ತಾಳೆಗರಿಗಳಲ್ಲಿ ಅಪಾರ ಜ್ಞಾನಭಂಡಾರ: ಡಾ. ಸುರೇಶ ಬಿ. ಇಟ್ನಾಳ

KannadaprabhaNewsNetwork |  
Published : Jul 07, 2026, 02:45 AM IST
ಕೊಪ್ಪಳ ನಗರದ ಅಗಸ್ತ್ಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಪ್ರಾಚೀನ ತಾಳೆಗರಿ ಹಸ್ತಾಂತರ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಕೊಪ್ಪಳ ನಗರದ ಕಿಡದಾಳ ರಸ್ತೆಯ ಕಿಮ್ಸ್ ವೈದ್ಯಕೀಯ ಕಾಲೇಜು ಎದುರುಗಡೆ ಇರುವ ಅಗಸ್ತ್ಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಸರ್ಕಾರಕ್ಕೆ ಪ್ರಾಚೀನ ತಾಳೆಗರಿ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಕೊಪ್ಪಳ: ನಮ್ಮ ಪೂರ್ವಜರು ತಮ್ಮ ಜ್ಞಾನ, ಆಲೋಚನೆಗಳನ್ನು, ಮಹತ್ವದ ದಾಖಲೆಗಳಾಗಬಹುದಾದ ಸಂಗತಿಗಳನ್ನು ತಾಳೆಗರಿಯಲ್ಲಿ ಬರೆದಿಟ್ಟುಕೊಳ್ಳುತ್ತಿದ್ದರು. ಕಾಲಾಂತರದಲ್ಲಿ ಅವರು ಬಿಟ್ಟುಹೋಗಿರುವ ಜ್ಞಾನದ ಭಂಡಾರವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಲ್ಲಿ ತಾಳೆಗರಿಗಳ ಪಾತ್ರ ಅನನ್ಯವಾದುದು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.

ನಗರದ ಕಿಡದಾಳ ರಸ್ತೆಯ ಕಿಮ್ಸ್ ವೈದ್ಯಕೀಯ ಕಾಲೇಜು ಎದುರುಗಡೆ ಇರುವ ಅಗಸ್ತ್ಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಪ್ರಾಚೀನ ತಾಳೆಗರಿ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಭಾರತ ಶ್ರೀಮಂತ, ಐತಿಹಾಸಿಕ, ಸಾಂಸ್ಕೃತಿಕ, ವಿಜ್ಞಾನದ ಗತವೈಭವ ಹೊಂದಿದೆ. ಈ ಗತವೈಭವವು ಹಸ್ತಪ್ರತಿಗಳಲ್ಲಿದೆ. ಸಂಸ್ಕೃತ, ಕನ್ನಡ, ತೆಲುಗು ಹೀಗೆ ವಿವಿಧ ಭಾಷೆಗಳಲ್ಲಿ ಹಸ್ತಪ್ರತಿಗಳಿವೆ. ಪ್ರಾಚೀನ ತಾಳೆಗರಿಗಳು ಕೇವಲ ಎಲೆಗಳಲ್ಲ, ಅವು ನಮ್ಮ ಸಂಸ್ಕೃತಿ, ಕಲೆ, ಸಾಹಿತ್ಯ, ವಿಜ್ಞಾನ ಮತ್ತು ವೈದ್ಯಕೀಯ ಇತಿಹಾಸದ ಜೀವಂತ ಪುರಾವೆಗಳಾಗಿವೆ. ಇವುಗಳ ಮೂಲಕ ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಅನಾವರಣ ಮಾಡುವ ಪ್ರಯತ್ನವಾಗುತ್ತಿದೆ ಎಂದರು.

