ರಂಗಭೂಮಿ ಬೆಳವಣಿಗೆಗೆ ಮಹಿಳೆಯರ ಕೊಡುಗೆ ದೊಡ್ಡದು: ಕೊಟ್ರಪ್ಪ

KannadaprabhaNewsNetwork |  
Published : Mar 18, 2025, 12:35 AM IST
ಬಳ್ಳಾರಿಯ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ರಂಗಭೂಮಿ ಮತ್ತು ಮಹಿಳೆ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದೆ ವೀಣಾ ಆದೋನಿ ಅವರು ಮಾತನಾಡಿದರು.  | Kannada Prabha

ಸಾರಾಂಶ

ರಂಗಭೂಮಿಯಲ್ಲಿ ಮಹಿಳೆಯರು ಪಾತ್ರ ನಿರ್ವಹಿಸುವುದನ್ನು ಸಂಶಯದಿಂದ ನೋಡುವ ಕಾಲಘಟ್ಟಗಳಲ್ಲಿ ಜಿಲ್ಲೆಯ ಅನೇಕ ಮಹಿಳೆಯರು ರಂಗಭೂಮಿ ಉಳಿವಿಗೆ ಅಪಾರವಾಗಿ ಶ್ರಮಿಸಿ, ಜಿಲ್ಲೆಯ ಕಲಾ ಶ್ರೀಮಂತಿಕೆಯನ್ನು ಜೀವಂತಗೊಳಿಸಿದರು.

ರಂಗಭೂಮಿ-ಮಹಿಳೆ ವಿಶೇಷ ಉಪನ್ಯಾಸ, ರಂಗಗೀತೆಗಳ ಕಾರ್ಯಕ್ರಮಕ್ಕೆ ಚಾಲನೆಕನ್ನಡಪ್ರಭ ವಾರ್ತೆ ಬಳ್ಳಾರಿ

ರಂಗಭೂಮಿಯಲ್ಲಿ ಮಹಿಳೆಯರು ಪಾತ್ರ ನಿರ್ವಹಿಸುವುದನ್ನು ಸಂಶಯದಿಂದ ನೋಡುವ ಕಾಲಘಟ್ಟಗಳಲ್ಲಿ ಜಿಲ್ಲೆಯ ಅನೇಕ ಮಹಿಳೆಯರು ರಂಗಭೂಮಿ ಉಳಿವಿಗೆ ಅಪಾರವಾಗಿ ಶ್ರಮಿಸಿ, ಜಿಲ್ಲೆಯ ಕಲಾ ಶ್ರೀಮಂತಿಕೆಯನ್ನು ಜೀವಂತಗೊಳಿಸಿದರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಅಧಿಕಾರಿ ಚೋರನೂರು ಕೊಟ್ರಪ್ಪ ಸ್ಮರಿಸಿದರು.

ನಗರದ ಸರಳಾದೇವಿ ಪದವಿ ಕಾಲೇಜಿನ ಸಭಾಂಗಣದಲ್ಲಿ ನಾಟಕ ವಿಭಾಗದ ವತಿಯಿಂದ ಆಯೋಜಿಸಿದ್ದ ರಂಗಭೂಮಿ ಮತ್ತು ಮಹಿಳೆ ವಿಶೇಷ ಉಪನ್ಯಾಸ ಮತ್ತು ರಂಗಗೀತೆಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ರಂಗಭೂಮಿಗೆ ಇಂದು ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸುತ್ತಿದ್ದಾರೆ. ಆದರೆ, ಸುಮಾರು ಐದಾರು ದಶಕಗಳ ಹಿಂದೆ ಈ ಕ್ಷೇತ್ರಕ್ಕೆ ಬರುವವರು ಅಪರೂಪವಾಗಿದ್ದರು. ರಂಗಭೂಮಿ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆಯೂರಲು ಸಾಕಷ್ಟು ಶ್ರಮಿಸಬೇಕಾಗಿತ್ತು. ನಿರಂತರ ತರಬೇತಿ, ರಂಗಭೂಮಿಯ ಪಟ್ಟುಗಳನ್ನು ಕಲಿಯಬೇಕಿತ್ತು. ಇಷ್ಟೆಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ ಅನೇಕ ಮಹಿಳೆಯರು, ರಂಗಭೂಮಿಯ ಚೈತನ್ಯಸೆಲೆಯಾಗಿ ಕಾರ್ಯನಿರ್ವಹಿಸಿ, ಸೈ ಎನಿಸಿಕೊಂಡರು ಎಂದರು.

