- ಸಮಾಜದ ಬೇಡಿಕೆಗಳ ಬಗ್ಗೆ ಅಸಡ್ಡೆ ಬೇಡ: ಬಿ.ವೀರಣ್ಣ - - -
ಕನ್ನಡಪ್ರಭ ವಾರ್ತೆ ದಾವಣಗೆರೆನಾಯಕ ಸಮುದಾಯದ ಹಿರಿಯರಾದ ಕೆ.ಎನ್.ರಾಜಣ್ಣ, ಯುವ ಮುಖಂಡ ನಾಗೇಂದ್ರ ಅವರನ್ನು ಮರಳಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು. ಇಲ್ಲವಾದರೆ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು. ಈ ಎಚ್ಚರಿಕೆಯನ್ನು ಹೈಕಮಾಂಡ್ ಉದಾಸೀನ ಮಾಡಬಾರದು ಎಂದು ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ.ವೀರಣ್ಣ ನೇತೃತ್ವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಮುಖಾಂತರ ಮನವಿ ಸಲ್ಲಿಸಿದರು.
ಮುಖಂಡ ಬಿ.ವೀರಣ್ಣ ಮಾತನಾಡಿ, ವಾಲ್ಮೀಕಿ ನಾಯಕ ಸಮುದಾಯದ ಶೇ.100ರಷ್ಟು ಮತದಾರರು ಕಾಂಗ್ರೆಸ್ ಪಕ್ಷವನ್ನೇ ಈ ಸಲ ಬೆಂಬಲಿಸಿದ್ದಾರೆ. ಇದರಿಂದ 15 ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರಗಳಲ್ಲಿ 14 ಕಾಂಗ್ರೆಸ್ ಶಾಸಕರು ಮತ್ತು ಲೋಕಸಭಾ ಚುನಾವಣೆಯ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸಂಸದರು ಆಯ್ಕೆಯಾಗಲು ಸಾಧ್ಯವಾಗಿದೆ ಎಂದರು.ಸಾಮಾನ್ಯ ಕ್ಷೇತ್ರವೊಂದರಿಂದ ಓರ್ವ ಪರಿಶಿಷ್ಟ ಪಂಗಡದ ಅಭ್ಯರ್ಥಿ ಹಾಗೂ 2 ವಿಧಾನ ಪರಿಷತ್ತು ಸ್ಥಾನಗಳಲ್ಲಿ ಕಾಂಗ್ರೆಸ್ಸಿನ ಎಸ್.ಟಿ. ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ. ರಾಜ್ಯದಲ್ಲಿ ವಾಲ್ಮೀಕಿ ಜನಾಂಗ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದರಿಂದ 140 ಶಾಸಕರು ಆಯ್ಕೆಯಾಗಿ ಸರ್ಕಾರ ರಚಿಸುವಂತಾಗಿದೆ. ಹೀಗಿದ್ದರೂ ಮೊದಲಿಗೆ ನಾಗೇಂದ್ರ, ನಂತರ ಕೆ.ಎನ್.ರಾಜಣ್ಣಗೆ ಸಚಿವ ಸಂಪುಟದಿಂದ ಕೈಬಿಟ್ಟಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಈ ಹಿಂದೆ ಬಿಜೆಪಿಯಿಂದ ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿ ಮಾಡುತ್ತಾರೆಂಬ ಕಾರಣಕ್ಕೆ ಬಿಜೆಪಿ ಅಧಿಕಾರ ಹಿಡಿಯಲು ಸಾಧ್ಯವಾಗಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಮೇಶ ಜಾರಕಿಹೊಳಿಗೆ ತೊಂದರೆ ನೀಡಿ, ಸಂಪುಟದಿಂದ ಕೈಬಿಟ್ಟಿತು. ಶ್ರೀರಾಮುಲಗೂ ಕೊನೆಯವರೆಗೂ ಉಪ ಮುಖ್ಯಮಂತ್ರಿ ಮಾಡಲೇ ಇಲ್ಲ. ಈಗ ಕೆ.ಎನ್. ರಾಜಣ್ಣಗೆ ಕ್ಷುಲ್ಲಕ ಕಾರಣಕ್ಕೆ ಸಂಪುಟದಿಂದ ವಜಾ ಮಾಡಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸಮಾಜದ ಜಿಲ್ಲಾ ಉಪಾಧ್ಯಕ್ಷ, ಹಿರಿಯ ವಕೀಲ ನೀಲಾನಹಳ್ಳಿ ಎನ್.ಎಂ.ಆಂಜನೇಯ, ಕಾರ್ಯದರ್ಶಿ ಶ್ಯಾಗಲೆ ಕೆ.ಆರ್.ಮಂಜುನಾಥ, ಎಪಿಎಂಸಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಮುದೇಗೌಡರ ಗಿರೀಶ, ಗುಮ್ಮನೂರು ಶಂಬಣ್ಣ, ಎಸ್.ಕೆ.ಸ್ವಾಮಿ, ಕೆ.ಕೆ.ರಂಗಸ್ವಾಮಿ, ದೇವರಬೆಳಕೆರೆ ಪೈಲ್ವಾನ್ ಮಹೇಶ್ವರಪ್ಪ, ಎಂ.ಬಿ ಕೇರಿ ನರಸಿಂಹರಾಜು, ಸಿರಿಗೆರೆ ರಂಗಪ್ಪ, ಕಂಪ್ಲೇಶ, ಬಾಳಪ್ಪ, ಸುರೇಶ್ ಬಾಬು, ಕೊಡಗನೂರು ಸತೀಶ ಇತರರು ಇದ್ದರು.
- - --19ಕೆಡಿವಿಜಿ4: ದಾವಣಗೆರೆಯಲ್ಲಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ.ವೀರಣ್ಣ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲರು, ಮುಖ್ಯಮಂತ್ರಿಗೆ ಮನವಿ ಅರ್ಪಿಸಲಾಯಿತು.