ಪಾರಂಪರಿಕ ವೈದ್ಯ ಪದ್ಧತಿ ಹೆಚ್ಚು ಪರಿಚಯಿಸಿ

KannadaprabhaNewsNetwork | Published : Oct 27, 2023 12:30 AM

ಸಾರಾಂಶ

ಪಾರಂಪರಿಕ ವೈದ್ಯ ಪದ್ಧತಿ ಹೆಚ್ಚು ಪರಿಚಯಿಸಿಮೂರು ದಿನಗಳ ಪಾರಂಪರಿಕ ವೈದ್ಯರ ರಾಷ್ಟ್ರೀಯ ಮತ್ತು 14ನೇ ರಾಜ್ಯ ಸಮ್ಮೇಳನಕ್ಕೆಆರೋಗ್ಯ ಖಾತೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ
- ಆರೋಗ್ಯ ಖಾತೆ ಸಚಿವ ದಿನೇಶ್ ಗುಂಡೂರಾವ್ - ಮೂರು ದಿನಗಳ ಪಾರಂಪರಿಕ ವೈದ್ಯರ ರಾಷ್ಟ್ರೀಯ ಮತ್ತು 14ನೇ ರಾಜ್ಯ ಸಮ್ಮೇಳನಕ್ಕೆ ಚಾಲನೆ ಕನ್ನಡಪ್ರಭ ವಾರ್ತೆ ನಾಗಮಂಗಲ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಚಿಕಿತ್ಸಾ ವಿಧಾನ ಬಂದಿದ್ದರೂ ಸಹ ಸಾವಿರಾರು ವರ್ಷಗಳ ಜ್ಞಾನ ಸಂಪತ್ತು ಹೊಂದಿರುವ ಪಾರಂಪರಿಕ ವೈದ್ಯ ಪದ್ಧತಿ ಕಳೆದುಕೊಳ್ಳದೆ ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ ಎಂದು ಆರೋಗ್ಯ ಖಾತೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ತಾಲೂಕಿನ ಅದಿಚುಂಚನಗಿರಿ ಮಠದ ಬಿಜಿಎಸ್ ಸಭಾ ಭವನದಲ್ಲಿ ಅದಿಚುಂಚನಗಿರಿ ಮಹಾ ಸಂಸ್ಥಾನಮಠ ಹಾಗೂ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಸಹಭಾಗಿತ್ವದಲ್ಲಿ ಗುರುವಾರ ಆರಂಭಗೊಂಡ ಮೂರು ದಿನಗಳ ಕಾಲ ನಡೆಯುವ ಪಾರಂಪರಿಕ ವೈದ್ಯರ ರಾಷ್ಟ್ರೀಯ ಮತ್ತು 14ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಂದು ಕ್ಷೇತ್ರದಲ್ಲಿಯೂ ಒಂದೊಂದು ಪದ್ಧತಿ ಇರುತ್ತದೆ. ಅದರ ಬಗ್ಗೆ ಪೂರ್ಣಪ್ರ ಮಾಣದಲ್ಲಿ ತಿಳಿದುಕೊಂಡು ಹೆಜ್ಜೆ ಇಡಬೇಕು. ತಿಳಿದುಕೊಳ್ಳುವ ಮುನ್ನ ಪೂರ್ವಗ್ರಹ ಪೀಡಿತರಾಗಿ ತೀರ್ಮಾನಿಸಬಾರದು ಎಂದರು. ಶತ ಶತಮಾನಗಳ ರಾಜ ಮಹಾರಾಜರ ಕಾಲದಲ್ಲಿ, ಋಷಿ ಮುನಿಗಳ ಕಾಲದಲ್ಲಿ ಅನಾರೋಗ್ಯ ಬಂದಾಗ ಪಾರಂಪರಿಕ ವೈದ್ಯ ಚಿಕಿತ್ಸೆಯೇ ಮದ್ದಾಗಿತ್ತು. ಪಾರಂಪರಿಕ ವೈದ್ಯ ಲೋಕಕ್ಕೆ ಸಾವಿರಾರು ವರ್ಷಗಳ ಜ್ಞಾನ ಸಂಪತ್ತಿದೆ. ನಮ್ಮ ತಾಯಿಯ ತಂದೆಯೂ ಸಹ ಪಾರಂಪರಿಕ ವೈದ್ಯರಾಗಿದ್ದರು ಎಂದರು. ಪ್ರಸ್ತುತ ಅಲೋಪತಿ ಚಿಕಿತ್ಸೆ ಇದೆ. ಅವರಿಗೆ ಸರ್ಟಿಫಿಕೇಟ್ ಕೂಡ ಕೊಟ್ಟಿದ್ದೇವೆ. ಅಂದಾಕ್ಷಣ ಅವರೆಲ್ಲರೂ ಸರಿ ಎನ್ನಲಾಗದು. ಒಬ್ಬ ವ್ಯಕ್ತಿ ಆಸ್ಪತ್ರೆಗೆ ಹೋದರೆ ಎಷ್ಟು ಹಣ ಖರ್ಚಾಗುತ್ತಿದೆ. ಎಷ್ಟು ದುರ್ಬಳಕೆಯಾಗುತ್ತಿದೆ ಹಾಗೂ ಏನೆಲ್ಲಾ ಸಮಸ್ಯೆ ಎದುರಿಸುತ್ತಿದ್ದೇವೆ ಎಂಬುದು ನಮಗೆ ಗೊತ್ತಿದೆ ಎಂದರು. ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಚಿತ್ರದುರ್ಗದ ಮಾದಾರ ಚನ್ನಯ್ಯಸ್ವಾಮೀಜಿ, ಹಂಪಿಯ ಹೇಮಕೂಟ ಗಾಯತ್ರಿ ಪೀಠದ ದಯಾನಂದಪುರಿ ಸ್ವಾಮೀಜಿ ಹಾಗೂ ಪಾರಂಪರಿಕ ವೈದ್ಯ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷ ನೇರ್ಲಿಗೆ ಗುರುಸಿದ್ದಪ್ಪ, ಪರಿಷತ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ಮಾತನಾಡಿದರು. ಇದೇ ವೇಳೆ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಗಣನೀಯ ಸೇವೆ ಸಲ್ಲಿಸಿರುವ ವಿಜಯಪುರದ ಯಮನಪ್ಪ ಹಣಮಂತ್ರಾಯ ಬಳವಾಟ, ಕೋಲಾರದ ಮುಳಬಾಗಿಲಿನ ಎಚ್.