ಕನ್ನಡಪ್ರಭ ವಾರ್ತೆ ಮೈಸೂರು
ನಮ್ಮ ನಡಿಗೆ ಆರೋಗ್ಯವಂತ ವಿಶ್ವದೆಡೆಗೆ ಎಂಬ ಘೋಷವಾಖ್ಯದಡಿ ನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಿಂದ ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ಸನ್ನಿಧಿಗೆ ಶ್ರೀಗಳು ಸೋಮವಾರ ಬೆಳಿಗ್ಗೆ ಪಾದಯಾತ್ರೆ ಕೈಗೊಂಡಿದ್ದು, ಈ ವೇಳೆ ಭಕ್ತರನ್ನುದ್ದೇಶಿಸಿ ಮಾತನಾಡಿದರು.
ಮಧುಮೇಹದ ಬಗ್ಗೆ ಜನರಲ್ಲಿ ಜಾಗೃತಿ ಅತ್ಯವಶ್ಯಕವಾಗಿದೆ. ಹಾಗಾಗಿ ಪ್ರತಿದಿನ ಎಲ್ಲರೂ ಯಾವುದಾದರೂ ಒಂದು ವ್ಯಾಯಾಮವನ್ನು ಮಾಡಬೇಕು. ಉತ್ತಮ ಸಮಾಜಕ್ಕಾಗಿ ನಾವೆಲ್ಲ ಕೃಷಿ ಮಾಡಬೇಕು. ಜನರಲ್ಲಿ ತಿಳವಳಿಕೆ ಮೂಡಿಸಲು ಈ ಪಾದಯಾತ್ರೆ ಕೈಗೊಂಡಿದ್ದೇವೆ. ನಮ್ಮ ಜೊತೆ ಭಕ್ತರು ಸೇರಿ ನಡಿಗೆಯಲ್ಲಿ ಪಾಲ್ಗೊಂಡಿದ್ದಾರೆ ಎಂದರು.ಧರ್ಮ ಮಾರ್ಗದಲ್ಲಿ ನಡೆಯಲು ಬೇಕಾದ ಆರೋಗ್ಯ ದಯಪಾಲಿಸು, ನಮಗೆ ಬೇಕಾದ ಉತ್ತಮ ಬುದ್ಧಿ, ಒಳ್ಳೆಯ ಆರೋಗ್ಯ ಅನುಗ್ರಹಿಸು ಎಂದು ಸ್ವಾಮಿ ಶ್ರೀಕಂಠೇಶ್ವರನಲ್ಲಿ ಪ್ರಾರ್ಥಿಸಿ ಈ ಪಾದಯಾತ್ರೆ ಕೈಗೊಂಡಿದ್ದೇವೆ ಎಂದು ಅವರು ಹೇಳಿದರು.
ಪ್ರತಿಯೊಬ್ಬ ಮನುಷ್ಯನ ಉತ್ತಮ ಆರೋಗ್ಯಕ್ಕೆ ಕಾಲ್ನಡಿಗೆ ಅತ್ಯುತ್ತಮ ವ್ಯಾಯಾಮ ಎಂಬ ಕುರಿತು ವಿಶ್ವ ಜನ ಜಾಗೃತಿ ಮೂಡಿಸುವ ಸಲಯವಾಗಿ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶ್ರೀಗಳೊಂದಿಗೆ ನೂರಾರು ಭಕ್ತರು ಕೂಡ ಪಾದಯಾತ್ರೆಯಲ್ಲಿ ಸಾಗಿದರು.
ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿಯನ್ನು ತಲುಪಿದ ಕೂಡಲೇ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆಯನ್ನು ಶ್ರೀಗಳು ನೆರವೇರಿಸಿ ನಂತರ ಮಹಾಮಂಗಳಾರತಿ ಸ್ವೀಕರಿಸಿದರು.