ.62 ರಷ್ಟು ಮಾತ್ರ ಆಗಿದೆ, ಬಿಎಲ್ ಒಗಳು ಬಹಳಷ್ಟು ಜನ ಶಿಕ್ಷಕರಿದ್ದು, ಶಾಲೆಯಲ್ಲಿ ಪಾಠನೂ ಮಾಡುತ್ತಾ ಈ ಕಾರ್ಯ ಮಾಡುತ್ತಿರುವುದರಿಂದ ನಿಧಾನವಾಗುತ್ತಲಿದೆ, ಆದ್ದರಿಂದ ಸರ್ಕಾರ ಎಸ್ ಐ ಆರ್ ಗೆ ಪರ್ಯಾಯ ವ್ಯವಸ್ಥೆ ಮಾಡಿ ವೇಗ ಹೆಚ್ಚಿಸಬೇಕು, ಒಟ್ಟಿನಲ್ಲಿ ಬಿಎಲ್ ಒ ಗಳ ಗೊಂದಲ ಆಗಿವೆ, ಮತ ಪಟ್ಟಿಯಿಂದ ಯಾವ ಮತದಾರರು ವಂಚಿತವಾಗಬಾರದು ಎಂದು ಅವರು ನುಡಿದರು.
ತಾಲೂಕಿನಲ್ಲಿ ಎಲ್ಲಾ 50 ಕೆರೆಗಳಿಗೆ ನದಿ ನೀರು ತುಂಬಿಸಬೇಕು ಎಂದು ಅವರು ಒತ್ತಾಯಿಸಿದರು. ಸರ್ಕಾರ ಕೊಡಲು ಉದ್ದೇಶಿಸಿರುವ ಶಾಶ್ವತ ನಿವಾಸಿ ಪ್ರಮಾಣ ಪತ್ರ ಕೊಡಬಾರದು ಎಂದು ಒತ್ತಾಯಿಸಿದರು. ಎರಡೆತ್ತಿನಹಳ್ಳಿ, ಕೂಲಹಳ್ಳಿ ಕ್ರಾಸ್, ಬಂಡ್ರಿ ಗ್ರಾಮಗಳ ಬಳಿ ಒಣಗಿದ ಮೆಕ್ಕೆಜೋಳದ ಬೆಳೆ ವೀಕ್ಷಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಯಡಿಹಳ್ಳಿ ಶೇಖರಪ್ಪ, ಜಿಲ್ಲಾ ಘಟಕದ ಬಾಗಳಿ ಕೊಟ್ರೇಶಪ್ಪ, ಗುರುಲಿಂಗನಗೌಡ, ವಿಜಯಲಕ್ಷ್ಮಿ, ಲತಾ, ಕೊಟ್ರೇಶ, ಎರಡೆತ್ತಿನಹಳ್ಳಿ ಮಂಜುನಾಥ, ಪಂಪನಾಯ್ಕ, ಮಹೇಶ ಪೂಜಾರ, ಕಿರಣ್ ಶಾನ್ಬಾಗ್, ಜಾವೇದ್ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.