ಬಿಜೆಪಿ ಹಲವು ಮುಖಂಡರ ಕೊಲೆಗೆ ಸಂಚು ಎಂದು ಉಲ್ಲೇಖ : ಪಂಚಾಳ ಕೇಸ್‌ ದಿನಕ್ಕೊಂದು ತಿರುವು

KannadaprabhaNewsNetwork | Updated : Dec 29 2024, 07:59 AM IST

ಸಾರಾಂಶ

  ಸದರಿ ಪ್ರಕರಣದಲ್ಲಿ ಸಚಿನ್‌ ಬರೆದಿಟ್ಟಿರುವ ಡೆತ್‌ ನೋಟ್‌ನಲ್ಲಿ ಬಿಜೆಪಿಯ ಹಲವು ಮುಖಂಡರ ಕೊಲೆಗೆ ಸಂಚು ರೂಪಿಸಲಾಗಿತ್ತೆಂಬ ಸಂಗತಿಯೂ ವಿವಾದದ ಬಿರುಗಾಳಿ ಹುಟ್ಟಿಸಿದೆ  

  ಕಲಬುರಗಿ :  ಏತನ್ಮದ್ಯೆ ಸದರಿ ಪ್ರಕರಣದಲ್ಲಿ ಸಚಿನ್‌ ಬರೆದಿಟ್ಟಿರುವ ಡೆತ್‌ ನೋಟ್‌ನಲ್ಲಿ ಬಿಜೆಪಿಯ ಹಲವು ಮುಖಂಡರ ಕೊಲೆಗೆ ಸಂಚು ರೂಪಿಸಲಾಗಿತ್ತೆಂಬ ಸಂಗತಿಯೂ ವಿವಾದದ ಬಿರುಗಾಳಿ ಹುಟ್ಟಿ ಹಾಕಿದೆ. ಈ ಅಂಶ ಮುಂದುಟ್ಟಿಕೊಂಡು ಬಿಜೆಪಿ ಮುಖಂಡರು, ಶಾಸಕರು ಎಲ್ಲರೂ ದೂರು ದಾಖಲಿಸಲು ಠಾಣೆಗೆ ಹೋದರೂ, ಅಲ್ಲಿ ದೂರು ದಾಖಲಾಗುತ್ತಿಲ್ಲ. ಅವರ ದೂರು ಅರ್ಜಿಗೆ ಹಿಂಬರಹ ನೀಡಿ ಪೊಲೀಸರು ಸಾಗಹಾಕಿರೋದು ಬಿಜೆಪಿಗರನ್ನು ಕೆರಳಿಸಿದೆ.

 ಗುತ್ತೆದಾರ್‌ ಸಚಿನ್‌ ತಮ್ಮ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದಂತೆ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ತಮ್ಮ ಹತ್ಯೆಗೆ ಸಂಚು ರೂಪಿಸಿದ್ದಾರೆ. ಅವರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಬಿಜೆಪಿ ಮುಖಂಡರು ಇಲ್ಲಿನ ಸ್ಟೇಷನ್‌ ಬಜಾರ್‌ ಠಾಣೆಗೆ ಹೋಗಿ ದೂರು ಸಲ್ಲಿಸಿದರೂ ಅಲ್ಲಿನ ಪೊಲೀಸರು ದೂರು ದಾಖಲಿಸದೇ ನಿರಾಕರಿಸಿದ್ದಾರೆ ಎನ್ನಲಾಗಿದೆ.

ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್‌ ಸೇರಿದಂತೆ ಬಿಜೆಪಿಯ ಮುಖಂಡರು ಠಾಣೆಗೆ ಹೋಗಿ ಸಚಿನ್‌ ಡೆತ್‌ನೋಟ್‌ನಲ್ಲಿ ತಮ್ಮೆಲ್ಲರ ಕೊಲೆಗೆ ಸಂಚು ರೂಪಿತವಾಗಿದ್ದು ಸೊಲ್ಲಾಪೂರದವರಿಗೆ ಸೂಪಾರಿ ನೀಡಲಾಗಿದೆ ಎಂಬಂಶ ನಮೂದಾಗಿದೆ. ಸುಪಾರಿ ಕೊಟ್ಟವರೆಲ್ಲರ ವಿರುದ್ಧ ದೂರು ದಾಖಲಿಸುವಂತೆ ಮುಖಂಡರು ಆಗ್ರಹಿಸಿದರಾದರೂ ಪೊಲೀಸರು ದೂರು ದಾಖಲಿಸಲೇ ಇಲ್ಲ.

