- ರೋಟರಿ ಬಾಲಭವನದಲ್ಲಿ ಸಿಪಿಐ ಜಿಲ್ಲಾ ಘಟಕದಿಂದ ಶತಮಾನೋತ್ಸವ ಸಂಘಟನಾ ಸಮಾವೇಶ- ಬಹಿರಂಗ ಸಭೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆದುಡಿಯುವ ವರ್ಗದವರ ಮೊಟ್ಟಮೊದಲ ರಾಜಕೀಯ ಪಕ್ಷವಾಗಿ ಹುಟ್ಟಿದ ಭಾರತೀಯ ಕಮ್ಯುನಿಷ್ಟ್ ಪಕ್ಷ ಈಗ ಶತಮಾನವನ್ನು ಕಳೆಯುತ್ತಿದೆ. ಲೋಕಸಭೆಯಲ್ಲಿ ನಮಗೆ ಶಕ್ತಿ ಇಲ್ಲದಿದ್ದರೂ ಬೀದಿ ಬೀದಿಗಳಲ್ಲಿ ಹೋರಾಡುವ ಶಕ್ತಿಯನ್ನು ಪಕ್ಷ ಕಾಯ್ದುಕೊಂಡೇ ಬಂದಿದೆ ಎಂದು ಹೊಸತು ಪತ್ರಿಕೆ ಸಂಪಾದಕ ಡಾ.ಸಿದ್ದನಗೌಡ ಪಾಟೀಲ ಹೇಳಿದರು.
ನಗರದ ರೋಟರಿ ಬಾಲಭವನದಲ್ಲಿ ಮಂಗಳವಾರ ಸಿಪಿಐ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಪಕ್ಷದ ಶತಮಾನೋತ್ಸವ ಸಂಘಟನಾ ಸಮಾವೇಶ ಹಾಗೂ ಬಹಿರಂಗ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಕಮ್ಯುನಿಷ್ಟ್ ಪಕ್ಷ ವಿಪಕ್ಷದಲ್ಲಿತ್ತು. ಆದರೆ, ಕ್ರಮೇಣ ಪಕ್ಷ ರಾಜಕೀಯ ನೆಲೆ ಕಳೆದುಕೊಳ್ಳುತ್ತಾ ಬಂದಿತು. ಪ್ರಾಮಾಣಿಕರು ಚುನಾವಣೆಗಳಲ್ಲಿ ಗೆಲ್ಲುತ್ತಿದ್ದ ಕಾಲವು ಈಗ ಕಾಲವಾಗಿ, ಹಣವುಳ್ಳವರಷ್ಟೇ ಚುನಾವಣೆ ಗೆಲ್ಲುತ್ತಿರುವ ಕಾಲ ಬಂದಿದೆ. ಜಾತಿ, ಧರ್ಮದ ರಾಜಕಾರಣವೇ ಪ್ರಧಾನವಾಗಿದೆ. ಶ್ರೀಮಂತರು, ಉಳ್ಳವರಷ್ಟೇ ರಾಜಕಾರಣಿ, ಜನಪ್ರತಿನಿಧಿ ಆಗಬೇಕೆಂಬ ಸನ್ನಿವೇಶದಲ್ಲಿ ನಾವಿದ್ದೇವೆ ಎಂದು ವಿಷಾದಿಸಿದರು.ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ:
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 2026ರಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಜಾರಿಗೆ ಮುಂದಾಗಿದೆ. ಕೇಂದ್ರದ ವಿರುದ್ಧ ಮಾತನಾಡುವ, ಹೋರಾಟ ಮಾಡುವವರನ್ನು ತುಳಿಯುವುದೇ ಮಾರಕ ಕಾಯ್ದೆ ಉದ್ದೇಶವಾಗಿದೆ. ಇದರ ವಿರುದ್ಧ ಪ್ರತಿಯೊಬ್ಬರೂ ಧ್ವನಿ ಎತ್ತಬೇಕು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮತಾಂಧ ಪಕ್ಷಗಳು ಮತಗಳ್ಳತನದಂಥ ಪ್ರಜಾಪ್ರಭುತ್ವ ವಿರೋಧಿ ಕಾರ್ಯದಲ್ಲಿ ಮಗ್ನವಾಗಿವೆ. ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗವನ್ನೇ ಬಿಜೆಪಿ ತನ್ನ ಗುಲಾಮನ್ನಾಗಿ ಮಾಡಿಕೊಂಡಿರುವುದು ದುರಂತ ಎಂದರು.ಬೇರೆ ಪ್ರದೇಶದ ಜನರನ್ನು ಇಲ್ಲಿಗೆ ಕರೆ ತಂದು, ಅಂತಹವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿ, ಚುನಾವಣೆಯನ್ನು ಗೆಲ್ಲುತ್ತಿದ್ದಾರೆ. ಬಿಹಾರದಲ್ಲೂ ಮೊನ್ನೆ ಅಂತಹದ್ದೇ ಘನಂದಾರಿ ಕೆಲಸಗಳನ್ನು ಮಾಡಲಾಗಿದೆ. ಚುನಾವಣಾ ಆಯೋಗದ ಅಧ್ಯಕ್ಷರು ಬಿಜೆಪಿಯ ಗುಲಾಮರಾಗಿದ್ದಾರೆ. ಹಾಗಾಗಿಯೇ ಭಾರತ ಕಮ್ಯುನಿಷ್ಟ್ ಪಕ್ಷವು ಚುನಾವಣಾ ಆಯೋಗ ರಕ್ಷಿಸಿ ಅಭಿಯಾನ ದೇಶವ್ಯಾಪಿ ಕೈಗೊಳ್ಳುತ್ತಿದೆ. ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ಸ್ವಾಯತ್ತತೆ ಕಾಪಾಡುವ ಜೊತೆಗೆ ಆಡಳಿತ ಪಕ್ಷ ಬಿಜೆಪಿ ಕಪಿಮುಷ್ಟಿಯಿಂದ ಆಯೋಗ ರಕ್ಷಿಸುವಂತೆ ನಮ್ಮ ಹೋರಾಟ ನಡೆಯಲಿದೆ ಎಂದು ಡಾ.ಸಿದ್ದನಗೌಡ ಪಾಟೀಲ್ ತಿಳಿಸಿದರು.
ಪಕ್ಷದ ರಾಜ್ಯ ಮಂಡಳಿ ಸಹ ಕಾರ್ಯದರ್ಶಿ ಡಿ.ಎ. ವಿಜಯ ಭಾಸ್ಕರ್ ಮಾತನಾಡಿ, ಧರ್ಮಸ್ಥಳದಲ್ಲಿ ಅನೇಕ ಯುವತಿಯರು, ಮಹಿಳೆಯರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ದೂರು ನೀಡಿದರೆ ಅಲ್ಲಿನ ಪೊಲೀಸರು ಯಾಕೆ ಪ್ರಕರಣ ದಾಖಲು ಮಾಡಿಕೊಳ್ಳುವುದಿಲ್ಲ. ಯಾರಾದರೂ ದೂರು ಕೊಡಲು ಹೋದರೆ ಅಂತಹ ವ್ಯಕ್ತಿಗಳೇ ಕಣ್ಮರೆಯಾಗುತ್ತಾರೆ. ಧರ್ಮಸ್ಥಳಕ್ಕೆ ಓದಲು ಹೋಗುವುದು ಬಡವರ ಮಕ್ಕಳೇ ಹೊರತು ಸಂಸದರು, ಸಾಸಕರು, ಸಚಿವರ ಮಕ್ಕಳಲ್ಲ. ಅಲ್ಲಿನ ಹಾಸ್ಟೆಲ್‌ನಲ್ಲಿ ಅದೆಷ್ಟೋ ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಎಲ್ಲದರ ಬಗ್ಗೆ ತನಿಖೆ ಕೈಗೊಂಡರೆ ಬಿಜೆಪಿಯ ಸನಾತನ ಧರ್ಮದ ವಿರುದ್ಧ ಅಪಪ್ರಚಾರ ನಡೆದಿದೆಯಂದು ಬೊಬ್ಬಿಡುತ್ತಾರೆ ಎಂದು ಟೀಕಿಸಿದ ಅವರು, ರಾಜ್ಯದ ಗೃಹ ಸಚಿವರು ಧರ್ಮಸ್ಥಳದ ಪಾವಿತ್ರ್ಯತೆ ಕಾಪಾಡಲು ಎಸ್ಐಟಿ ರಚಿಸಿದ್ದೇವೆ ಎನ್ನುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.ಪಕ್ಷದ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಆವರಗೆರೆ ಎಚ್.ಜಿ.ಉಮೇಶ. ಕೆ.ಜಿ.ಶಿವಮೂರ್ತಿ, ಜಿ.ಯಲ್ಲಪ್ಪ, ಎಸ್.ಎಸ್.ಮಲ್ಲಮ್ಮ, ಸರೋಜಾ, ಸುರೇಶ ಯರಗುಂಟೆ, ಇಪ್ಟಾದ ಐರಣಿ ಚಂದ್ರು, ಅಮ್ಜದ್, ಬಾನಪ್ಪ ಇತರರು ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಸಿಪಿಐ ಕಚೇರಿ ಬಳಿ ಗಾಂಧಿ ವೃತ್ತದಿಂದ ಮೆರವಣಿಗೆ ಆರಂಭವಾಗಿ, ಸಮಾರಂಭ ಸ್ಥಳ ತಲುಪಿತು.
- - -(ಕೋಟ್) ಜಾತ್ಯತೀತ ನೆಲವನ್ನು, ದೇಶವನ್ನು ಕಟ್ಟಲು ಸಮನಾಗಿರುವ ಸಮಾಜವಾದಿ ದೇಶವನ್ನು ಕಟ್ಟಲು ಎಲ್ಲರೂ ಒಗ್ಗಟ್ಟಿನಿಂದ, ಒಟ್ಟಿಗೆ ಕೂಡಿ ಬಾಳುವಂತಹ ಸಮಾಜವನ್ನು ಕಟ್ಟಲು ನಾವು, ನೀವೆಲ್ಲರೂ ಪಣ ತೊಡಬೇಕಾಗಿದೆ. ಇದುವೇ ಭಾರತ ಕಮ್ಯುನಿಷ್ಟ್ ಪಕ್ಷದ ಸ್ಥಾಪನೆ ಶತಮಾನೋತ್ಸವ ಸಂಭ್ರಮಕ್ಕೆ ನಮಗೆ ನೀಡಿರುವ ಜವಾಬ್ಧಾರಿಯಾಗಿದೆ.
- ಡಾ.ಸಿದ್ದನಗೌಡ ಪಾಟೀಲ, ಸಂಪಾದಕ, ಹೊಸತು ಪತ್ರಿಕೆ.- - -
-19ಕೆಡಿವಿಜಿ7, 8:ದಾವಣಗೆರೆಯಲ್ಲಿ ಸಿಪಿಐ ಶತಮಾನೋತ್ಸವದ ಸಂಘಟನಾ ಸಮಾವೇಶ, ಬಹಿರಂಗ ಸಭೆಯನ್ನು ಡಾ.ಸಿದ್ದನಗೌಡ ಪಾಟೀಲ, ಡಿ.ಎ.ವಿಜಯ ಭಾಸ್ಕರ್ ಅವರು ಹುತಾತ್ಮರ ಸ್ಮಾರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. -19ಕೆಡಿವಿಜಿ9, 10.ಜೆಪಿಜಿ:
ದಾವಣಗೆರೆಯಲ್ಲಿ ಸಿಪಿಐ ಶತಮಾನೋತ್ಸವದ ಸಂಘಟನಾ ಸಮಾವೇಶ, ಬಹಿರಂಗ ಸಭೆಗೆ ಮುನ್ನ ಪಕ್ಷ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಪದಾಧಿಕಾರಿಗಳು, ಮುಖಂಡರು, ದುಡಿಯುವ ವರ್ಗದವರು ಪಾಲ್ಗೊಂಡಿದ್ದರು.