ದಾಂಡೇಲಿಯಲ್ಲಿ ನಡೆದ ಕನ್ನಡಪ್ರಭ, ಸುವರ್ಣ ನ್ಯೂಸ್‌ನಿಂದ ಚಿತ್ರಕಲಾ ಸ್ಪರ್ಧೆ
ದಟ್ಟಡವಿಯಲ್ಲಿ ಹುಲಿ, ಚಿರತೆ, ಜಿಂಕೆಗಳ ಸ್ವಚ್ಛಂದ ವಿಹಾರ, ಕಾಳಿ ನದಿಗೆ ಮುತ್ತಿಕ್ಕುವ ಸೂರ್ಯ... ಹೀಗೆ ಹಲವು ವಿಶೇಷತೆಗಳು ದಾಂಡೇಲಿ ರೋಟರಿ ಶಿಕ್ಷಣ ಸಂಸ್ಥೆ ಪ್ರೌಢಶಾಲೆಯ ವಿದ್ಯಾರ್ಥಿಗಳ ಕುಂಚದಲ್ಲಿ ಮೂಡಿಬಂದು ಬೆರಗು ಮೂಡಿಸಿದವು.
ಕನ್ನಡಪ್ರಭ- ಏಷ್ಯಾನೆಟ್ ಸುವರ್ಣನ್ಯೂಸ್ ರೋಟರಿ ಕ್ಲಬ್ ದಾಂಡೇಲಿ ಹಾಗೂ ರೋಟರಿ ಶಿಕ್ಷಣ ಸಂಸ್ಥೆ ದಾಂಡೇಲಿ ಸಹಯೋಗದಲ್ಲಿ ರೋಟರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆ ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು.ಕಾರ್ಯಕ್ರಮ ಉದ್ಘಾಟಿಸಿ ಬಹುಮಾನ ವಿತರಣೆ ಮಾಡಿದ ದಾಂಡೇಲಿ ಎಸಿಎಫ್ ಸಂತೋಷ್ ಚೌಹಾಣ, ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಹಮ್ಮಿಕೊಂಡಿರುವ ಚಿತ್ರಕಲೆ ಸ್ಪರ್ಧೆ ಯಶಸ್ವಿಯಾಗಿದೆ. ಇದರಿಂದ ಮಕ್ಕಳ ಸುಪ್ತ ಪ್ರತಿಭೆ ಹೊರಹೊಮ್ಮಲು ಅವಕಾಶವಾದಂತಾಗಿದೆ ಎಂದರು.
ರೋಟರಿ ಕ್ಲಬ್ ಕಾರ್ಯದರ್ಶಿ ಲಿಯೋ ಪಿಂಟೋ, ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದರು.
ಕನ್ನಡಪ್ರಭದ ಹಿರಿಯ ವಿಶೇಷ ವರದಿಗಾರ ವಸಂತಕುಮಾರ ಕತಗಾಲ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡಪ್ರಭ ಹಾಗೂ ಸುವರ್ಣನ್ಯೂಸ್, ವನ್ಯಜೀವಿಗಳು, ಅರಣ್ಯದ ಬಗ್ಗೆ ಜಾಗೃತಿ ಮೂಡಿಸಿ, ಮಕ್ಕಳ ಪ್ರತಿಭೆಯ ಅನಾವರಣಕ್ಕೆ ರಾಜ್ಯಮಟ್ಟದಲ್ಲಿ ವೇದಿಕೆ ಒದಗಿಸುತ್ತಿದೆ ಎಂದರು.
ಮುಖ್ಯಾಧ್ಯಾಪಕಿ ಕಲ್ಪನಾ ನಾಯಕ್ ಸ್ವಾಗತಿಸಿದರು. ರಾಹುಲ್ ಬಾವಾಜಿ ವಂದಿಸಿದರು. ಶಿಕ್ಷಕಿ ಅನಿತಾ ಇಳಗೇರ ಕಾರ್ಯಕ್ರಮ ನಿರ್ವಹಿಸಿದರು. ನಿರ್ಣಾಯಕರಾಗಿ ರವಿ ಶಾನಭಾಗ, ಮುಖ್ಯ ಶಿಕ್ಷಕಿ ಕಲ್ಪನಾ ನಾಯಕ್ ಕಾರ್ಯನಿರ್ವಹಿಸಿದರು.
8ನೇ ತರಗತಿ: ಮಯೂರಿ ಧರ್ಮರಾಜ ಥೋರವತ್ತ (ಪ್ರಥಮ), ಅಶ್ವಿನಿ ವಸಂತ ಕಾಲಕುಂದ್ರಿ (ದ್ವಿತೀಯ), ಜ್ಯೋತಿಶ್ರೀ ಪಾಲೇಕರ (ತೃತೀಯ).
10ನೇ ತರಗತಿ: ನೇತಿಕ್ ವಾಸು ಬೀರಬರ (ಪ್ರಥಮ), ವೈಷ್ಣವಿ ಚಂದ್ರಕಾಂತ ನರಸಾನಿ (ದ್ವಿತೀಯ)ಮಲ್ಲಿಕ ರಿಹಾನ್ ಭಾವನ್ನವರ್ (ತೃತೀಯ).