ದುಃಸ್ಥಿತಿಯಲ್ಲಿದ್ದ ಸರ್ಕಾರಿ ಶಾಲೆಗೆ ಹೊಸತನ ಸ್ಪರ್ಶ

KannadaprabhaNewsNetwork |  
Published : Nov 18, 2025, 02:15 AM IST
ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗ್ರಂಥಾಲಯ | Kannada Prabha

ಸಾರಾಂಶ

ಜಮಖಂಡಿ: ಮೂಲಸೌಲಭ್ಯಗಳ ಕೊರತೆ, ಖಾಸಗಿ ಶಾಲೆಗಳ ಪೈಪೋಟಿ, ಸರ್ಕಾರಿ ಶಾಲೆಯೆಂಬ ನಿರ್ಲಕ್ಷ್ಯದ ಪರಿಣಾಮ ಸರ್ಕಾರಿ ಶಾಲೆ ತನ್ನ ಗತವೈಭವ ಕಳೆದುಕೊಂಡು ಮಕ್ಕಳ ಹಾಜರಾತಿ ಕಡಿಮೆಯಾಗುತ್ತ ಅವಸಾನದ ಅಂಚಿಗೆ ಬಂದು ತಲುಪಿತ್ತು. ಶಾಲೆಯ ಈ ದುಃಸ್ಥಿತಿ ಕಂಡ ಗೆಳೆಯರ ಬಳಗ ನಮ್ಮೂರ ಸರ್ಕಾರಿ ಶಾಲೆ ಉಳಿಸಿಕೊಳ್ಳಬೇಕೆಂದು ಪಣತೊಟ್ಟ ಪರಿಣಾಮ ಇಂದು ಆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಾಲೂಕಿನಲ್ಲಿಯೇ ಮಾದರಿ ಶಾಲೆಯೆಂದು ಗುರುತಿಸಿಕೊಂಡಿದೆ.

ಕೇಶವ ಕುಲಕರ್ಣಿ

ಕನ್ನಡಪ್ರಭ ವಾರ್ತೆ ಜಮಖಂಡಿಮೂಲಸೌಲಭ್ಯಗಳ ಕೊರತೆ, ಖಾಸಗಿ ಶಾಲೆಗಳ ಪೈಪೋಟಿ, ಸರ್ಕಾರಿ ಶಾಲೆಯೆಂಬ ನಿರ್ಲಕ್ಷ್ಯದ ಪರಿಣಾಮ ಸರ್ಕಾರಿ ಶಾಲೆ ತನ್ನ ಗತವೈಭವ ಕಳೆದುಕೊಂಡು ಮಕ್ಕಳ ಹಾಜರಾತಿ ಕಡಿಮೆಯಾಗುತ್ತ ಅವಸಾನದ ಅಂಚಿಗೆ ಬಂದು ತಲುಪಿತ್ತು. ಶಾಲೆಯ ಈ ದುಃಸ್ಥಿತಿ ಕಂಡ ಗೆಳೆಯರ ಬಳಗ ನಮ್ಮೂರ ಸರ್ಕಾರಿ ಶಾಲೆ ಉಳಿಸಿಕೊಳ್ಳಬೇಕೆಂದು ಪಣತೊಟ್ಟ ಪರಿಣಾಮ ಇಂದು ಆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಾಲೂಕಿನಲ್ಲಿಯೇ ಮಾದರಿ ಶಾಲೆಯೆಂದು ಗುರುತಿಸಿಕೊಂಡಿದೆ.

