ಧಾರವಾಡದಲ್ಲಿ ಅಸ್ಥಿಪಂಜರ ಮಿಸ್ಟರಿ : ಡೆತ್‌ನೋಟ್‌ನಿಂದ ಹೊಸ ತಿರುವು -ಸಂಬಂಧಿಕರಿಂದ ಜೀವ ಬೆದರಿಕೆ

KannadaprabhaNewsNetwork | Updated : Sep 12 2024, 12:38 PM IST

ಸಾರಾಂಶ

ಧಾರವಾಡದಲ್ಲಿ ಅಸ್ಥಿಪಂಜರ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿಯ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮೃತ ಚಂದ್ರಶೇಖರ ಡೆತ್‌ನೋಟ್‌ ಬರೆದಿಟ್ಟಿದ್ದು, ತನಗೆ ಸಂಬಂಧಿಕರಿಂದ ಜೀವ ಬೆದರಿಕೆ ಇದೆ ಎಂದು ತಿಳಿಸಿದ್ದಾರೆ.

ಧಾರವಾಡ :  ಇಲ್ಲಿಯ ಮಾಳಮಡ್ಡಿಯ ಸಾಂಬ್ರಾಣಿ ಕಾಂಪೌಂಡ್‌ ಮನೆಯೊಂದರಲ್ಲಿ ಇತ್ತೀಚೆಗೆ ವ್ಯಕ್ತಿಯೊಬ್ಬರ ಶವವು ಅಸ್ಥಿಪಂಜರದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣವು ಇದೀಗ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ.

ಆ. 14ರಂದು ಅಸ್ಥಿಪಂಜರದ ಸ್ಥಿತಿಯಲ್ಲಿ ಪತ್ತೆಯಾದ ಚಂದ್ರಶೇಖರ ಕೊಲ್ಲಾಪೂರ ಅನಾಥರಾಗಿದ್ದು, ಅವರ ಸಾವು ಅಸಹಜ ಎನ್ನಲಾಗಿತ್ತು. ನಂತರ ಅವರಿಗೆ ಸಂಬಂಧಿಕರಿದ್ದಾರೆ ಎಂಬ ಮಾಹಿತಿ ತಿಳಿಯಿತು. ತದ ನಂತರ ಅವರ ಹೆಸರಿನಲ್ಲಿ ಮಾಳಮಡ್ಡಿಯಲ್ಲಿ ಇರುವ ಕೋಟಿಗಟ್ಟಲೇ ಮೌಲ್ಯದ ಹತ್ತುವರೆ ಗುಂಟೆ ಜಾಗಕ್ಕಾಗಿ ಅವರನ್ನು ಕೊಲೆ ಮಾಡಲಾಗಿದೆ ಎಂಬ ಶಂಕೆ ಇದೆ ಎಂದು ಮೂವರ ವಿರುದ್ಧ ಎರಡು ದಿನಗಳ ಹಿಂದಷ್ಟೇ ಚಂದ್ರಶೇಖರ ಅವರ ತಾಯಿ ಎನ್ನಲಾದ ಮಲ್ಲವ್ವ ಬನ್ನೂರ ಹಾಗೂ ಇತರರು ದೂರು ದಾಖಲಿಸಿದ್ದರು.

ಇದೀಗ, ಬುಧವಾರ ಹೊಸ ಬೆಳವಣಿಗೆಯೊಂದರಲ್ಲಿ ಮೃತ ಚಂದ್ರಶೇಖರ ಡೆತ್‌ನೋಟ್‌ ಬರೆದಿಟ್ಟಿದ್ದು, ಈ ಅಸ್ಥಿ ತಮಗೆ ಸೇರಿದೆ. ಸಂಬಂಧಿಕರು ಎಂದು ಬಂದಿರುವವರು ಚಂದ್ರಶೇಖರ ಅವರ ಮಲತಾಯಿ ಹಾಗೂ ಅವರ ಮಕ್ಕಳು. ಅವರಿಂದ ಹಾಗೂ ಅವರ ಜತೆಗಿರುವ ಸಾಮಾಜಿಕ ಕಾರ್ಯಕರ್ತರೊಬ್ಬರಿಂದ ನನಗೆ ಜೀವ ಬೆದರಿಕೆ ಇದ್ದು, ಪೊಲೀಸರು ರಕ್ಷಣೆ ನೀಡಬೇಕೆಂದು ರಾಣಿಬೆನ್ನೂರು ಮೂಲದ, ಮೃತ ಚಂದ್ರಶೇಖರ ಪತ್ನಿ ಸುರೇಖಾಳ ಅಕ್ಕನ ಮಗ ಯಶವಂತ ಪಾಟೀಲ ಮಾಧ್ಯಮಗಳ ಮೂಲಕ ಪೊಲೀಸರಿಗೆ ಮನವಿ ಮಾಡಿದ್ದಾರೆ.

