ಪರಿಸರ ನಾಶ ಮಾಡುವ ಕಾರ್ಖಾನೆಗಳನ್ನು ಸರ್ಕಾರ ಮುಚ್ಚಲಿ: ಚೂನಪ್ಪ ಪೂಜೇರಿ

KannadaprabhaNewsNetwork |  
Published : Jul 07, 2026, 02:45 AM IST
ಕೊಪ್ಪಳ ನಗರಸಭೆ ಮುಂದೆ ನಡೆಸುತ್ತಿರುವ ಬಲ್ಡೋಟ ಹಟಾವೋ 249ನೇ ದಿನದ ಧರಣಿಯಲ್ಲಿ ಚೂನಪ್ಪ ಪೂಜೇರಿ ಮಾತನಾಡಿದರು. | Kannada Prabha

ಸಾರಾಂಶ

ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯಿಂದ ನಗರಸಭೆ ಮುಂದೆ ನಡೆಸುತ್ತಿರುವ ಬಲ್ಡೋಟ ಹಟಾವೋ 249ನೇ ದಿನದ ಧರಣಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಭಾಗವಹಿಸಿ ಬೆಂಬಲ ಸೂಚಿಸಿದರು.

ಕೊಪ್ಪಳ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ದೇವರ ಮೇಲೆ ಬಹಳ ನಂಬಿಕೆ ಇಟ್ಟವರು. ಅವರು ಕೊಪ್ಪಳ ಜನರು ನೆಮ್ಮದಿಯಾಗಿ ಬದುಕಲು ಅಡ್ಡಿಯಾದ ಮಾಲಿನ್ಯಕಾರಿ ಎಲ್ಲ ಕಾರ್ಖಾನೆಗಳನ್ನು ಮುಚ್ಚಲಿ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಒತ್ತಾಯಿಸಿದರು.

ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯಿಂದ ನಗರಸಭೆ ಮುಂದೆ ನಡೆಸುತ್ತಿರುವ ಬಲ್ಡೋಟ ಹಟಾವೋ 249ನೇ ದಿನದ ಧರಣಿಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಮುಖ್ಯಮಂತ್ರಿ ರೈತರ ಭೂಮಿ ಮೇಲೆ ಕಣ್ಣು ಹಾಕಿದ್ದಾರೆ. ಇದು ಒಂದೊಳ್ಳೆ ಸರ್ಕಾರದ ನಡೆಯಲ್ಲ. ಇಂದು ಬೆಂಗಳೂರು, ನಾಳೆ ಕೊಪ್ಪಳ, ನಾಡಿದ್ದು ಇನ್ನಾವುದೋ ಜಿಲ್ಲೆ... ಹೀಗೆ ಭೂಮಿಯನ್ನು ಕಬಳಿಸುತ್ತಾ ಹೋದರೆ ಹೊಟ್ಟೆಗೆ ರೊಕ್ಕ ತಿನ್ನಲಾಗುತ್ತದೆಯೇ? ಬೆಂಗಳೂರು ಉಪನಗರ ಯೋಜನೆ ಯಶಸ್ವಿಯಾದರೆ ರಾಜ್ಯಾದ್ಯಂತ ಸರ್ಕಾರ ಕೃಷಿ ಭೂಮಿಗೆ ಕೈಹಾಕಿ ಕಾರ್ಪೊರೇಟರ್ ಸಂಸ್ಥೆಗಳಿಗೆ ಒಪ್ಪಿಸಿ ಬಿಡುತ್ತದೆ. ಕೃಷಿ ಫಾರ್ಮಿಂಗ್ ಮಾಡುವ ಕಂಪನಿಗಳು ಗೋದಾಮುಗಳಲ್ಲಿ ಆಹಾರ ದಾಸ್ತಾನು ಮಾಡಿ ಅಭಾವ ಸೃಷ್ಟಿಸಿ, ಬೆಲೆ ಏರಿಕೆ ಮಾಡಿ ಲಾಭ ಮಾಡಿಕೊಳ್ಳುವಾಗ ಕೂಲಿ ಕಾರ್ಮಿಕರಾಗುವ ಈಗಿನ ರೈತರು ಅನ್ನಕ್ಕೆ ಪರದಾಡುವಂತೆ ಆಗುತ್ತದೆ ಎಂದು ಹೇಳಿದರು.