ಹಿಪ್ಪರಗಿ ಗ್ರಾಮದ ಸರ್ಕಾರಿ ಶಾಲೆ ಮೂಲಸೌಕರ್ಯಗಳಿಂದ ವಂಚಿತವಾಗಿತ್ತು. ಮಕ್ಕಳ ಸಂಖ್ಯೆ ನಿರಂತರವಾಗಿ ಕುಸಿಯುತ್ತ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಚ್ಚುವ ಹಂತಕ್ಕೆ ಬಂದಿತ್ತು. ಗ್ರಾಮದ ಗೆಳೆಯರ ಬಳಗದವರು ಶಾಲೆಯ ಅಧೋಗತಿ ಕಂಡು ತೀವ್ರ ಕಳವಳಗೊಂಡು ಖಾಸಗಿ ಶಾಲೆಗಳಿಗೆ ಡೊನೇಶನ್‌ ಕೊಟ್ಟು ಶಿಕ್ಷಣ ಪಡೆಯುವುದಕ್ಕಿಂತ ನಮ್ಮೂರ ಶಾಲೆ ಅಭಿವೃದ್ಧಿಪಡಿಸಿ ಅಲ್ಲೇ ನಮ್ಮ ಮಕ್ಕಳನ್ನು ಓದಿಸಬೇಕು ಎಂಬ ನಿರ್ಧಾರಕ್ಕೆ ಗ್ರಾಮಸ್ಥರೂ ಕೈಜೋಡಿಸಿದ್ದರಿಂದ ಈಗ ಸುಸಜ್ಜಿತ ಶಾಲೆ ತಲೆ ಎತ್ತಿ ನಿಂತಿದೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆಯೂ ಹೆಚ್ಚಳವಾಗಿದ್ದು, ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.

ಮೊದಲು ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಥಿಲ ಕಟ್ಟಡ ಸೇರಿದಂತೆ ಸಣ್ಣಪುಟ್ಟ ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿತ್ತು. 4 ವರ್ಷಗಳಿಂದ ಶಾಲೆಯ ಬಗ್ಗೆ ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸಿ, ಮನೆಗಳಿಗೆ ಕರಪತ್ರ ಹಂಚಿ, ವಾಟ್ಸಾಪ್‌ ಗ್ರೂಪ್‌ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡು,ಸಲಹೆ ಪಡೆದು ಶಾಲೆ ಅಭಿವೃದ್ಧಿಪಡಿಸಲಾಗಿದೆ.

ಮೂಲಸೌಕರ್ಯಗಳಿಂದ ಕಂಗೊಳಿಸುತ್ತಿರುವ ಶಾಲೆ: ಶಾಲೆಗೆ ಬೇಕಾಗುವ ಅಗತ್ಯವಾದ ಮೂಲಸೌಕರ್ಯ ಒದಗಿಸುವ ಗುರಿ ಹಾಕಿಕೊಂಡು ಶಿಥಿಲ ಶಾಲಾ ಕಟ್ಟಡ, ಆವರಣ, ಕೊಠಡಿಗಳು, ಕಾಂ+ಪೌಂಡ್, ಗೇಟ್‌ಗಳ ರಿಪೇರಿ ಪೇಂಟಿಂಗ್‌, ಕುಡಿಯುವ ನೀರು, ಎಲ್ಲಾ ಕೊಠಡಿಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಆಟದ ಮೈದಾನದ ಸುತ್ತಲೂ ಸಸಿಗಳನ್ನು ನಡುವುದು ಸೇರಿದಂತೆ ಪ್ರಮುಖವಾದ ಎಲ್ಲ ಮೂಲಸೌಕರ್ಯ ಒದಗಿಸಿ ಸುಧಾರಣೆ ಮಾಡುವ ಮೂಲಕ ಗೆಳೆಯರ ಬಳಗ ಶಾಲೆಯ ವಾತಾವರಣ ಸಂಪೂರ್ಣವಾಗಿ ಬದಲಾಯಿಸಿದೆ.

ಹೊಸ ತರಗತಿಗಳ ಪ್ರಾರಂಭ: ಸರ್ಕಾರಿ ಶಾಲೆಯ ಮೂಲಸೌಕರ್ಯ ಸುಧಾರಿಸಿದ ಗ್ರಾಮಸ್ಥರು ಅದೇ ಶಾಲೆಯಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಪ್ರಾರಂಭಿಸಿ ಆ ತರಗತಿಗಳಿಗೆ ಬೇಕಾದ ಶಿಕ್ಷಕರನ್ನು ವಸತಿ ಸಹಿತ ಸಂಬಳ ಭರಿಸುವ ಮೂಲಕ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಗ್ರಾಮದಲ್ಲಿರುವ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಸರ್ಕಾರಿ ಶಾಲೆ ಅಭಿವೃದ್ಧಿಪಡಿಸಲಾಗಿದೆ.

