-‘ಪೂರ್ವಿ ಗಾನಯಾನ 100’ರ ಪ್ರಯುಕ್ತ ‘ನಮ್ಮ ಹಾಡು ನಮ್ಮದು’ ಚಿತ್ರ ಗೀತೆಗಳ ಗಾಯನ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಂಗೀತ, ಪೀಳಿಗೆಗೆ ಬಳುವಳಿಯಾಗಿ ನೀಡುವ ವಿಶಿಷ್ಟ ಪ್ರಕಾರವಾಗಿದ್ದು, ಇದಕ್ಕೊಂದು ದೃಢವಾದ ಧ್ಯೇಯವಿದೆ. ಆ ಧ್ಯೇಯದಿಂದ ಹೊಸ ಕಲಾವಿದರು ಪ್ರೋತ್ಸಾಹ ಪಡೆಯುತ್ತಿದ್ದಾರೆ ಎಂದು ಹಿರಿಯ ಚಲನಚಿತ್ರ ನಟ ರಮೇಶ್ ಭಟ್ ಹೇಳಿದರು. ನಗರದ ಕುವೆಂಪು ಕಲಾಮಂದಿರದಲ್ಲಿ ‘ಪೂರ್ವಿ ಗಾನಯಾನ 100’ರ ಪ್ರಯುಕ್ತ ‘ನಮ್ಮ ಹಾಡು ನಮ್ಮದು’ ಚಿತ್ರ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಂಗೀತಕ್ಕೆ ಸಾಧನೆ ಬೇಕು, ಪರಿಶ್ರಮ ಬೇಕು, ಪೂರ್ವಜನ್ಮದ ಸಂಸ್ಕಾರ ಬೇಕು. ಅವೆಲ್ಲಾ ಇದ್ದವರು ಮಾತ್ರ ಸಾಧನೆ ಮಾಡಲು ಸಾಧ್ಯ. ಸಂಗೀತ ಕಾರ್ಯಕ್ರಮದ ಆಯೋಜನೆ ಸಡಗರ, ಸಂಭ್ರಮ, ಸಂಪ್ರದಾಯ ಖುಷಿಗೋ, ಸಂತೋಷಕ್ಕೋ ಸೀಮಿತವಾದುದಲ್ಲ, ಸಂಗೀತ ನಮ್ಮೆಲ್ಲರ ಬದುಕಲ್ಲಿ ಶಾಶ್ವತ ವಾಗಿರುವ ಒಂದು ದೊಡ್ಡ ಮಾಧ್ಯಮವಾಗಿದ್ದು, ಈ ಪರಂಪರೆ ಮುಂದುವರಿಯಬೇಕು. ಇದನ್ನು ಎಲ್ಲರಿಗೂ ಹಂಚಬೇಕು ಎಂದರು.ನಮ್ಮ ಜೀವನದ ಜೊತೆ ಜೊತೆಯಲ್ಲೇ ಸಂಗೀತ ಇದೆ. ಪುಟ್ಟ ಮಕ್ಕಳಾಗಿದ್ದಾಗ ಅಮ್ಮನ ಲಾಲಿ ಜೋಗುಳ ಕೇಳಿದ್ದೀವಿ, ನಾವು ದೊಡ್ಡವರಾಗ್ತಾ ನಾವೇ ಕಲೀತೀವಿ, ಇಲ್ಲವೆ ಕಲಿತವರನ್ನು ನೋಡಿ ಆನಂದ ಪಡುತ್ತೀವಿ, ಹೀಗಾಗಿ ಸಂಗೀತ ನಮಗೆ ಹೊಸದಲ್ಲವೇ ಅಲ್ಲ, ಮಾತ್ರವಲ್ಲ ಸಂಗೀತ ಯಾರಿಗೂ ಬೇಡ ಎಂದೆನ್ನಿಸಿಯೇ ಇಲ್ಲ ಎಂದು ಹೇಳಿದರು.ಸಂಗೀತ ಪ್ರಕೃತಿಯಲ್ಲೇ ಇದೆ. ಬೀಸುವ ಗಾಳಿ, ಸಮುದ್ರದ ಅಲೆ, ಹಕ್ಕಿಗಳ ಚಿಲಿಪಿಲಿ, ಮಾನವನ ಹೃದಯ ಬಡಿತದಲ್ಲಿ ಸಂಗೀತದ ನಾದ ಇದೆ. ಸಂಗೀತದಲ್ಲಿ ಒಂದು ಲಯ, ಒಂದು ರಾಗ, ಒಂದು ಶ್ರುತಿ ಇದೆ. ಹಾಗಾಗಿ ಇದುವರೆಗೆ ಯಾರೂ ಅದನ್ನು ತಿರಸ್ಕರಿಸಿಯೇ ಇಲ್ಲ. ಸಂಗೀತ ಪ್ರಕೃತಿಯಲ್ಲಿ ಇರು ವುದಷ್ಟೇ ಅಲ್ಲ. ಪಾಂಡಿತ್ಯ ಹೊಂದಿದವರು ರಾಗದಲ್ಲಿ ದೀಪ ಬೆಳಗಿಸಿದ್ದಾರೆ. ಮಳೆ ಬರಿಸಿದ್ದಾರೆ. ಇತ್ತೀಚೆಗೆ ಗುಣ ಆಗದಿರುವ ಕಾಯಿಲೆಯನ್ನು ಕೂಡ ಸಂಗೀತದಲ್ಲಿ ಗುಣಪಡಿಸಬಹುದು ಎನ್ನುವ ಥೆರಪಿಯ ಮೂಲಕ ನಿರೂಪಿಸಿರುವ ನಿದರ್ಶನವಿದೆ. ಎಷ್ಟೋ ರೈತರು ತಮ್ಮ ತೋಟ, ಹೊಲಗದ್ದೆಗಳಲ್ಲಿ ಟೇಪ್ ರೆಕಾರ್ಡರ್ ನಲ್ಲಿ ಸಂಗೀತವನ್ನು ಹಾಡಿಸಿ ಹೆಚ್ಚು ಬೆಳೆಯನ್ನೂ ಪಡೆದಿದ್ದಾರಂತೆ. ಹಾಗಾಗಿ ಸಂಗೀತ ಮನುಷ್ಯ ಜೀವನದಲ್ಲಿ ಅಷ್ಟು ಪ್ರಾಮುಖ್ಯವಾಗಿದೆ ಎಂದರು. ಸುಗಮ ಸಂಗೀತ ಗಂಗಾದ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ ಮಾತನಾಡಿ, ಸಂಗೀತಕ್ಕೆ ದೊಡ್ಡ ಶಕ್ತಿ ಇದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಮಕ್ಕಳಲ್ಲಿ ಸಂಗೀತ ಪ್ರಿಯತೆ ರೂಢಿಸಬೇಕು. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಕಿವಿಮಾತು ಹೇಳಿದರು.ಗಾಯಕ ಹಾಗೂ ಸಾಹಿತಿ ಎಚ್.ಎಂ.ನಾಗರಾಜರಾವ್ ಕಲ್ಕಟ್ಟೆ ಮಾತನಾಡಿ, ಆಡದೇ ಮಾಡಿದವರು ರೂಡಿಯೊಳಗುತ್ತಮರು ಎನ್ನುವಂತೆ ಪೂರ್ವಿ ಗಾನಯಾನ 100 ರ ಸಂಭ್ರಮಾಚರಣೆಗೆ ಕಾರಣರಾದ ಎಂ.ಎಸ್.ಸುಧೀರ್ ಆಡದೆ ಮಾಡಿದ ಸಾಧನೆ. ಇನ್ನು ಅತ್ಯುತ್ತಮ, ಸರ್ವ ಶ್ರೇಷ್ಠ ಸಾಧನೆ ಅವರಿಂದಾಗಲಿ ಎಂದರು. ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ.ಸಿ.ಕೆ. ಸುಬ್ಬರಾಯ ಸಮಾರೋಪ ಭಾಷಣ ಮಾಡಿದರು. ಯೂನಿವರ್ಸಲ್ ಕಾಫಿ ಫೌಂಡೇಶನ್‌ನ ಟ್ರಸ್ಟಿ ಎ.ಬಿ.ಸುದರ್ಶನ್ ಹಾಗೂ ಅಧ್ಯಕ್ಷತೆ ವಹಿಸಿದ್ದ ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್ ದೊಡ್ಡಯ್ಯ ಮಾತನಾಡಿದರು.ವೀಣಾ ಅರವಿಂದ್ ಹಾಗೂ ಪೂರ್ವಿಯ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್‌ಅ ಧ್ಯಕ್ಷ ಎಂ.ಎಸ್. ಸುಧೀರ್ ಸ್ವಾಗತಿಸಿದರು. ಗಾಯಕ ರಾಯನಾಯಕ್ ವಂದಿಸಿದರು. ಸುಮಾ ಪ್ರಸಾದ್ ಹಾಗೂ ರೂಪ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.
17 ಕೆಸಿಕೆಎಂ 4ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ ‘ಪೂರ್ವಿ ಗಾನಯಾನ 100’ರ ಪ್ರಯುಕ್ತ ‘ನಮ್ಮ ಹಾಡು ನಮ್ಮದು’ ಚಿತ್ರಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ನಟ ರಮೇಶ್ ಭಟ್ ಅವರನ್ನು ಸನ್ಮಾನಿಸಲಾಯಿತು. ಡಾ.ಸಿ.ಕೆ.ಸುಬ್ಬರಾಯ, ಡಾ.ಜೆ.ಪಿ.ಕೃಷ್ಣೇಗೌಡ, ಎ.ಬಿ.ಸುದರ್ಶನ್, ಎಚ್.ಎಂ. ನಾಗರಾಜರಾವ್ ಕಲ್ಕಟ್ಟೆ, ದೀಪಕ್‌ದೊಡ್ಡಯ್ಯ, ಎಂ.ಎಸ್.ಸುಧೀರ್, ರಾಯನಾಯಕ್, ಶ್ವೇತ ಭಾರದ್ವಾಜ್ ಇದ್ದರು.