ಯಕ್ಷಗಾನ ಅಕಾಡೆಮಿ ಕೇಂದ್ರ ಕಚೇರಿ ಸ್ಥಳಾಂತರ ಇಲ್ಲ. ಬೆಂಗಳೂರಿನಲ್ಲೇ ಅಕಾಡೆಮಿ ಕಾರ್ಯನಿರ್ವಹಣೆ

KannadaprabhaNewsNetwork | Published : Apr 17, 2025 12:05 AM

ಸಾರಾಂಶ

ದಕ್ಷಿಣ ಕನ್ನಡ, ಕರಾವಳಿ ಭಾಗದಲ್ಲಿ ಯಕ್ಷಗಾನ ಕಲಾವಿದರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯನ್ನು ಮಂಗಳೂರಿಗೆ ಸ್ಥಳಾಂತರಿಸಬೇಕೆಂಬ ಪ್ರಯತ್ನ ಬಹಳ ವರ್ಷಗಳಿಂದಲೂ ನಡೆಯುತ್ತಿತ್ತು. ಅಂತಿಮವಾಗಿ ಕೇಂದ್ರ ಕಚೇರಿಯನ್ನು ರಾಜಧಾನಿಯಲ್ಲೇ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ನಾಟಕ ಯಕ್ಷಗಾನ ಅಕಾಡೆಮಿ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಉಳಿಯಬೇಕೇ ಇಲ್ಲವೇ ಮಂಗಳೂರಿಗೆ ಸ್ಥಳಾಂತರಗೊಳ್ಳಬೇಕೋ ಎನ್ನುವ ವಿಚಾರವಾಗಿ ಹಲವು ವರ್ಷಗಳಿಂದ ನಡೆಯುತ್ತಿದ್ದ ಚರ್ಚೆಗೆ ಕೊನೆಗೂ ತೆರೆಬಿದ್ದಿದೆ.ಅಂತಿಮವಾಗಿ ಕೇಂದ್ರ ಕಚೇರಿಯನ್ನು ರಾಜಧಾನಿಯಲ್ಲೇ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ಈ ಸಂಬಂಧ ಸ್ವತಃ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮಶೆಟ್ಟಿ ಅವರು ಈ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.

ದಕ್ಷಿಣ ಕನ್ನಡ, ಕರಾವಳಿ ಭಾಗದಲ್ಲಿ ಯಕ್ಷಗಾನ ಕಲಾವಿದರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯನ್ನು ಮಂಗಳೂರಿಗೆ ಸ್ಥಳಾಂತರಿಸಬೇಕೆಂಬ ಪ್ರಯತ್ನ ಬಹಳ ವರ್ಷಗಳಿಂದಲೂ ನಡೆಯುತ್ತಿತ್ತು. ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಆಯ್ಕೆಯ ಸರ್ವಸದಸ್ಯರ ಸಭೆ ಮಂಗಳೂರಿನಲ್ಲಿ ಮತ್ತು ಉಡುಪಿಯಲ್ಲಿ ಪ್ರಶಸ್ತಿಗಳ ಘೋಷಣೆ, ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿತ್ತು. ಇದು ಯಕ್ಷಗಾನ ಅಕಾಡೆಮಿ ಮಂಗಳೂರು ಇಲ್ಲವೇ ಉಡುಪಿಗೆ ಸ್ಥಳಾಂತರವಾಗಲಿದೆ ಎಂಬ ಚರ್ಚೆಗೆ ಇಂಬು ನೀಡಿತ್ತು. ಹಾಗಾಗಿ ಅಕಾಡೆಮಿ ಸ್ಥಳಾಂತರ ಚರ್ಚೆ ಮತ್ತೆ ಮುನ್ನಲೆಗೆ ಬಂದಿತ್ತು.2018ರಲ್ಲಿ ಹಿರಿಯ ನಟಿ ಉಮಾಶ್ರೀ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದಾಗ ಯಕ್ಷಗಾನ ಅಕಾಡೆಮಿಯನ್ನು ಮಂಗಳೂರಿಗೆ ಸ್ಥಳಾಂತರಿಸುವಂತೆ ಆದೇಶ ಮಾಡಿದ್ದರು. ಸರ್ಕಾರದ ಈ ಆದೇಶದ ವಿರುದ್ಧ ಕಲಾವಿದರ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಕಾಡೆಮಿಯ ಅಂದಿನ ಅಧ್ಯಕ್ಷರಾಗಿದ್ದ ಎಂ.ಎ. ಹೆಗಡೆ ಸೇರಿದಂತೆ ಇತರೆ ಸದಸ್ಯರು ಸರ್ಕಾರ ಈ ಕ್ರಮವನ್ನು ಆಕ್ಷೇಪಿಸಿದ್ದರು. ಕಾಂಗ್ರೆಸ್‌ - ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಯಕ್ಷಗಾನ ಅಕಾಡೆಮಿ ಸ್ಥಳಾಂತರ ಆದೇಶ ಹಿಂಪಡೆಯಲಾಗಿತ್ತು. ಆ ನಂತರ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಮತ್ತೆ ಯಕ್ಷಗಾನ ಅಕಾಡೆಮಿಯನ್ನು ಉಡುಪಿಗೆ ಸ್ಥಳಾಂತರ ಮಾಡಬೇಕೆಂಬ ಪ್ರಯತ್ನಗಳು ನಡೆದಿದ್ದವು.