ಶಿಕ್ಷಕರಾಗಿ ಕಾರ್ಯನಿರ್ವಸುತ್ತಿರುವ ಗ್ರಾಮಸ್ಥರು: ಶಿಕ್ಷಕರು ಇಲ್ಲದಿರುವಾಗ ಗ್ರಾಮಸ್ಥರು ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಸ್ಥಳೀಯ ಪುರಾತನ ಐತಿಹಾಸಿ ಸ್ಥಳಗಳು, ಪ್ರಮುಖ ಘಟನೆಗಳು, ಸ್ಥಳೀಯ ಪ್ರಾಮುಖ್ಯತೆ ಹೊಂದಿರುವ ಊರುಗಳು ಮತ್ತು ಸ್ಥಳಗಳು, ಈ ಭಾಗದಲ್ಲಿ ಬೆಳೆಯುವ ಪ್ರಮುಖ ಬೆಳೆಗಳು ಮುಂತಾದವುಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವುದರ ಮೂಲಕ ಮಕ್ಕಳಿಗೆ ಜ್ಞಾನ ಧಾರೆ ಎರೆಯುತ್ತಿದ್ದಾರೆ.

ಶಿಕ್ಷಣ ಇಲಾಖೆ ಸಾಥ್‌: ಹಿಪ್ಪರಗಿ ಗ್ರಾಮದಲ್ಲಿರುವ ಶಾಲೆ ಅಭಿವೃದ್ಧಿಗೊಳಿಸಲು ಅವಿರತವಾಗಿ ಶ್ರಮಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಹೊಸ ಅಭಿಯಾನವನ್ನು ಹುಟ್ಟುಹಾಕಿರುವ ಗೆಳೆಯರ ಬಳಗ ಮತ್ತು ಗ್ರಾಮಸ್ಥರ ಪ್ರಯತ್ನಕ್ಕೆ ಶಿಕ್ಷಣ ಇಲಾಖೆಯ ಪ್ರೋತ್ಸಾಹವೂ ದೊರೆಯುತ್ತಿದೆ.

ರಾಜ್ಯಕ್ಕೆ ಮಾದರಿಯಾದ ಶಾಲೆ ಮಾಡುವ ಗುರಿ:

ಶಾಲೆ ಸುಧಾರಣೆಯ ಹೊಣೆ ಹೊತ್ತಿರುವ ಗ್ರಾಮದ ಗೆಳೆಯರ ಬಳಗಕ್ಕೆ ಗ್ರಾಮಸ್ಥರಿಂದ ಸಿಗುತ್ತಿರುವ ಪ್ರೋತ್ಸಾಹ ಅವರ ಉತ್ಸಾಹ ಇಮ್ಮಡಿಯಾಗಿದೆ. ರಾಜ್ಯಕ್ಕೆ ಮಾದರಿ ಶಾಲೆಯನ್ನಾಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಶಾಲೆಯ ಅಭಿವೃದ್ಧಿಯಲ್ಲಿ ಹಿಪ್ಪರಗಿ ಗ್ರಾಮಸ್ಥರು ಆಸಕ್ತಿ ಹಾಗೂ ಕಾರ್ಯ ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಿಗೆ ಸ್ಫೂರ್ತಿಯಾಗಿದೆ.

ಗ್ರಾಮ ಪಂಚಾಯಿತಿಯ ಅನುದಾನದ ಆಸರೆ: ಸರ್ಕಾರಿ ಶಾಲೆ ಸುಧಾರಿಯಿಸುವ ಹೊಣೆ ಹೊತ್ತುಕೊಂಡ ಗ್ರಾಮಸ್ಥರ ಉತ್ಸಾಹ ಕಂಡ ಸ್ಥಳೀಯ ಗ್ರಾಮ ಪಂಚಾಯಿತಿ ಶಾಲೆಗೆ ಬೇಕಾದ ಮೂಲಸೌಕರ್ಯಗಳಾದ ಕಾಂಪೌಂಡ್‌, ಆಟದ ಮೈದಾನ. ಕೊಠಡಿಗಳು ಇನ್ನೂ ಮುಂತಾದ ಮೂಲಸೌಕರ್ಯಗಳನ್ನು ವಿವಿಧ ಯೋಜನೆಗಳಲ್ಲಿ ಲಭ್ಯವಿರುವ ಅನುದಾನದ ಮೂಲಕ ಒದಗಿಸುವ ಕಾರ್ಯ ಮಾಡುತ್ತಿದೆ.

