ಪ್ರಹ್ಲಾದ ರೆಡ್ಡಿ ಕನಕಗಿರಿ
ಕನಕಗಿರಿ ತಾಲೂಕಿನಲ್ಲಿ ಇಂಥದೊಂದು ಫಲಕ ಹಾಕುವುದಷ್ಟೇ ಬಾಕಿ. ಅಷ್ಟೊಂದು ಹದಗೆಟ್ಟಿದೆ ಇಲ್ಲಿನ ಆಡಳಿತ. ಅಕ್ರಮ ಮರುಳು ದಂಧೆ ಹಾಗೂ ಕಳ್ಳತನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹಗಲಲ್ಲಿ ರಾಜಾರೋಷವಾಗಿ ಇಸ್ಪೀಟ್ ನಡೆಯುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ.
ತಾಲೂಕಿನ ಈಚನಾಳ, ನವಲಿ, ಉದ್ಯಾಳ, ಯತ್ನಟ್ಟಿ, ಗುಡದೂರು, ಬುನ್ನಟ್ಟಿ, ಸಂಕನಾಳ, ಕ್ಯಾರಿಹಾಳ ಗ್ರಾಮಗಳ ಹಳ್ಳಗಳಲ್ಲಿ ಅಕ್ರಮ ಮರುಳು ದಂಧೆ ಎಗ್ಗಿಲ್ಲದೆ ಸಾಗಿದೆ. ಈ ದಂಧೆಗೆ ಬ್ರೇಕ್ ಹಾಕಲು ಜಿಲ್ಲಾಡಳಿತ ಕ್ರಮ ವಹಿಸಿದೆಯಾದರೂ ಅಧಿಕಾರಿಗಳ ಕಣ್ತಪ್ಪಿಯೂ ಅಕ್ರಮ ದಂಧೆ ನಡೆಯುತ್ತಿರುವುದು ನಿಂತಿಲ್ಲ.ಹನುಮನಾಳ ಗ್ರಾಮದ ಅಗಸಿಯಲ್ಲಿ ಹಗಲು, ರಾತ್ರಿ ಎನ್ನದೆ ಇಸ್ಪೀಟ್ ಆಟ ರಾಜಾರೋಷವಾಗಿ ನಡೆಯುತ್ತಿದೆ. ಅಂದರ್-ಬಾಹರ್ ಆಟದ ಪೋಟೋ, ವಿಡಿಯೋಗಳು ವೈರಲ್ ಆಗಿವೆ. ಆದರೂ ಯಾರೂ ತಲೆ ಕೆಡಿಸಿಕೊಂಡಿಲ್ಲ. ಮಾಮೂಲು ಪಡೆಯುವ ಪೊಲೀಸರೇ ಈ ದಂಧೆಯ ಹಿಂದಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಲಕ್ಷಗಟ್ಟಲೇ ಚಿನ್ನಾಭರಣ ಹಾಗೂ ನಗದನ್ನು ಈಗಾಗಲೇ ದೋಚಿರುವ ಕಳ್ಳರ ಗುಂಪು ಪೊಲೀಸರಿಗೆ ಸವಾಲೆಸೆದು ದಿನಕ್ಕೊಂದು ಗ್ರಾಮ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದಾರೆ. ತಾಲೂಕಿನೆಲ್ಲೆಡೆ ಕಳ್ಳರ ಗುಂಪೊಂದು ರಾತ್ರಿ ಸಮಯದಲ್ಲಿ ಕೈಚಳಕ ತೋರಿಸುತ್ತಿದ್ದು, ನಗರ ಮತ್ತು ಹಳ್ಳಿ ಜನರು ತೀವ್ರ ಆತಂಕದಲ್ಲಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಇಬ್ಬರು ಕಳ್ಳರು ಕಳ್ಳತನ ಮಾಡಿರುವ ಬಗ್ಗೆ ಈಗಾಗಲೇ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿ ಕೈ ತೊಳೆದುಕೊಂಡಿದ್ದಾರೆ.
₹8.50 ಲಕ್ಷ ಕಳವು : ತಾಲೂಕಿನ ನವಲಿ ವಿಎಸ್ಎಸ್ಎನ್ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿರುವ ಮಹಿಬೂಬುಸಾಬ್ ಪಿಂಜಾರ ಎಂಬಾತನ ಮನೆಯಲ್ಲಿದ್ದ 50 ಗ್ರಾಂ ಚಿನ್ನಾಭರಣ ಹಾಗೂ ₹1.50 ಲಕ್ಷ ನಗದನ್ನು ಫೆ.3ರ ಮಂಗಳವಾರ ತಡರಾತ್ರಿ ಕಳ್ಳರು ದೋಚಿ ಪರಾರಿಯಾಗಿದ್ದಾರೆ. ನೆಕ್ಲೆಸ್, ಉಂಗುರ, ಮಂಗಳಸೂತ್ರ, ತಾಳಿ, ಎರಡು ಜೊತೆ ಕಿವಿಯೋಲೆ ಆಭರಣಗಳು ಕಳ್ಳತನವಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಸ್ಥಳೀಯ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.