ಸದಾ ಭಗವಂತನ ಆರಾಧನೆ ಮಾಡುವವನೇ ನೈಜ ದೈವಭಕ್ತ: ವಿಶ್ವಪ್ರಸನ್ನತೀರ್ಥ ಶ್ರೀ

KannadaprabhaNewsNetwork | Published : Feb 11, 2025 12:48 AM

ಸಾರಾಂಶ

ಭಗವಂತನ ಅನುಗ್ರಹವಿದ್ದರೆ ಮಾತ್ರ ನಮ್ಮ ಎಲ್ಲ ಪ್ರಯತ್ನಗಳಿಗೆ ಫಲ ಸಿಗುತ್ತದೆ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಶ್ರೀಗಳು ಹೇಳಿದರು.

ಹುಬ್ಬಳ್ಳಿ: ಸಂವಿಧಾನದ ಆಶಯಗಳ ಅನ್ವಯ ಜೀವನ ನಡೆಸುವವನೇ ನಿಜವಾದ ರಾಷ್ಟ್ರಭಕ್ತ. ಒಂದು ದಿನ ರಾಷ್ಟ್ರಧ್ವಜ ಹಾರಿಸಿದರೆ ದೇಶಭಕ್ತನಾಗುವುದಿಲ್ಲ. ಅದೇ ರೀತಿ ಸದಾ ಭಗವಂತನ ಆರಾಧನೆ ಮಾಡಿ, ಅವನನ್ನು ನಂಬಿ ಬದುಕುವವನೇ ನಿಜವಾದ ದೈವಭಕ್ತ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಶ್ರೀಗಳು ಹೇಳಿದರು.

ಇಲ್ಲಿನ ದೇಶಪಾಂಡೆ ನಗರದ ಶ್ರೀಕೃಷ್ಣ ಕಲ್ಯಾಣಮಂಟದಲ್ಲಿ ಪೇಜಾವರ ಮಠಾಧೀಶರಾಗಿದ್ದ ವಿಶ್ವೇಶ ತೀರ್ಥ ಸ್ವಾಮೀಜಿಯವರ ಪಂಚಮ ಪಾದುಕಾ ಆರಾಧನೆ ಮಹೋತ್ಸವದ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.

ಅಹಿಂಸೆ, ದಯೆ, ಕರುಣೆ ಎಂಬ ಭಾವ ಪುಷ್ಪಗಳು ನಮ್ಮ ಹೃದಯದಲ್ಲಿ ಹುಟ್ಟಬೇಕು. ಹಣ ಕೊಟ್ಟು ಈ ಪುಷ್ಪಗಳನ್ನು ಖರೀದಿಸಲು ಸಾಧ್ಯವಿಲ್ಲ. ಇಂತಹ ಭಾವಪುಷ್ಪಗಳಿಂದ ಪೂಜೆ ಮಾಡಿದರೆ ದೇವರು ಸಂತುಷ್ಟನಾಗುತ್ತಾನೆ. ಯಾರಿಗೂ ದ್ರೋಹ ಮಾಡದೆ, ಹಿಂಸೆ ಆಗದಂತೆ ನಾವೆಲ್ಲರೂ ಬದುಕಬೇಕು. ದುಃಖದಲ್ಲಿ ಇದ್ದವರಿಗೆ ಸಾಂತ್ವನ ಹೇಳಬೇಕು, ನೆರವಾಗಬೇಕು. ಅದುವೇ ದೇವರ ಪಾದಕ್ಕೆ ನಾವು ಸಲ್ಲಿಸುವ ನಿಜವಾದ ಪುಷ್ಪ ಸಮರ್ಪಣೆ ಎಂದರು.

