ಕನ್ನಡಪ್ರಭ ವಾರ್ತೆ ರಾಮನಗರ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಶಾಸಕರು ದಲಿತ ಸಮುದಾಯದ ಅಭಿವೃದ್ಧಿ ಬಗ್ಗೆ ಮಾತನಾಡದೆ ದಲಿತ ಸಂಘಟನೆಗಳನ್ನು ಕುರಿತು ದಬ್ಬಾಳಿಕೆ ಚಾಳಿ ಬಿಡಬೇಕೆಂದು ಹೇಳಿ ಅವಮಾನ ಮಾಡಿದ್ದಾರೆ. ಶಾಸಕರು ಹಣ ಹಾಗೂ ಅಧಿಕಾರ ಮದದಿಂದ ಮಾತನಾಡುವುದು ಸರಿಯಲ್ಲ. ಎಲ್ಲಾ ದಲಿತ ಮುಖಂಡರನ್ನು ಹಣದಿಂದ ಖರೀದಿಸುವುದು ಸಾಧ್ಯವಿಲ್ಲ. ದಲಿತ ಮುಖಂಡರು ತಮ್ಮ ಸ್ವಂತ ಹಣದಿಂದ ಮಾಡಿದ ಸ್ವಾಭಿಮಾನದ ಭೀಮೋತ್ಸವವನ್ನು ಸಹಿಸದೆ ಟೀಕೆ ಮಾಡಿರುವುದು ಸರಿಯಲ್ಲ ಎಂದು ಹೇಳಿದರು.
ದಲಿತ ಸಂಘಟನೆಗಳ ನಾಯಕರು ತಮ್ಮ ಜೀವನವನ್ನೇ ಸಮಸಮಾಜಕ್ಕಾಗಿ ತ್ಯಾಗ ಮಾಡಿದ್ದಾರೆ. ಸ್ವಾರ್ಥಕ್ಕಾಗಿ ಎಂದೂ ಹೋರಾಟ ಮಾಡಿಲ್ಲ. ಈ ರೀತಿ ಮಾತನಾಡಲು ನಿಮಗೆ ನಾಚಿಕೆ ಆಗಬೇಕು. ನಿಮ್ಮ ಹೇಳಿಕೆ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡುತ್ತೇವೆ. ನ್ಯಾಯಾಲಯದಲ್ಲಿಯೂ ಪ್ರಕರಣ ದಾಖಲಿಸುತ್ತೇವೆ. ಇನ್ನು ಮುಂದಾದರೂ ದಲಿತ ಸಂಘಟನೆಗಳನ್ನು ಕೀಳಾಗಿ ಕಾಣುವ ಮನಸ್ಥಿತಿ ಬದಲಾಯಿಸಿಕೊಳ್ಳಿ ಎಂದು ಹೇಳಿದರು.ದಲಿತ ಮುಖಂಡ ಮತ್ತಿಕೆರೆ ಹನುಮಂತಯ್ಯ ಮಾತನಾಡಿ, ಶಾಸಕರ ಮೇಲೆ ವೈಯಕ್ತಿಕವಾಗಿ ಗೌರವ ಇದೆ. ಅವರು ಶಾಸಕರಾದಾಗ ಸಂತಸ ಪಟ್ಟವರಲ್ಲಿ ನಾನೂ ಒಬ್ಬನಾಗಿದ್ದೇನೆ. ಆದರೆ, ಅಧಿಕಾರಿಗಳನ್ನು ಸಮರ್ಥನೆ ಮಾಡಿಕೊಳ್ಳಲು ಹೋಗಿ ದಲಿತ ಸಂಘಟನೆಗಳ ಟೀಕೆ ಮಾಡಿರುವುದು ಸರಿಯಲ್ಲ. ಶಾಸಕರು ಪ್ರಜ್ಞಾವಂತರಾಗಿ ಮಾತನಾಡಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಸುರೇಶ್, ದಿನೇಶ್, ಅಂಜನಾಪುರ ವಾಸು, ಲೋಕೇಶ್ ಮೌರ್ಯ, ಕೂಡ್ಲೂರು ವಿನಯ್, ಪುನೀತ್ ರಾಜ್, ಸುರೇಶ್, ಸಿದ್ದರಾಮು ನೀಲಸಂದ್ರ, ಶಂಕರ್ ಮೌರ್ಯ, ವಿಜಯಪುರ ಅಪ್ಪಾಜಿ, ಪರಮೇಶ್, ಗೋವಿಂದಯ್ಯ, ಪ್ರಸಾದ್, ಗಂಗಾಧರ್ ಲಕ್ಕಸಂದ್ರ, ಸಿ. ಲೋಕೇಶ್, ಗೋಪಿ ಜಯಪುರ, ಇಟ್ಟಮಡು ಶ್ರೀಧರ್ ಇತರರಿದ್ದರು.