ದೂರು ಕೊಟ್ಟವನು ನಾನೆ:

ನನ್ನ ಚಿಕ್ಕಮ್ಮ ಸುರೇಖಾಳನ್ನು ಚಂದ್ರಶೇಖರ 2000ರಲ್ಲಿ ಧಾರವಾಡದಲ್ಲಿಯೇ ಮದುವೆಯಾಗಿದರು. ಅದಕ್ಕೆ ನಾನು ಸಹ ಸಾಕ್ಷಿಯಾಗಿದ್ದೇನೆ. ಮೊದಲು ಚಂದ್ರಶೇಖರ ಅವರ ಅಡ್ಡ ಹೆಸರು ಬನ್ನೂರ ಎಂದಿದ್ದು, ನಂತರ ಕೊಲ್ಲಾಪೂರ ಎಂದು ಬದಲಾಯಿಸಿಕೊಂಡರು. ಅನಾರೋಗ್ಯದ ಹಿನ್ನೆಲೆಯಲ್ಲಿ 2015ರಲ್ಲಿ ಚಿಕ್ಕಮ್ಮ ಸುರೇಖಾ ತೀರಿಕೊಂಡರು. ಹೀಗಾಗಿ ಸೆಕ್ಯುರಿಟಿ ಗಾರ್ಡ್‌ ವೃತ್ತಿ ಮಾಡುತ್ತಿದ್ದ ಅವರು ಮನೆಯಲ್ಲಿ ಒಬ್ಬರೇ ಇರುತ್ತಿದ್ದರು. ಸಂಪೂರ್ಣ ಅಸ್ಥಿಯು ಚಿಕ್ಕಮ್ಮ ಸುರೇಖಾ ಹೆಸರಿನಲ್ಲಿತ್ತು. ಈ ಮಧ್ಯೆ ನನಗೆ ಕಾರು ಅಪಘಾತವಾಗಿದ್ದು ಪತ್ನಿ ಕಳೆದುಕೊಂಡೆನು. ಈ ಕಾರಣದಿಂದ ಹಲವು ವರ್ಷಗಳ ಕಾಲ ಧಾರವಾಡಕ್ಕೆ ಬಂದಿರಲಿಲ್ಲ. ಹೀಗಾಗಿ ಚಿಕ್ಕಪ್ಪ ಚಂದ್ರಶೇಖರ ಸಂಪರ್ಕ ತಪ್ಪಿ ಹೋಗಿತ್ತು. ಅವರು ನಾಪತ್ತೆಯಾಗಿರುವ ಕುರಿತು ವಿದ್ಯಾಗಿರಿ ಪೊಲೀಸರಿಗೆ ಮೊದಲು ದೂರು ಕೊಟ್ಟವನು ನಾನೇ ಎನ್ನುತ್ತಾರೆ ಯಶವಂತ ಪಾಟೀಲ.

