ಗದಗ: ಭೂಮಿಯ ಮೇಲೆ ಯಾರಾದರೂ ಅದ್ಭುತ ರತ್ನಗಳು ಇದ್ದರೆ ಅವರು ಲಿಂ. ಪಂ. ಪಂಚಾಕ್ಷರಿ ಗವಾಯಿಗಳು ಮತ್ತು ಲಿಂ. ಪಂ. ಪುಟ್ಟರಾಜ ಕವಿ ಗವಾಯಿಗಳು ಎಂದು ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿಗಳು ತಿಳಿಸಿದರು.
ಜನರಿಗಾಗಿ ಬದುಕುವವರು ಬೇರೆ, ಆತ್ಮಸಂತೋಷಕ್ಕಾಗಿ ಬದುಕುವವರು ಬೇರೆ. ಆದರೆ ಉಭಯ ಗುರುಗಳು ಜನರಿಗಾಗಿ ಮತ್ತು ಆತ್ಮಸಂತೋಷಕ್ಕಾಗಿ ಬದುಕಿ ತೋರಿಸಿದ್ದಾರೆ. ನಾಡಿನಾದ್ಯಂತ ಜಾತ್ರೆಗಳಲ್ಲಿ ಲಕ್ಷಗಟ್ಟಲೆ ಜನರು ಸೇರುತ್ತಾರೆ. ಆದರೆ, ಗದುಗಿನ ಉಭಯ ಗುರುಗಳ ಜಾತ್ರೆಯಲ್ಲಿ ಬರಿ ಜನರಷ್ಟೆ ಅಲ್ಲ, ಇಲ್ಲಿ ಸೇರಿದ ಭಕ್ತರಿಗಾಗಿ ಜ್ಞಾನ ದಾಸೋಹ, ಅನ್ನ ನಡೆಯುತ್ತಿರುವುದು ವಿರಳ ಎಂದರು.
ಬಳಗಾನೂರ ಶ್ರೀಮಠದ ಶಿವಶಾಂತವೀರ ಶರಣರು ಮಾತನಾಡಿ, ಉಭಯ ಗುರುಗಳು ನಾಡಿನಾಧ್ಯಂತ ಸಂಗೀತ, ಸಾಹಿತ್ಯ, ಕಲೆಯನ್ನು ಶಿಖರದೆತ್ತರಕ್ಕೆ ಬೆಳೆಸಿದ್ದಾರೆ. ಅಧುನಿಕ ವಚನಕಾರರಲ್ಲಿ ಪುಟ್ಟರಾಜರ ವಚನ ಸಾಹಿತ್ಯ ಅತ್ಯಂತ ಶ್ರೀಮಂತ ಸಾಹಿತ್ಯವಾಗಿದೆ. ಅವರ ಜೀವನ ಪದ್ಧತಿ ನಮಗೆಲ್ಲ ಆದರ್ಶವಾಗಬೇಕು ಎಂದರು.ಮಾದನ ಹಿಪ್ಪರಗಿ ವಿರಕ್ತಮಠದ ಅಭಿನವ ಶಿವಲಿಂಗ ಶ್ರೀಗಳು ಮಾತನಾಡಿ, ನಾವೆಲ್ಲರೂ ಶಿವಯೋಗ ಮಂದಿರದ ಹೂವುಗಳು. ನಾಡಿನ ತುಂಬಾ ಇರುವ ಶ್ರೀಗಳಿಗೆ ಶಿವಯೋಗ ಮಂದಿರ ಪಾಠಶಾಲೆಯಾದರೆ, ವೀರೇಶ್ವರ ಪುಣ್ಯಾಶ್ರಮ ಸಂಗೀತಗಾರರು, ಕೀರ್ತನಗಾರರು, ಕಲಾವಿದರನ್ನು ತಯಾರಿಸುವ ಟಂಕಸಾಲೆ ಆಗಿದೆ. ಶಿವಯೋಗ ಮಂದಿರ ಬಿಟ್ಟು ಆಶ್ರಮವಿಲ್ಲ, ಆಶ್ರಮ ಬಿಟ್ಟು ಶಿವಯೋಗ ಮಂದಿರವಿಲ್ಲ. 1914ರಲ್ಲಿ ಪಂಚಾಕ್ಷರಿ ಗವಾಯಿಗಳು ಮೊದಲ ಸಂಗೀತ ಪಾಠಶಾಲೆಯನ್ನು ನಿಡಗುಂದಿಕೊಪ್ಪದಲ್ಲಿ ಆರಂಭಿಸಿದರೆ, ಅದೇ ವರ್ಷ ಶ್ರೀಮಠದ ಉತ್ತರಾಧಿಕಾರಿ ಪಂ. ಪುಟ್ಟರಾಜ ಗವಾಯಿಗಳು ಜನ್ಮವಿತ್ತಿದ್ದು ಪವಾಡವೇ ಎನ್ನಬಹುದು ಎಂದರು.
ನಗರದ ಶ್ರೀಕುಮಾರೇಶ್ವರ ಕೃಪಾ ಪೋಷಿತ ಪಂ. ಪಂಚಾಕ್ಷರ ಗವಾಯಿಗಳ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು. ಕಲ್ಲಯ್ಯಜ್ಜನವರು ಅಭಾರ ಮನ್ನಿಸಿದರು. ಎಂ. ಕಲ್ಲಿನಾಥ ಶಾಸ್ತ್ರೀಗಳು ಅಡ್ನೂರ ನಿರೂಪಿಸಿದರು. ನಂತರ ಅಹೋರಾತ್ರಿ ಸಂಗೀತ ಸಮಾರಾಧನೆ ಕಾರ್ಯಕ್ರಮ ಜರುಗಿತು.