ಮೂಡಲಪಾಯ ಕಲಾವಿದರ ವಿರೋಧ:ಯಕ್ಷಗಾನದಲ್ಲಿ ತೆಂಕುತಿಟ್ಟು ಯಕ್ಷಗಾನ, ಬಡಗುತಿಟ್ಟು ಯಕ್ಷಗಾನ, ಬಡಾಬಡಗುತಿಟ್ಟು ಯಕ್ಷಗಾನ, ಮೂಡಲಪಾಯ ಯಕ್ಷಗಾನ, ತಾಳಮದ್ದಲೆ, ಹೇಳಿಕೆ ಯಕ್ಷಗಾನೀಯ ಗೊಂಬೆಯಾಟ, ಕೇಳಿಕೆ, ಮೂಡಲಪಾಯ ಗೊಂಬೆಯಾಟ ಹೀಗೆ ಹಲವು ಪ್ರಕಾರಗಳು ಇವೆ. ಈ ಎಲ್ಲವೂ ಯಕ್ಷಗಾನ ಅಕಾಡೆಮಿ ವ್ಯಾಪ್ತಿಗೆ ಬರುತ್ತವೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಮಂಡ್ಯ, ಚಾಮರಾಜನಗರ, ಮೈಸೂರಿನಲ್ಲಿ ಮೂಡಲಪಾಯ ಕಲಾವಿದರ ಸಂಖ್ಯೆ ಹೆಚ್ಚಾಗಿದೆ. ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಕೇಳಿಕೆ ಮತ್ತು ಮೂಡಲಪಾಯವಿದೆ. ಹಾಗಾಗಿ ಒಂದು ವೇಳೆ ಯಕ್ಷಗಾಯ ಅಕಾಡೆಮಿ ಮಂಗಳೂರು ಇಲ್ಲವೇ ಉಡುಪಿಗೆ ಸ್ಥಳಾಂತರ ಮಾಡುವುದಾದೆ, ಮೂಡಲಪಾಯಕ್ಕೆ ಪ್ರತ್ಯೇಕ ಅಕಾಡೆಮಿ ಸ್ಥಾಪಿಸಬೇಕು ಎಂದು ಮೂಡಲಪಾಯ ಕಲಾವಿದರು ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದಾರೆ.

ಸ್ಥಳಾಂತರದ ಆಲೋಚನೆಯೇ ಇಲ್ಲ.ಕೋಲಾರ, ಮಂಡ್ಯ, ಮೈಸೂರು, ತುಮಕೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಮೂಡಲಪಾಯದ ಕಲಾವಿದರ ಹೆಚ್ಚಾಗಿ ಇದ್ದಾರೆ. ಮಂಗಳೂರಿಗೆ ಅಕಾಡೆಮಿ ಸ್ಥಳಾಂತರ ಮಾಡಿದರೆ ಅವರಿಗೆ ಬಹಳ ದೂರವಾಗುತ್ತದೆ. ಆದ್ದರಿಂದ ಬೆಂಗಳೂರಿನಲ್ಲೇ ಅಕಾಡೆಮಿ ಇರುವುದು ಒಳ್ಳೆಯದು. ಅಕಾಡೆಮಿ ಎಲ್ಲಿ ಇರಬೇಕು, ಎಲ್ಲಿಗೆ ಸ್ಥಳಾಂತರ ಮಾಡಬೇಕು ಎನ್ನುವುದರ ಬಗ್ಗೆ ಸರ್ಕಾರ ಮಧ್ಯಪ್ರವೇಶ ಮಾಡಿಲ್ಲ. ಅಕಾಡೆಮಿ ಸದಸ್ಯರಿಗೂ ಇದನ್ನು ಸ್ಥಳಾಂತರ ಮಾಡಬೇಕೆಂಬ ಅಲೋಚನೆ ಇಲ್ಲ. ನಮ್ಮ ಮನಸ್ಸಿನಲ್ಲೂ ಈ ಬಗ್ಗೆ ಚಿಂತನೆ ನಡೆಸಿರಲಿಲ್ಲ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮಶೆಟ್ಟಿ ಅವರು ಕನ್ನಡಪ್ರಭಕ್ಕೆ ತಿಳಿಸಿದರು.

Share this article