ಕನ್ನಡಪ್ರಭ ವಾರ್ತೆ ದೇವದುರ್ಗನಾರಾಯಣಪೂರ ಬಲದಂಡೆ ನಾಲೆ ವ್ಯಾಪ್ತಿಯಲ್ಲಿ ಜಮೀನುಗಳಲ್ಲಿ ಫಸಲು ಬಿಡುವ ಸಂದರ್ಭದಲ್ಲಿ ನೀರಾವರಿ ಇಲಾಖೆ ದಿಢೀರ್ ನೀರು ಹರಿಸುವುದನ್ನು ಬಂದ್ ಮಾಡಿದೆ. ಹೀಗಾಗಿ ರೈತರಿಗೆ ಅಪಾರ ಹಾನಿ ಸಂಭವಿಸಲಿದ್ದು, ಕಾಲುವೆಗಳಿಗೆ ಜಲಾಶಯದಿಂದ ಕೂಡಲೇ ನೀರು ಬಿಡುವಂತೆ ಒತ್ತಾಯಿಸಿ ಏ.2ರಂದು ಗಬ್ಬೂರಿನಿಂದ ರಾಯಚೂರು ಡೀಸಿ ಕಚೇರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕಿ ಕರೆಮ್ಮ ಜಿ.ನಾಯಕ ತಿಳಿಸಿದರು.ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ನೀರಾವರಿ ಸಲಹಾ ಸಮಿತಿಯಲ್ಲಿ ಏ.6ರವರೆಗೆ ಕಾಲುವೆಗಳಿಗೆ ನೀರು ಬಿಡಲು ನಿರ್ಧರಿಸಲಾಗಿತ್ತು. ಆದರೆ ಏಕಾಏಕಿ ಯಾರಿಗೂ ಹೇಳದೇ, ಕೇಳದೇ ನೀರು ಬಂದ್ ಮಾಡಲಾಗಿದೆ. ಎನ್ಆರ್ಬಿಸಿ ಕಾಲುವೆ ವ್ಯಾಪ್ತಿಯಲ್ಲಿ ದೇವದುರ್ಗ ತಾಲೂಕಿನಲ್ಲಿಯೆ ಶೇ.80ರಷ್ಟು ಜಮೀನುಗಳು ನೀರಾವರಿಗೆ ಒಳಪಟ್ಟಿವೆ. ಆದರೆ ಅಧಿಕಾರಿಗಳು ಕನಿಷ್ಠ ಮಾಹಿತಿ ನೀಡಿಲ್ಲ. ರೈತ ಸಂಘಟನೆಗಳು ಕರೆ ನೀಡಿದ್ದ ದೇವದುರ್ಗ ಬಂದ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬೆಂಬಲಿಸಿದ್ದೇನೆ. ಕೆಬಿಜೆಎನ್ಎಲ್ ಅಧಿಕಾರಿಗಳು ನೀರು ಬಿಡುವ ನಿರ್ಧಾರ ನಮ್ಮ ಕೈಯಲ್ಲಿ ಇಲ್ಲಾ ಎಂದು ಕೈಚೆಲ್ಲಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಸರ್ಕಾರದ ಗಮನ ಸೆಳೆಯಬೇಕಾಗಿದೆ ಎಂದರು.