ಕನ್ನಡಪ್ರಭ ವಾರ್ತೆ ಬಳ್ಳಾರಿ
ನಗರ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಅವರ ಜನ್ಮದಿನಕ್ಕೆ ಶುಭ ಕೋರಲು ನಗರದಲ್ಲಿ ಫ್ಲೆಕ್ಸ್ ಹಾಕಿಸಿಕೊಂಡಿರುವ ಉದ್ಯಮಿ ಬಿ. ಸತ್ಯಬಾಬು ಎಂಬವರ ಕೊರಳಿನಲ್ಲಿ ಹುಲಿ ಉಗುರಿನ ರೀತಿಯ ಲಾಕೆಟ್ ಹಾಕಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದ್ದು, ವೈರಲ್ ಆಗಿದೆ. ಕುರುಗೋಡು ತಾಲೂಕಿನ ವದ್ದಟ್ಟಿ ಕ್ರಾಸ್ ಕ್ಯಾಂಪ್‌ನ ಮೂಲ ನಿವಾಸಿ, ಉದ್ಯಮಿ ಬಿ. ಸತ್ಯಬಾಬು ಎಂಬವರು ನಗರದ ವಿವಿಧೆಡೆಗಳಲ್ಲಿ ಶಾಸಕರ ಜನ್ಮದಿನಕ್ಕೆ ಶುಭಾಶಯ ಕೋರಲು ಫ್ಲೆಕ್ಸ್‌ಗಳನ್ನು ಹಾಕಿಸಿದ್ದಾರೆ. ಸತ್ಯಬಾಬು ಅವರ ಕೊರಳಲ್ಲಿ ಹುಲಿ ಉಗುರು ರೀತಿ ಕಂಡುಬರುವ ಲಾಕೆಟ್ ಇದೆ.ಈ ಉದ್ಯಮಿ ಕೊರಳಲ್ಲಿರುವ ಚಿನ್ನದ ಸರದಲ್ಲಿರುವ ಹುಲಿ ಉಗುರಿನ ಲಾಕೆಟ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಳ್ಳಾರಿಯ ಉದ್ಯಮಿಯ ವಿರುದ್ಧ ಅರಣ್ಯ ಇಲಾಖೆಯ ಅಧಿಕಾರಿಗಳು ಕ್ರಮ ಜರುಗಿಸುವುದು ಯಾವಾಗ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.