ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಎಸ್ಪಿ ಕಚೇರಿ ಬಳಿ ರಸ್ತೆ ವಿಸ್ತರಣೆಗಾಗಿ 40ಕ್ಕೂ ಹೆಚ್ಚು ಮರಗಳನ್ನು ಕಡಿದಿರುವುದನ್ನು ಖಂಡಿಸಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮರ ಕಡಿದಿರುವ ಜಾಗದಲ್ಲಿ ಗಿಡ ನೆಟ್ಟು ಪ್ರತಿಭಟಿಸಿದರು.ಜಿಲ್ಲಾಡಳಿತ ತರ್ಕ ರಹಿತ ನಿರ್ಧಾರ ತೆಗೆದುಕೊಂಡು ಈಗಾಗಲೇ ಅಗಲವಾಗಿದ್ದ ಕೇವಲ ಇನ್ನೂರು ಮೀಟರ್ ರಸ್ತೆಯ ಅಭಿವೃದ್ಧಿ ಹೆಸರಿನಲ್ಲಿ ನೂರು ವರ್ಷಕ್ಕೂ ಹೆಚ್ಚು ಹಳೆಯದಾದ 40 ಮರಗಳನ್ನು ಕಡಿದಿದೆ. ಇವರ ಬಳಿ ಇರುವ ತರ್ಕವಾದರೂ ಏನು?, ರಸ್ತೆಯಲ್ಲಿ ಹೆಚ್ಚು ಅಪಘಾತವಾಗುತ್ತಿತ್ತೆ?, 200 ಮೀ. ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿದೆಯೇ?, ಅಲ್ಲಿದ್ದ ಮರಗಳಿಂದ ಯಾರಿಗಾದರೂ ತೊಂದರೆ ಆಗುತ್ತಿತ್ತೆ ಎಂದು ಅವರು ಪ್ರಶ್ನಿಸಿದರು.
20 ದಿನಗಳ ಹಿಂದೆ ಸರ್ವೋಚ್ಚ ನ್ಯಾಯಾಲಯ ಮರಗಳನ್ನು ಕಡಿಯುವುದು ಮನುಷ್ಯನನ್ನು ಕೊಲ್ಲುವುದಕ್ಕಿಂತ ಘೋರ ಕೃತ್ಯ ಎಂದು ಹೇಳಿದೆ. ತಪ್ಪು ಮಾಡಿದ ವ್ಯಕ್ತಿಗೆ ಪ್ರತಿ ಮರಕ್ಕೂ ಒಂದು ಲಕ್ಷದಂತೆ ದಂಡ ವಿಧಿಸಿದೆ. ಇಡೀ ಪ್ರಪಂಚದಲ್ಲಿ ಮರ ಬೆಳೆಸಿ ಎಂದು ಹೇಳುತ್ತಿರುವಾಗ ವಿನಾಕಾರಣ ಕಳ್ಳರಂತೆ ಮಧ್ಯರಾತ್ರಿಯಲ್ಲಿ ನಲವತ್ತು ಮರಗಳನ್ನು ಕಡಿದಿರುವುದು ಸಮಾಜದ್ರೋಹಿ, ಹೇಡಿತನದ ಕೃತ್ಯ. ಈ ಕೃತ್ಯಕ್ಕೆ ಆದೇಶ ಹೊರಡಿಸಿದವರ ವಿರುದ್ಧ ಹಾಗೂ ಈ ಕೃತ್ಯ ಎಸೆಗಲು ಗುತ್ತಿಗೆ ತೆಗೆದುಕೊಂಡ ವ್ಯಕ್ತಿಯ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಬೇಕು ಎಂದು ಅವರು ಆಗ್ರಹಿಸಿದರು.ಈ ಹೇಯ ಕೃತ್ಯಕ್ಕೆ ಬೆಂಬಲ ಸೂಚಿಸಿದ ನಗರ ಪಾಲಿಕೆ, ಜಿಲ್ಲಾಧಿಕಾರಿ ಇಂದು ನೆಡಲಾದ 40 ಸಸಿಗಳಿಗೆ ನಿತ್ಯ ನೀರು ಉಣಿಸಿ ಕಾಪಾಡಬೇಕು. ಕೇವಲ ಇನ್ನೂರು ಮೀಟರ್ ಇರುವ ಈ ರಸ್ತೆಯ ವಿಸ್ತರಣೆ ಮಾಡುವುದಕ್ಕೆ ಕೈ ಹಾಕಿದರೆ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ವಯಸ್ಸು, ಜಾತಿ, ಧರ್ಮ, ರಾಜಕೀಯ ಪಕ್ಷಾತೀತವಾಗಿ ಎಲ್ಲರನ್ನೂ ಒಗ್ಗೂಡಿಸಿ ರಸ್ತೆ ವಿಸ್ತರಣೆ ಮಾಡಲು ಬರುವವರಿಗೆ ತಕ್ಕ ಉತ್ತರ ನೀಡಲಾಗುವುದು. ಮಾಡಿರುವ ಕರ್ಮದ ಕೆಲಸವನ್ನು ಇಲ್ಲಿಗೆ ಕೈ ಬಿಟ್ಟು, ನೆಟ್ಟ ಸಸಿಗಳನ್ನು ಕಾಪಾಡಿಕೊಂಡು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮೋಹನ್ ಕುಮಾರ್, ಕಿರಣ್, ಕಾರ್ತಿಕ್, ಶಿವು, ಗಳಿಗರಹುಂಡಿ ವೆಂಕಟೇಶ್, ವರಕೂಡು ಕೃಷ್ಣೇಗೌಡ, ಕಡಕೊಳ ಕುಮಾರ್, ಪಟೇಲ್, ನಂಜನಗೂಡು ವೇಣು, ಹುಲ್ಲಹಳ್ಳಿ ಸತೀಶ್, ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಅನಿಲ್ ಥಾಮಸ್, ಜಾನ್ಸನ್ ಪಾಲ್, ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಬಿ. ಲಿಂಗರಾಜು, ಲಾರಿ ಮಾಲೀಕರ ಸಂಘದ ಬಿ. ಕೋದಂಡರಾಮ, ಶಾಹಿದ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.