ಡಿಜಿಟಲೀಕರಣದ ಅಗತ್ಯತೆ: ಕಾಲದ ಹೊಡೆತಕ್ಕೆ ಸಿಲುಕಿ ನಶಿಸಿ ಹೋಗುತ್ತಿರುವ ಇಂತಹ ಅಪೂರ್ವ ಹಸ್ತಪ್ರತಿಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸುವುದು ಮತ್ತು ಅವುಗಳನ್ನು ಡಿಜಿಟಲೀಕರಣಗೊಳಿಸಿ ಸಾರ್ವಜನಿಕರ ಹಾಗೂ ಸಂಶೋಧಕರ ಬಳಕೆಗೆ ಮುಕ್ತಗೊಳಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಸಾರ್ವಜನಿಕರ ಬಳಿ ಅಥವಾ ಖಾಸಗಿ ಸಂಗ್ರಹಗಳಲ್ಲಿ ಇಂತಹ ಅಮೂಲ್ಯವಾದ ತಾಳೆಗರಿಗಳು ಅಥವಾ ಇತರ ಪ್ರಾಚೀನ ದಾಖಲೆಗಳಿದ್ದರೆ, ಅವುಗಳನ್ನು ಜಿಲ್ಲಾಡಳಿತ, ಸರ್ಕಾರದ ಪುರಾತತ್ವ ಇಲಾಖೆ ಅಥವಾ ಸಂಬಂಧಪಟ್ಟ ಸಂಸ್ಥೆಗಳಿಗೆ ಹಸ್ತಾಂತರಿಸುವ ಮೂಲಕ ಇತಿಹಾಸ ರಕ್ಷಣೆಗೆ ಕೊಪ್ಪಳ ಜಿಲ್ಲೆಯ ಸಾರ್ವಜನಿಕರು ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕೊಪ್ಪಳ ಜಿಲ್ಲೆಯಲ್ಲಿರುವ ಮಠ-ಮಾನ್ಯಗಳಲ್ಲಿ, ರಾಜವಂಶಸ್ಥರಲ್ಲಿ, ಸಾರ್ವಜನಿಕರಲ್ಲಿ, ವೈದ್ಯರಲ್ಲಿ, ಸಾಹಿತಿಗಳಲ್ಲಿ ವಿವಿಧ ಭಾಗಗಳ ಹಸ್ತಪ್ರತಿಗಳಿವೆ. ಈಗಾಗಲೇ ಜಿಲ್ಲಾಡಳಿತದಿಂದ ಎರಡು ಬಾರಿ ಸಭೆ ನಡೆಸಿ, ವಾರ್ತಾ ಇಲಾಖೆಯ ಮೂಲಕ ಅಗತ್ಯ ಪ್ರಚಾರ ಕೈಗೊಳ್ಳಲಾಗಿದೆ. ಆನೆಗೊಂದಿಯ ರಾಜವಂಶಸ್ಥರು, ತಮ್ಮ ಹತ್ತಿರ ಇರುವ ಪುರಾತನ ಹಸ್ತಪ್ರತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಂಸದ ಕರಡಿ ಸಂಗಣ್ಣ ಮಾತನಾಡಿ, ತಾಳೆಗರಿಯ ಅಮೂಲ್ಯ ಹಸ್ತಪ್ರತಿಗಳನ್ನು ಜಿಲ್ಲಾಡಳಿತದ ಮೂಲಕ ಸಂಗ್ರಹಿಸಿ, ಸರ್ಕಾರಿ ದಾಖಲೆಗಳಾಗಿ ಸಂರಕ್ಷಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕೆಲಸ. ಈ ತಾಳೆಗರಿಗಳನ್ನು ಡಿಜಿಟಲೀಕರಣ ಮಾಡಬೇಕು. ಇದರಿಂದ ಸಂಶೋಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಹೊಸಪೇಟೆ (ಕಮಲಾಪುರ-ಹಂಪಿ) ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕ ಡಾ. ಆರ್. ಶೆಜೇಶ್ವರ ಮಾತನಾಡಿ, ಕರ್ನಾಟಕದ ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ಪ್ರಾಚೀನ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುವಲ್ಲಿ ಪುರಾತತ್ವ ಇಲಾಖೆಯ ಶೋಧನೆಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಅಮೂಲ್ಯ ಐತಿಹಾಸಿಕ ಪುರಾವೆಗಳನ್ನು ಸಾರ್ವಜನಿಕರು ರಕ್ಷಿಸಬೇಕು ಎಂದು ಹೇಳಿದರು.

ಕೊಪ್ಪಳದ ಅಗಸ್ತ್ಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸಂಸ್ಥೆಯ ಅಧ್ಯಕ್ಷ ಡಾ. ಸಂಗಮೇಶ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತೀಯ ಜ್ಞಾನ ಪರಂಪರೆಯಲ್ಲಿ ಹಸ್ತಪ್ರತಿಗಳು ಪ್ರಮುಖ ಸ್ಥಾನ ಹೊಂದಿವೆ. ಈ ಹಸ್ತಪ್ರತಿಗಳು ವೈದ್ಯಕೀಯ, ತತ್ವಶಾಸ್ತ್ರ, ಸಂಸ್ಕೃತಿ, ಧರ್ಮ ಹಾಗೂ ವಿಜ್ಞಾನ ಕ್ಷೇತ್ರಗಳ ಅಮೂಲ್ಯ ಜ್ಞಾನ ಸಂಪತ್ತನ್ನು ಒಳಗೊಂಡಿವೆ. ಇಂತಹ ಅಪರೂಪದ ಹಾಗೂ ಐತಿಹಾಸಿಕ ಮಹತ್ವವುಳ್ಳ ಆಯುರ್ವೇದ ಹಸ್ತಪ್ರತಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ಅಗಸ್ತ್ಯ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯು ಸಂಗ್ರಹಿಸಿ ಸಂರಕ್ಷಿಸಿದ್ದ ಹಸ್ತಪ್ರತಿಗಳನ್ನು ಪುರಾತತ್ವ ಇಲಾಖೆ, ಪ್ರಾಧಿಕಾರಕ್ಕೆ ಹಸ್ತಾಂತರಿಸುವ ಮಹತ್ವದ ಕಾರ್ಯ ಕೈಗೊಂಡಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಆಯುರ್ವೇದ ವೈದ್ಯ ವಿಜ್ಞಾನಿ ಡಾ. ಚಲಪತಿ, ಕೊಪ್ಪಳದ ಅಗಸ್ತ್ಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸಂಸ್ಥೆಯ ಡಾ. ಲೋಕೇಶ ಟೇಕಲ್, ಡಾ. ಮಹಾಂತಗೌಡ ಬಿರಾದಾರ ಹಾಗೂ ಕನ್ನಡ ಉಪನ್ಯಾಸಕ ಡಾ. ಸಿದ್ದಲಿಂಗಪ್ಪ ಕೋಟ್ನೆಕಲ್ ಉಪಸ್ಥಿತರಿದ್ದರು.

ಉಪನ್ಯಾಸಕ ಶಿವನಗೌಡ ಪೊಲೀಸ್‌ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು. ಡಾ. ಪ್ರಜ್ವಲ್ ಮತ್ತು ಶ್ರೀದೇವಿ ಪ್ರಾರ್ಥನೆಗೈದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೌಶಲ್ಯ ಅಭಿವೃದ್ಧಿ ಪಡಿಸುವುದೇ ಕಲಾ ಉತ್ಸವದ ಉದ್ದೇಶ: ತಹಸೀಲ್ದಾರ
ಮೂಲಭೂತ ಸೌಲಭ್ಯಕ್ಕೆ ಆಗ್ರಹ: ಎಸ್‌ಐಆರ್‌ ಜಾಗೃತಿ ಬೈಕ್‌ ರ್‍ಯಾಲಿಗೆ ತಡೆ