ಭಗವಂತನ ಅನುಗ್ರಹವಿದ್ದರೆ ಮಾತ್ರ ನಮ್ಮ ಎಲ್ಲ ಪ್ರಯತ್ನಗಳಿಗೆ ಫಲ ಸಿಗುತ್ತದೆ. ದಿನದಲ್ಲಿ ಅರ್ಧಗಂಟೆ ಪೂಜೆ ಮಾಡಿ 24 ಗಂಟೆಯೂ ದೇವರ ಅನುಗ್ರಹ ಸಿಗಬೇಕೆಂದು ಜನ ಬಯಸುತ್ತಾರೆ. ಆದರೆ, ದೇವರ ಅನುಗ್ರಹ ಸಿಗಬೇಕಾದರೆ ಬೆಳಗ್ಗೆಯಿಂದ ಸಂಜೆ ವರೆಗೆ, ಸಂಜೆಯಿಂದ ಬೆಳಗಿನ ವರೆಗೆ ಎರಡು ಹೊತ್ತು ಪೂಜೆ ಮಾಡಬೇಕೆಂದು ಹಿರಿಯರು ಹೇಳಿದ್ದಾರೆ ಎಂದರು.

ನಮ್ಮ ಉಸಿರು, ಬದುಕು ಹೇಗೆ ಬೇರೆ ಬೇರೆ ಅಲ್ಲವೋ, ಅದೇ ರೀತಿ ಬದುಕು ಮತ್ತು ಭಗವಂತನ ಆರಾಧನೆ ಬೇರೆ ಬೇರೆ ಆಗಬಾರದರು. ನಮ್ಮ ಎಲ್ಲ ಕೆಲಸಗಳಲ್ಲಿ ಹರಿಸ್ಮರಣೆ ಇರಬೇಕು. ದೇವರ ಪೂಜೆಯನ್ನು ಒಂದು ಕೆಲಸದಂತೆ ಮಾಡಬಾರದು. ನಾವು ಮಾಡುವ ಅರ್ಧಗಂಟೆ ಪೂಜೆ ಇಡೀ ದಿನ ಭಗವಂತನ ಆರಾಧನೆಗೆ ಸ್ಫೂರ್ತಿ ನೀಡುತ್ತದೆ ಎಂದರು.

ಸಾಮಾಜಿಕ, ಅಧ್ಯಾತ್ಮಿಕ ಬದುಕು ಒಂದಕ್ಕೊಂದು ತಳುಕು ಹಾಕಿಕೊಂಡಿವೆ. ನಮ್ಮ ಯಾವ ನಡೆಯೂ ಭಗವಂತನ ವಿರುದ್ಧವಾಗಿರಬಾರದು. ಗುರುಗಳು ತೋರಿದ ದಾರಿಯಲ್ಲಿ ಆಧ್ಯಾತ್ಮಿಕ, ಸಾಮಾಜಿಕ ಜೀವನ ನಡೆಸಬೇಕು. ಸದಾ ಭಗವತ್‌ ಚಿಂತನೆ ಇರಬೇಕು‌. ಆಗ ಮಾತ್ರ ಗುರುಗಳಿಗೆ ನಿಜವಾಗಿ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.

ಬೆಳಗ್ಗೆ ಪೇಜಾವರ ಶ್ರೀಗಳ ಪಾದ ಪೂಜೆ, ಭಜನೆ, ವಿದ್ವಾಂಸರಿಂದ ಪ್ರವಚನ, ವಿದ್ಯಾರ್ಥಿಗಳಿಂದ ಅನುವಾದ, ಶ್ರೀಪಾದರಿಂದ ಸಂಸ್ಥಾನ ಪೂಜೆ ಕಾರ್ಯಕ್ರಮಗಳು ನೆರವೇರಿದವು. ಬಳಿಕ ಶ್ರೀಗಳು ಭಕ್ತರಿಗೆ ಫಲಮಂತ್ರಾಕ್ಷತೆ ವಿತರಿಸಿದರು.ಈ ಸಂದರ್ಭದಲ್ಲಿ ಸತ್ಯಮೂರ್ತಿ ಆಚಾರ್‌, ಅನಂತ ಪದ್ಮನಾಭ ಐತಾಳ, ಗೋಪಾಲ ಕುಲಕರ್ಣಿ, ಗೋವಿಂದ ಮೈಸೂರು, ಗುರುರಾಜ ಬಾಗಲಕೋಟೆ, ಶ್ರೀಕಾಂತ ಕೆಮತೂರ, ಎ.ಸಿ. ಗೋಪಾಲ್‌, ಮನೋಹರ ಪರ್ವತಿ ಸೇರಿದಂತೆ ಹಲವರಿದ್ದರು.

Share this article