ಕೊಪ್ಪಳ ಗವಿಸಿದ್ದೇಶ್ವರರು ಬಲ್ಡೋಟ ವಿರುದ್ಧ ಹೋರಾಟ ಆರಂಭಿಸಿದ್ದನ್ನು ನಾವು ಗಮನಿಸಿದ್ದೇವೆ. ಗುರ್ಲಾಪುರ ಹೋರಾಟ ಹೆದ್ದಾರಿಗಳನ್ನು ಬಂದ್ ಮಾಡಿ ಗೆದ್ದಿತು. ಅಂತಹ ಹೋರಾಟ ಇಲ್ಲಿ ಕೂಡ ನಡೆಸಲು ನಾವು ಯೋಚಿಸುತ್ತಿದ್ದೇವೆ. ಇಲ್ಲಿಯ 22 ಹಳ್ಳಿ ಜನ ರೋಗ-ರುಜಿನಗಳಿಂದ ಬಾಧಿತರಾಗಿದ್ದಾರೆ. ಹೋರಾಟಕ್ಕೆ ಪ್ರಾರಂಭ ಇರುವಂತೆ ಅಂತ್ಯವೂ ಇದೆ. ಕೊಪ್ಪಳ ಲಕ್ಷಗಟ್ಟಲೆ ಜನರು ಕಾರ್ಖಾನೆ ಧೂಳು ಬಾಧಿತರಾಗುತ್ತಿದ್ದಾರೆ. ಈ ಜನರ ಬೆನ್ನಿಗೆ ನಿಲ್ಲಲು ನಾವು ಕೂಡ ದೊಡ್ಡ ಪ್ರಮಾಣದಲ್ಲಿ ಹೋರಾಟ ರೂಪಿಸುತ್ತೇವೆ ಎಂದರು.

ಮಂಗಳವಾರ ನಡೆಯುವ ''''ಕೊಪ್ಪಳ ಸಪ್ಪಳ ಆಂದೋಲನ'''' ಬಾಧಿತ ಹಳ್ಳಿ ರೈತರು, ನಗರದ ನಾಗರಿಕರು ತಮ್ಮ ಸಂಪ್ರದಾಯ ವಾದ್ಯ ಪರಿಕರಗಳೊಂದಿಗೆ ಬರಬೇಕು. ಉಣ್ಣುವ ತಟ್ಟೆ ಬರಿದು ಮಾಡಬೇಡಿ ಎಂದು ಆಗ್ರಹಿಸಲು ಖಾಲಿ ತಟ್ಟೆ ಹಿಡಿದು ಬಾರಿಸೋಣ. ಬೆಳಗ್ಗೆ 10 ಗಂಟೆಗೆ ಧರಣಿ ಸ್ಥಳಕ್ಕೆ ಎಲ್ಲರೂ ಬರಬೇಕು. ಅಲ್ಲಿಂದ ನಡೆಯುವ ''''ಕೊಪ್ಪಳ ಸಪ್ಪಳ'''' ಆಂದೋಲನದಲ್ಲಿ ಪಾಲ್ಗೊಳ್ಳಬೇಕು ಎಂದರು.

ಧರಣಿಗೆ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಬೆಂಬಲಿಸಿದರು. ಹೋರಾಟದಲ್ಲಿ ಸರೋಜಾ ಬಾಕಳೆ, ಪ್ರಕಾಶಕಿ ಮಾಲಾ ಬಡಿಗೇರ, ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಇನ್ನೊಬ್ಬ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶರಣಪ್ಪ ಮರಳಿ, ಜಿಲ್ಲಾಧ್ಯಕ್ಷ ಸುಖಮುನಿ ಬಡಿಗೇರ, ರೈತ ಮುಖಂಡ ಭೀಮಸೇನ ಕಲಕೇರಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಮಹೇಶ ವದ್ನಾಳ ಬಗನಾಳ, ಮಹಾದೇವಪ್ಪ ಮಾವಿನಮಡು, ಮಖ್ಬುಲ್ ರಾಯಚೂರು, ಶಿವಪ್ಪ ಹಲಗೇರಿ, ಶಿವಪ್ಪ ಜಲ್ಲಿ ಪಾಲ್ಗೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೌಶಲ್ಯ ಅಭಿವೃದ್ಧಿ ಪಡಿಸುವುದೇ ಕಲಾ ಉತ್ಸವದ ಉದ್ದೇಶ: ತಹಸೀಲ್ದಾರ
ಮೂಲಭೂತ ಸೌಲಭ್ಯಕ್ಕೆ ಆಗ್ರಹ: ಎಸ್‌ಐಆರ್‌ ಜಾಗೃತಿ ಬೈಕ್‌ ರ್‍ಯಾಲಿಗೆ ತಡೆ