ದೂರಿನ ಅನ್ವಯ ಪೊಲೀಸರೊಂದಿಗೆ ಅವರ ಮನೆಗೆ ಹೋಗಿ ಒಳಗಿನಿಂದ ಹಾಕಿಕೊಂಡ ಚಿಲಕ ಮುರಿದಾಗಲೇ ಚಂದ್ರಶೇಖರ ಅವರು ಮೃತರಾಗಿದ್ದು ಗೊತ್ತಾಗಿದೆ. ಅಸ್ಥಿಪಂಜರದ ಸ್ಥಿತಿಯಲ್ಲಿದ್ದ ಅವರ ಸಾವಿನ ಪ್ರಕರಣವನ್ನು ವಿದ್ಯಾಗಿರಿ ಪೊಲೀಸರು ದಾಖಲಿಸಿಕೊಂಡು ತನಿಖೆ ಸಹ ನಡೆಸುತ್ತಿದ್ದಾರೆ. ಈ ಮಧ್ಯೆ ಚಂದ್ರಶೇಖರ ಅವರ ಮಲತಾಯಿ ಹಾಗೂ ಅವರ ಮಕ್ಕಳು ಸಾಮಾಜಿಕ ಕಾರ್ಯಕರ್ತರೊಬ್ಬ ಸಹಕಾರದಲ್ಲಿ ವಿದ್ಯಾಗಿರಿ ಪೊಲೀಸ್‌ ಠಾಣೆಗೆ ಆಗಮಿಸಿ, ಚಂದ್ರಶೇಖರ ಅವರದು ಕೊಲೆ ಎಂದು ಸಂಶಯ ವ್ಯಕ್ತಪಡಿಸಿ ನಮ್ಮ ವಿರುದ್ಧ ದೂರು ನೀಡಿದ್ದಾರೆ ಎಂದು ಯಶವಂತ ಪಾಟೀಲ ಮಾಧ್ಯಮಗಳಿಗೆ ದಾಖಲೆ ಸಮೇತ ಮಾಹಿತಿ ನೀಡಿದರು.

ಚಂದ್ರಶೇಖರ ಅವರು ಸಾಯುವ ಮುನ್ನ ನನ್ನ ಹೆಸರಿನಲ್ಲಿ ಡೆತ್‌ನೋಟ್‌ ಸಹ ಮಾಡಿದ್ದು, ತಮ್ಮ ಗಮನಕ್ಕೂ ಇರಲಿಲ್ಲ. ವಿದ್ಯಾಗಿರಿ ಪೊಲೀಸರು ಮನೆಯಲ್ಲಿ ದಾಖಲೆ ಪರಿಶೀಲಿಸಿದಾಗ ಗೊತ್ತಾಗಿ ಆ ಪತ್ರವನ್ನು ಅವರೇ ತಂದು ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಮನೆಯಲ್ಲಿ ನಾನೇ ವಾಸ ಮಾಡಲು ತೀರ್ಮಾನಿಸಿದ್ದೆನು. ಇದೀಗ ಚಂದ್ರಶೇಖರ ಮಲತಾಯಿ ಮಲ್ಲವ್ವ ಹಾಗೂ ಅವರ ಮಕ್ಕಳು, ಈ ವಿಚಾರದಲ್ಲಿ ನೀನು ಮಧ್ಯ ಬರಬೇಡ. ನಿಮ್ಮೂರಿಗೆ ಹೋಗಿ ಬಿಡು ಎಂದು ಭಯ ಪಡಿಸುತ್ತಿದ್ದಾರೆ. ಆದ್ದರಿಂದ ನನಗೆ ಪೊಲೀಸರಿಂದ ರಕ್ಷಣೆ ಬೇಕು ಎಂದು ಯಶವಂತ ಅಳಲು ತೋಡಿಕೊಂಡರು.

ಒಬ್ಬ ವ್ಯಕ್ತಿ ಮೃತಪಟ್ಟು ಅಸ್ಥಿ ಪಂಜರವಾಗಿ ಪತ್ತೆಯಾದ ಸಂದರ್ಭದಲ್ಲಿಯೇ ಈ ಪ್ರಕರಣ ಕುರಿತು ಜನತೆಗೆ ಅಚ್ಚರಿ ಹಾಗೂ ಸಂಶಯ ಮೂಡಿತ್ತು. ತದ ನಂತರ ಆತ ಅನಾಥ ಎನ್ನುವಷ್ಟರಲ್ಲಿ ಸಂಬಂಧಿಕರು ಪತ್ತೆಯಾದರು. ಇದೀಗ ಅಸ್ಥಿ ವಿಷಯವಾಗಿ ಪರ-ವಿರೋಧಗಳು ಶುರುವಾಗಿದ್ದು, ಮುಂದಿನ ಬೆಳವಣಿಗೆ ಕಾದು ನೋಡಬೇಕಿದೆ.

Share this article