ಳೆಯ ವಿದ್ಯಾರ್ಥಿಗಳೇ ಶಾಲಾ ಅಭಿವೃದ್ದಿಯ ಹಳಿಗಳು: ಅಳಿವಿನಂಚಿನಲ್ಲಿ ಶಾಲೆ ಇಂದು ತಲೆ ಎತ್ತಿ ನಿಲ್ಲಲು ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳ ಇಚ್ಛಾಶಕ್ತಿಯೇ ಕಾರಣವಾಗಿದೆ. ಈ ಶಾಲೆಯಲ್ಲಿ ಕಲಿತು ಉನ್ನತ ಹುದ್ದೆಗೇರಿದ ಹಲವಾರು ಗ್ರಾಮದ ಹಿರಿಯರು, ಅವಶ್ಯ ಸಹಾಯ, ಸಹಕಾರ ನೀಡಿದ್ದಾರೆ.

ಗ್ರಾಮಕ್ಕೆ ಬೇಕಿದೆ ಸರ್ಕಾರಿ ಪ್ರೌಢಶಾಲೆ: ಹಿಪ್ಪರಗಿ ಗ್ರಾಮದಲ್ಲಿ 2 ಖಾಸಗಿ ಮತ್ತು 1 ಅನುದಾನಿತ ಪ್ರೌಢಶಾಲೆ ಇವೆ. ಆದರೆ, ಸರ್ಕಾರಿ ಹೈಸ್ಕೂಲ್ ಇಲ್ಲ. ಸರ್ಕಾರ ನಮ್ಮೂರಿಗೆ ಹೈಸ್ಕೂಲ್‌ ಮಂಜೂರು ಮಾಡಬೇಕು ಎಂಬುದು ಗ್ರಾಮಸ್ಥರ ಆಗ್ರಹ.ಹಿಪ್ಪರಗಿ ಗ್ರಾಮದ ಜನರಿಗೆ ಅನುಕೂಲವಾಗಬೇಕು. ಬಡ ಮತ್ತು ಮಧ್ಯಮ ವರ್ಗದ ಪಾಲಕರು ಖಾಸಗಿ ಶಾಲೆಗಳಿಗೆ ದುಬಾರಿ ಶುಲ್ಕ ತುಂಬುವುದನ್ನು ತಪ್ಪಿಸಬೇಕು ಎಂಬ ಸದುದ್ದೇಶ ಇಟ್ಟುಕೊಂಡು ನಮ್ಮೂರಿನ ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸಬೇಕೆಂಬ ವಿಚಾರಕ್ಕೆ ಗೆಳೆಯರ ಬಳಗ ಮುಂದಾಗಿ ಗ್ರಾಮದ ಜನರ ಸಹಾಯ ಸಹಕಾರದೊಂದಿಗೆ ಗ್ರಾಮದ ಶಾಲೆಯನ್ನು ಅಭಿವೃದ್ಧಿಪಡಿಸಲಾಗಿದೆ. 150 ರಿಂದ 180 ವಿದ್ಯಾರ್ಥಿಗಳಿದ್ದ ಶಾಲೆಯಲ್ಲೀಗ 415 ಮಕ್ಕಳು ಓದುತ್ತಿದ್ದಾರೆ. ಗ್ರಾಮಸ್ಥರು ಹಾಗೂ ಅನೇಕ ಹಿರಿಯರು, ರಾಜಕಾರಣಿಗಳು ಈ ಪ್ರಯತ್ನಕ್ಕೆ ಬೆನ್ನುತಟ್ಟಿ ಬೆಂಬಲ ನೀಡಿದ್ದು, ನಮ್ಮ ಕೆಲಸ ಸಾರ್ಥಕವಾದ ಹೆಮ್ಮೆ ತರಿಸಿದೆ.

-ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿಪ್ಪರಗಿ

PREV

Recommended Stories

ಬೆಳೆಹಾನಿ ಪರಿಹಾರಕ್ಕೆ ಶೀಘ್ರ ಕ್ರಮಕೈಗೊಳ್ಳಿ
ಕುವಲೆಕಾಡು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