ರಾಮಚಂದ್ರಪ್ಪ, ಚಿತ್ರದುರ್ಗದ ಕೆ.ಸುದರ್ಶನ್, ಬೆಂಗಳೂರು ಗ್ರಾಮಾಂತರದ ಎಂ.ಗೋಪಾಲಕೃಷ್ಣ ಹಾಗೂ ಶಿವಮೊಗ್ಗ ಜಿಲ್ಲೆ ಸೊರಬದ ನಾಗಪ್ಪಗೌಡ ಅವರಿಗೆ ಪಾರಂಪರಿಕ ವೈದ್ಯ ರತ್ನ ಪ್ರಶಸ್ತಿ ನೀಡಿ ನಿರ್ಮಲಾನಂದನಾಥ ಶ್ರೀಗಳು ಹಾಗೂ ಗಣ್ಯರು ಗೌರವಿಸಿದರು. ಇದಕ್ಕೂ ಮುನ್ನ ಶ್ರೀಮಠದ ಬಿಂದು ಸರೋವರದ ಆವರಣದಲ್ಲಿ ಆಯೋಜಿಸಿದ್ದ ಗಿಡಮೂಲಿಕೆಗಳಿಂದ ತಯಾರಿಸಿದ್ದ ಪಾರಂಪರಿಕ ವೈದ್ಯ ಪದ್ಧತಿಯ ಔಷಧಿಗಳ ವಸ್ತು ಪ್ರದರ್ಶನವನ್ನು ಶ್ರೀಗಳು ಮತ್ತು ಗಣ್ಯರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ರಾಜ್ಯಾಧ್ಯಕ್ಷ ಜಿ.ಮಹದೇವಯ್ಯ ಅಧ್ಯಕ್ಷತೆ ವಹಿಸಿದ್ದರು. ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಕಲಬುರ್ಗಿಯ ಸವಿತಾ ಸಮಾಜದ ಪೀಠಾಧ್ಯಕ್ಷ ಸವಿತಾನಂದನಾಥ ಸ್ವಾಮೀಜಿ, ಬಸವಕಲ್ಯಾಣದ ದತ್ತಾತ್ರಿ ಆಶ್ರಮದ ಬಸವರಾಜ ಮಹಾರಾಜ್, ಪರಿಷತ್‌ನ ಸಂಸ್ಥಾಪಕರಾದ ಗಾ.ನಂ.ಶ್ರೀಕಂಠಯ್ಯ, ಹರಿನಾಮೂರ್ತಿ, ಡಾ.ಸತ್ಯನಾರಾಯಣಭಟ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್, ಆದಿಚುಂಚನಗಿರಿ ವೈದ್ಯಕೀಯ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು, ಬಿಜಿಎಸ್ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು ಸೇರಿದಂತೆ ಸಾವಿರಾರು ಮಂದಿ ಪಾರಂಪರಿಕ ವೈದ್ಯರು ಮತ್ತು ವಿದ್ಯಾರ್ಥಿಗಳು ಇದ್ದರು. ಕೋಟ್‌.... ಪಾರಂಪರಿಕ ವೈದ್ಯ ವೃತ್ತಿಗೆ ಪ್ರಾತಿನಿಧ್ಯ ಕೊಟ್ಟ ನಂತರ ನಿಮ್ಮಲ್ಲಿ ದುರ್ಬಳಕೆಯಾಗದಂತೆ ಯಾರು ಅಸಲಿ, ಯಾರು ನಕಲಿ ಎಂಬುದನ್ನು ಗುರುತಿಸಲು ನಿಯಮಾವಳಿ ರಚಿಸೋಣ. ಅಸಂಘಟಿತರಾಗಿರುವ ಪಾರಂಪರಿಕ ವೈದ್ಯರಿಗೆ ಸ್ಪಷ್ಟವಾಗಿ ಒಂದು ನಿಲುವಳಿ ತಯಾರಿಸಿ ಸಂಘಟಿಸಲು ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಪಾರಂಪರಿಕ ವೈದ್ಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. - ದಿನೇಶ್ ಗುಂಡೂರಾವ್ ಆರೋಗ್ಯ ಖಾತೆ ಸಚಿವ 26ಕೆಎಂಎನ್ ಡಿ23 ಅದಿಚುಂಚನಗಿರಿ ಮಠದ ಬಿಜಿಎಸ್ ಸಭಾ ಭವನದಲ್ಲಿ ನಡೆದ ಪಾರಂಪರಿಕ ವೈದ್ಯರ ರಾಷ್ಟ್ರೀಯ ಮತ್ತು 14ನೇ ರಾಜ್ಯ ಸಮ್ಮೇಳನದಲ್ಲಿ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಗಣನೀಯ ಸೇವೆ ಸಲ್ಲಿಸಿದ 5 ಮಂದಿ ಸಾಧಕರಿಗೆ ಪಾರಂಪರಿಕ ವೈದ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Share this article