ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಭಾರತ, ಪಾಕಿಸ್ತಾನ, ಬಾಂಗ್ಲಾ ಸೇರಿದಂತೆ ಭಾರತದಲ್ಲಿ ಪುರಾತನ ಕಾಲದಲ್ಲಿ ಅಳವಡಿಕೆಯಾಗಿದ್ದ ಭಾಗಗಳು ಒಟ್ಟು ಸೇರಿ ಅಖಂಡ ಭಾರತ ನಿರ್ಮಾಣ ನಮ್ಮ ಸಂಕಲ್ಪ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಮಂಗಳೂರು ವಿಭಾಗ ಪ್ರಮುಖ್ ಕೇಶವ ಬಂಗೇರ ಕರೆ ನೀಡಿದ್ದಾರೆ.ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಭಾನುವಾರ ನಡೆದ ಅಖಂಡ ಭಾರತ ಸಂಕಲ್ಪ ದಿನದ ಬೃಜತ್ ಪಂಜಿನ ಮೆರವಣಿಗೆ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.ಮೂಡುಬಿದಿರೆಯ ನ್ಯಾಯವಾದಿ ಶರತ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಎರಡು ಬಾರಿ ಕರಿ ನೀರಿನ ಶಿಕ್ಷೆ ಅನುಭವಿಸಿದ ವೀರ ಸಾವರ್ಕರ್‌ರನ್ನೇ ಟೀಕೆ ಮಾಡುವ ಜನರ ನಡುವೆ ನಾವು ಬದುಕುವಂತಾಗಿದೆ. ರಾಜ್ಯದ ವಿಧಾನಸೌಧದಲ್ಲೇ ಪಾಕ್‌ಪರ ಘೋಷಣೆ ಕೂಗಿದ ದೇಶ ವಿರೋಧಿಗಳಿಗೆ ಪರವಾಗಿರುವ ಜನರ ಹೇಯ ಮಾನಸಿಕತೆ ಖಂಡಿಸಬೇಕಾಗಿದೆ ಎಂದರು.
ಪ್ರಾಂತ್ಯ ಕಾರ್ಯಕಾರಿಣಿ ಸದಸ್ಯೆ ಪ್ರಜ್ಞಾ ಕಾಶ್ಯಪ್ ಪ್ರಾಸ್ತಾವಿಕ ಮಾತನಾಡಿದರು. ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಕಾರ್ಯಕ್ರಮ ಪ್ರಾರಂಭಿಸಲಾಯಿತು.ಸಾವಿರ ಕಂಬದ ಬಸದಿಯಲ್ಲಿ ಪಂಜಿನ ಮೆರವಣಿಗೆಗೆ ಚಾಲನೆ ನೀಡಿದ ಶ್ರೀ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಬಾಂಗ್ಲಾ ದೇಶದಲ್ಲಿ ಅರಾಜಕತೆ ಸೃಷ್ಟಿಸಿ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಿರುವುದನ್ನು ಖಂಡಿಸಿದರು.
ತಾಲೂಕು ಸಂಯೋಜಕ್ ಹರೀಶ್ಚಂದ್ರ ಕೆ.ಸಿ. ಇದ್ದರು. ಜಿಲ್ಲಾ ಸಹಸಂಯೋಜಕ್ ಸಮಿತ್‌ರಾಜ್ ದರೆಗುಡ್ಡೆ ಸ್ವಾಗತಿಸಿದರು. ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ ಧನ್ಯವಾದವಿತ್ತರು. ಗಣೇಶ್ ಅಳಿಯೂರು ನಿರೂಪಿಸಿದರು.ಜಾಗರಣ ವೇದಿಕೆ ಪ್ರಮುಖರಾದ ಮಹೇಶ್ ಬೈಲೂರು, ರವಿರಾಜ್ ಕಡಂಬ, ಸಂತೋಷ್ ಜೈನ್, ಶರತ್ ಮಿಜಾರು, ಸಂದೀಪ್ ಹೆಗ್ಡೆ, ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಲಕ್ಷ್ಮಣ್ ಪೂಜಾರಿ ಪಾಲ್ಗೊಂಡರು.