ನ್ಯಾಯಾಧೀಶರ ಮುಂದೆ ಹೋಗೋಣ ನಡೆಯಿರೆಂಬ ಬಿಜೆಗಿಪರ ಆಹ್ವಾನಕ್ಕೂ ಪೋಲಿಸರು ಸಹಕರಿಸಲಿಲ್ಲ. ಎಫ್‌ಐಆರ್‌ ದಾಖಲಿಸಲಾಗದು ಎಂದು ಹಿಂಬರಹ ಕೊಡುವಂತೆ ಆಗ್ರಹಿಸಿಸುತ್ತ ಶಾಸಕ ಬಸವರಾಜ ಮತ್ತಿಮಡು ಹಾಗೂ ಪಿಐ ಶಂಕೀಲ್‌ ಅಂಗಡಿ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಇವೆಲ್ಲದರ ನಡುವೆಯೇ ಎಸಿಪಿ ಚಂದ್ರಶೇಖರ ಠಾಣೆಗೆ ಆಗಮಿಸಿ ಪ್ರಕರಣದ ಮಾಹಿತಿ ಪಡೆದರಾದರೂ ಐಫ್‌ಐಆರ್‌ ದಾಖಲು ಬಗ್ಗೆ ಸ್ಪಷ್ಟ ನಿರ್ಣಯಕ್ಕೆ ಬರಲಾಗಲಿಲ್ಲ. ತಡರಾತ್ರಿಯವರೆಗೂ ವಾಗ್ವಾದ, ಮಾತಿನ ಚಕಮಕಿಯಲ್ಲೇ ಕಾಲ ಕಳೆಯಿತು. ಆಗ ದೂರು ಸ್ವೀಕರಿಸಿ ಇದು ಅಸಂಜ್ಞೆಯ ಅಪರಾಧವಾದ್ದರಿಂದ ನೈಜತೆ ಆಧಾರದ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಬಿಜೆಪಿಗರಿಗೆ ಸಮಜಾಯಿಷಿ ನೀಡಿದರು.

ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ ಮತ್ತವರ ಗ್ಯಾಂಗ್ ವಿರುದ್ದ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಸಚಿನ್ ಪಂಚಾಳ ಕುಟುಂದವರನ್ನು ಕಾಣಲು ಶಾಸಕ ಬಸವರಾಜ್ ಮತ್ತಿಮೂಡ, ಮಾಜಿ ಶಾಸಕ ರಾಜಕುಮಾರ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ನಗರಾಧ್ಯಕ್ಷ ಚಂದು ಪಾಟೀಲ್ ಸೇರಿದಂತೆ ಕಲಬುರಗಿ ಬಿಜೆಪಿ ಮುಖಂಡರ ನಿಯೋಗ ಭಾಲ್ಕಿಗೆ ತೆರಳಿದೆ.ಮಾಜಿ ಶಾಸಕ ರಾಜಕುಮಾರ್‌ ಪಾಟೀಲ್‌ ತೇಲ್ಕೂರ್‌, ಎಂಎಲ್‌ಸಿ ಶಶಿಲ್‌ ನಮೋಶಿ, ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ್‌, ಬಿಜೆಪಿ ಜಿಲ್ಲಾಧ್ಯಕ್ಷ ಸಿವರಾಜ ಪಾಟೀಲ್‌ ರದ್ದೇವಾಡಗಿ, ಉಮೇಶ ಪಾಟೀಲ್‌, ಪಾಲಿಕೆ ಸದಸ್ಯ ಕೃಷ್ಣ ನಾಯಕ್‌, ಶಿವಾನಂದ ಪಿಸ್ತಿ ಸೇರಿದಂತೆ ಹಲವರಿದ್ದರು.ಖರ್ಗೆ ಆಪ್ತ ಕಪನೂರ್‌ ಗ್ಯಾಂಗ್‌ ವಿರುದ್ಧ ಎಫ್‌ಐಆರ್‌