ಇದೇ ವೇಳೆ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಪೌರಾಣಿಕ ಹಾಗೂ ಐತಿಹಾಸಿಕ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಅನೇಕ ಕಲಾವಿದೆಯರು ಹಾಗೂ ಬಯಲಾಟ ಕ್ಷೇತ್ರವನ್ನು ಮತ್ತಷ್ಟೂ ಶ್ರೀಮಂತಗೊಳಿಸಿದ ಹತ್ತಾರು ಮಹಿಳೆಯರ ಹೆಸರುಗಳನ್ನು ಪ್ರಸ್ತಾಪಿಸಿದ ಚೋರನೂರು ಕೊಟ್ರಪ್ಪ ಅವರು, ಬಳ್ಳಾರಿ ರಂಗಭೂಮಿ ನಾಡಿಗೆ ನೀಡಿದ ಬಹುದೊಡ್ಡ ಕೊಡುಗೆ ಹಿಂದೆ ಮಹಿಳಾ ಕಲಾವಿದೆಯರ ಪಾತ್ರವೂ ಮಹತ್ವದ್ದಾಗಿದೆ ಎಂದು ಹೇಳಿದರು.

ಧ್ವನಿಮುದ್ರಣ ಪದ್ಧತಿ ವಿರುದ್ಧ ಪ್ರತಿಭಟಿಸಿ:

ಮುಖ್ಯ ಅತಿಥಿಯಾಗಿದ್ದ ಹಿರಿಯ ವರದಿಗಾರ ಕೆ.ಎಂ. ಮಂಜುನಾಥ್ ಮಾತನಾಡಿ, ರಂಗಭೂಮಿಯನ್ನು ನೈಜವಾದ ಕಲೆ ಎಂದು ಹೇಳುತ್ತೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ವಾಯ್ಸ್ ರೆಕಾರ್ಡಿಂಗ್ (ಧ್ವನಿಮುದ್ರಣ) ಮಾಡಿ ಪೌರಾಣಿಕ ಹಾಗೂ ಐತಿಹಾಸಿಕ ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಯಲಾಟ ಕ್ಷೇತ್ರದಲ್ಲೂ ರೆಕಾರ್ಡಿಂಗ್ ಬಂದರೂ ಅಚ್ಚರಿಯಿಲ್ಲ ಎಂದರಲ್ಲದೆ, ಪ್ರೇಕ್ಷಕರು ರೆಕಾರ್ಡಿಂಗ್ ಸಂಸ್ಕೃತಿಯನ್ನು ತಿರಸ್ಕರಿಸಿ, ಪ್ರತಿಭಟಿಸಬೇಕು ಎಂದು ಹೇಳಿದರು.

ರಂಗಭೂಮಿ ಮತ್ತು ಮಹಿಳೆ ಎನ್ನುವ ವಿಷಯದ ಕುರಿತು ಮಾತನಾಡಿದ ಹಿರಿಯ ರಂಗಭೂಮಿ ಕಲಾವಿದೆ ವೀಣಾಕುಮಾರಿ ಆದೋನಿ, ಕಲಾವಿದೆಯರನ್ನು ನಮ್ಮ ಸಮಾಜ ನೋಡುವ ದೃಷ್ಟಿಕೋನ ಬದಲಾಗಬೇಕು. ಅವರಿಗೆ ನೈತಿಕ ಬೆಂಬಲ ನೀಡಿ ಪ್ರೋತ್ಸಾಹಿಸಬೇಕು. ಘನತೆಯಿಂದ ನಡೆಸಿಕೊಳ್ಳಬೇಕೆಂದರು. ನಂತರ ಪೌರಾಣಿಕ ನಾಟಕದ ರಂಗ ಗೀತೆಗಳನ್ನು ಪ್ರಸ್ತುತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಪ್ರಹ್ಲಾದ್ ಚೌದ್ರಿ ವಿದ್ಯಾರ್ಥಿಗಳು ರಂಗಭೂಮಿಯ ಚಟುವಟಿಕೆಗಳಲ್ಲಿ ಆಸಕ್ತಿ ಮತ್ತು ಪ್ರೀತಿ ಬೆಳೆಸಿಕೊಳ್ಳಬೇಕು ಎಂದರು.

ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹೊನ್ನೂರಾಲಿ, ನಾಟಕ ವಿಭಾಗದ ಮುಖ್ಯಸ್ಥ ಡಾ. ದಸ್ತಗೀರಸಾಬ್ ದಿನ್ನಿ, ಉಪನ್ಯಾಸಕ ವಿಷ್ಣು ಹಡಪದ ಉಪಸ್ಥಿತರಿದ್ದರು.

ಪ್ರಾಧ್ಯಾಪಕರಾದ ಡಾ. ಹುಚ್ಚೂಸಾಬ್, ಸಿ.ಮಂಜುನಾಥ್, ಜಯರಾಮ್, ಡಾ. ಬಸಪ್ಪ, ನೇತಿ ರಘುರಾಮ, ಮಲ್ಲಪ್ಪ, ಲೇಖಕರಾದ ವೀರೇಂದ್ರ ರಾವಿಹಾಳ್, ಕಲಾವಿದೆ ಅನುರಾಧ ವಾಲ್ಮೀಕಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''