ಕಲಬುರಗಿ: ಶಾಸಕ ಬಸವರಾಜ ಮತ್ತಿಮಡು, ನಗರಾಧ್ಯಕ್ಷ ಚಂದು ಪಾಟೀಲ್‌, ಮಮಿಕಂಠ ರಾಠೋಡ ಹಾಗೂ ಆಂದೋಲಾ ಸ್ವಾಮೀಜಿ ಕೊಲೆಗೆ ಸಂಚು ಮಾಡಿದ್ದಾರೆಂಬ ಆರೋಪಗಳ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಬೀದರರ್ನ ಕಾಂಟ್ರಾಕ್ಟರ್ ಸಚಿನ್ ಪಂಚಾಳ ಡೆತ್ ನೋಟ್ ಉಲ್ಲೇಖಿಸಿ ಬಿಜೆಪಿ ನೀಡಿದ ದೂರನ್ನು ಸ್ವೀಕರಿಸಿ ಸ್ಟೇಷನ್‌ ಬಜಾರ್‌ ಠಾಣೆಯ ಪೊಲೀಸರು ಕೊನೆಗೂ ಎಫ್‌ಐರ್‌ ದಾಖಲಿಸಿದ್ದಾರೆ.ನಿನ್ನೆಯಿಂದ ಈ ಪ್ರಕರಣ ದಾಖಲಿಸಿಕೊಳ್ಳಲು ಬಿಜೆಪಿ ಮುಖಂಡರು ಆಗ್ರಹಿಸಿದ್ದರೂ ಕೂಡಾ ಪೊಲೀಸರು ಅಸಂಜ್ಞೆಯ ಅಪರಾಧವಾದ್ದರಿಂದ ಪ್ರಕರಣ ದಾಖಲಾಗದು ಎಂದು ಸಾಗಹಾಕಿದ್ದರು. ಆದರೆ ಕೊನೆಗೆ ಈ ವಿಚಾರದಲ್ಲಿ ನ್ಯಾಯಾಲಯದ ಅನುಮತಿ ಮೇರೆಗೆ ರಾಜು ಕಪನೂರ್‌ ಮತ್ತವರ ಗುಂಪಿನ ಸದಸ್ಯರ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿ ಬಿಜೆಪಿ ಜಗತ್‌ ವೃತ್ತದಲ್ಲಿ ಧರಣಿ ಶುರುಮಾಡಿತ್ತು. ಇತ್ತ ಎಫ್‌ಐಆರ್‌ ದಾಖಲಾಗುತ್ತಿದ್ದಂತೆಯೇ ಜಗತ್ ಸರ್ಕಲ್ ನಲ್ಲಿ ನಡೆಯುತ್ತಿದ್ದ ಬಿಜೆಪಿ ಪ್ರತಿಭಟನೆ ಅಂತ್ಯಗೊಂಡಿದೆ.

ಠಾಣೆಯ ಪಿಐ ವಿರುದ್ಧ ಕ್ರಮಕ್ಕೆ ಆಗ್ರಹಎಫ್‌ಐಆರ್‌ ದಾಖಲಾಗಿರುವ ಬಗ್ಗೆ ಶಾಸಕ ಬಸವರಾಜ್ ಮತ್ತಿಮೂಡ ಪ್ರತಿಕ್ರಿಯೆ ನೀಡಿದ್ದು, ಪೊಲೀಸರು ನಿನ್ನೆಯೇ ಎಫ್ಐಆರ್ ದಾಖಲು ಮಾಡಿಕೊಳ್ಳಬೇಕಿತ್ತು. ಇಂದು ಮಾಡಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ಆದಾಗ ಮಾತ್ರ ಸಂಪೂರ್ಣ ಸತ್ಯಾಂಶ ಹೊರಬರಲು ಸಾಧ್ಯವೆಂದರು.

ಹತ್ಯೆ ಸ್ಕೆಚ್ ಹಿಂದೆ ಯಾರಿದ್ದಾರೆ? ಯಾರು ಯಾರಿಗೆ ಸುಫಾರಿ ಕೊಟ್ಟಿದ್ದಾರೆ? ಎಲ್ಲವೂ ಬಯಲಿಗೆ ಬರಬೇಕಾದರೆ ಸಿಬಿಐ ತನಿಖೆಯಾಗಬೇಕು. ನಿನ್ನೆ ಠಾಣೆಯಲ್ಲಿ ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿರುವ ಇನ್ಸ್ಪೆಕ್ಟರ್ ಶಕೀಲ್ ಅಂಗಡಿ ಸಸ್ಪೆಂಡ್ ಮಾಡಬೇಕು ಎಂದು ಶಾಸಕ ಬಸವರಾಜ್ ಮತ್ತಿಮೂಡ ಆಗ್ರಹಿಸಿದ್ದಾರೆ.ಈ ಬಗ್ಗೆ ಬಿಜೆಪಿ ನಗರಧ್ಯಕ್ಷ ಚಂದು ಪಾಟೀಲ್‌ ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರೂ ಎಫ್‌ಐಆರ್‌ನಲ್ಲಿ ಸೇರಿಸುವಂತೆ ನಾವು ಆಗ್ರಹಿಸಿದ್ದೇವು. ಆದ್ರೆ ಪೊಲೀಸರು ಇದಕ್ಕೆ ಅವಕಾಶ ಇಲ್ಲ ಅಂತ ಸೇರಿಸಿಲ್ಲ. ಈ ಬಗ್ಗೆ ಸಿಬಿಐ ತನಿಖೆ ಆದಾಗ ಮಾತ್ರ ಸಂಪೂರ್ಣ ಸತ್ಯಾಂಶ ಹೊರಬರಲು ಸಾಧ್ಯವೆಂದು ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್ ಹೇಳಿದ್ದಾರೆ.

Share this article