ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಶಾಲಾ ಆವರಣದಲ್ಲೇ ಶಿಥಿಲಗೊಂಡ ನೀರಿನ ಟ್ಯಾಂಕ್ ಇರುವ ಕಾರಣ ಟ್ಯಾಂಕ್ ಯಾವಾಗ ಕುಸಿದು ಮೈಮೇಲೆ ಬೀಳುತ್ತದೆಯೋ ಎಂಬ ಜೀವ ಭಯದಲ್ಲೇ ಮಕ್ಕಳು ನಿತ್ಯ ಜೀವ ಆಟ-ಪಾಠ ಮಾಡುವಂತಾಗಿದೆ.
ಹೌದು, ದೇವರಹಿಪ್ಪರಗಿ ತಾಲೂಕಿನ ಕೊಂಡಗೂಳಿ ಗ್ರಾಮದ ಹೊಸೂರು 3ನೇ ವಾರ್ಡ್ ನಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ 30 ವರ್ಷಗಳ ಹಳೇಯದಾದ ನೀರು ಸರಬರಾಜು ಓವರ್ ಹೆಡ್ ಟ್ಯಾಂಕ್ ಇದೆ. ಈ ಟ್ಯಾಂಕ್ ಶಿಥಿಲಗೊಂಡು ವರ್ಷಗಳೇ ಗತಿಸಿದೆ. ಈಗಲೂ, ಆಗಲೂ ಕುಸಿಯುವ ಹಂತದಲ್ಲಿ ಇದೆ. ಸಪೋರ್ಟ್‌ಗೆಂದು ಟ್ಯಾಂಕ್‌ನ ತಳಭಾಗದಲ್ಲಿ ಹಾಕಿರುವ ಕಾಲಂ ಗಳೆಲ್ಲವೂ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಬಿರುಕುಬಿಟ್ಟು ಇನ್ನೇನು ಬೀಳುವ ಹಂತಕ್ಕೆ ಬಂದಿವೆ. ಅಲ್ಲದೇ ಈ ನೀರಿನ ಟಾಕಿಯ ಮೇಲೆ ಹತ್ತುವ ಮೆಟ್ಟಿಲುಗಳಂತೂ ಕಳಚಿ ಬಿದ್ದು ಅದೆಷ್ಟೋ ತಿಂಗಳುಗಳೆ ಕಳೆದಿವೆ. ಈಗ ಉಳಿದಿರುವ ಈ ಟ್ಯಾಂಕ್ ಯಾವಾಗ ಕುಸಿದು ಮಕ್ಕಳ ಮೇಲೆ ಬೀಳುತ್ತದೋ ಎಂಬಂತಾಗಿದೆ.ಮನವಿ ಮಾಡಿದರೂ ಪ್ರಯೋಜನವಿಲ್ಲ:
ಸಂಪೂರ್ಣವಾಗಿ ಶಿಥಿಲಗೊಂಡಿರುವ ಶಾಲಾ ಆವರಣದಲ್ಲಿರುವ ಈ ಓವರ್ ಹೆಡ್ ಟ್ಯಾಂಕ್ ಅನ್ನು ಡೆಮಾಲಿಶ್ ಮಾಡಬೇಕು. ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆಯ ಸಲುವಾಗಿ ಬೇರೆಡೆ ಹೊಸದಾದ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ ಎಂದು ಹಲವು ಬಾರಿ ಶಾಲೆಯ ಶಿಕ್ಷಕರು, ಗ್ರಾಮಸ್ಥರು ಕೇಳಿಕೊಂಡಿದ್ದಾರೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಈ ಭಾಗದ ಜನಪ್ರತಿನಿಧಿಗಳು ಮೌನವಾಗಿದ್ದಾರೆ.ಆತಂಕದಲ್ಲಿ 150 ಮಕ್ಕಳ ಭವಿಷ್ಯ:
ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿಯವರೆಗೆ 150 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಾರೆ. ನಿತ್ಯವೂ ಮಕ್ಕಳು ಇದರ ಪಕ್ಕದಲೇ ಹಾಯ್ದು ಶಾಲೆಗೆ ಬರಬೇಕು. ಮನೆಗೆ ತೆರಳಬೇಕು. ಜೊತೆಗೆ ಆಟದ ಸಮಯದಲ್ಲೂ ಸಹ ಇದೇ ಬಲಿಗಾಗಿ ಕಾದಿರುವ ಟ್ಯಾಂಕ್ ಕೆಳಭಾಗದಲ್ಲಿ ಆಟವಾಡಬೇಕಿದೆ. ಹೀಗಾಗಿ ಯಾವ ಸಮಯದಲ್ಲಿ ಈ ಟ್ಯಾಂಕ್ ಕುಸಿದು ಮಕ್ಕಳ ಮೇಲೆ ಬೀಳುತ್ತದೋ ಎಂದು ಶಾಲೆಗೆ ಬರುವ ಮಕ್ಕಳು, ಪೋಷಕರು ಹಾಗೂ ಶಿಕ್ಷಕರು ಆತಂಕದಲ್ಲಿದ್ದಾರೆ.ಅಪಾಯ ಕಟ್ಟಿಟ್ಟ ಬುತ್ತಿ:
ಅಪಾಯದ ಹಂತ ತಲುಪಿ ಬಲಿಗಾಗಿ ಕಾದಿರುವ ಓವರ್ ಹೆಡ್ ಟ್ಯಾಂಕ್‌ನಿಂದಾಗಿ ನಿತ್ಯವೂ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾದರೆ ಸಂಜೆ ಮಕ್ಕಳು ಸುರಕ್ಷಿತವಾಗಿ ಮನೆಗೆ ಬರಲಪ್ಪಾ ಎಂದು ದೇವರಲ್ಲಿ ಪಾರ್ಥನೆ ಮಾಡಿಯೇ ಕಳಿಸುವಂತಾಗಿದೆ. ಹೊಸದಾಗಿ ಮಕ್ಕಳನ್ನು ಶಾಲೆಗೆ ಸೇರಿಸಲು ಪೋಷಕರು ಮುಂದೆ ಬರುತ್ತಿಲ್ಲ.---
ಬಾಕ್ಸ್ಅನಾಹುತ ಸಂಭವಿಸಿದರೇ
ಜನಪ್ರತಿನಿಧಿಗಳೇ ಹೊಣೆಶಾಲಾ ಆವರಣದಲ್ಲಿರುವ ಓವರ್ ಹೆಡ್ ಟ್ಯಾಂಕ್ ಶಿಥಿಲಗೊಂಡಿರುವ ಕುರಿತು ಗ್ರಾಮ ಪಂಚಾಯತಿಯಿಂದ ಹಿಡಿದು ಜಿಲ್ಲಾ ಪಂಚಾಯತಿ ಸಿಇಒವರೆಗೆ ಮನವಿ ಮಾಡಲಾಗಿದೆ. ಏನಾದರೂ ಹೆಚ್ಚುಕಡಿಮೆ ಆದರೆ ಈ ಭಾಗದ ಶಾಸಕ ರಾಜುಗೌಡ ಪಾಟೀಲ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೊಣೆಯಾಗಬೇಕಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.
---ಕೋಟ್:
ಶಾಲಾ ಆವರಣದಲ್ಲಿರುವ ಈ ನೀರಿನ ಟ್ಯಾಂಕ್‌ನಿಂದ ಮಕ್ಕಳು, ಶಿಕ್ಷಕರು, ಪಾಲಕರು ಭಯದಲ್ಲಿದ್ದಾರೆ. ಎಸ್‌ಡಿಎಂಸಿ ವತಿಯಿಂದ ಮನವಿ ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ತಕ್ಷಣವೇ ಈ ಟ್ಯಾಂಕ್ ಅನ್ನು ನೆಲಸಮಗೊಳಿಸಿ ಎಲ್ಲರಲ್ಲಿರುವ ಭಯ, ಆತಂಕವನ್ನು ಹೋಗಲಾಡಿಸಬೇಕಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಮಕ್ಕಳ ಜೀವ ರಕ್ಷಣೆಗೆ ಮುಂದಾಗದಿದ್ದರೆ, ಪ್ರತಿಭಟನೆ ಮಾಡಬೇಕಾಗುತ್ತದೆ.-ಜಗದೀಶ ಪಾಟೀಲ್, ಗ್ರಾಮಸ್ಥ.
--ಶಾಲಾ ಆವರಣದಲ್ಲಿ ಶಿಥಿಲಗೊಂಡ ಟ್ಯಾಂಕ್ ಇರುವುದರಿಂದ ವಿದ್ಯಾರ್ಥಿಗಳು ಹಾಗೂ ಪಾಲಕರು ಆತಂಕದಲ್ಲಿದ್ದಾರೆ. ಜೆಜೆಎಂ ಯೋಜನೆಯಲ್ಲಿ ಹೊಸ ಟ್ಯಾಂಕ್ ನಿರ್ಮಾಣವಾಗಿದ್ದು, ಅದಕ್ಕೆ ನೀರು ಸರಬರಾಜು ಮಾಡಲು ಪೈಪ್‌ಲೈನ್ ಸಂಪರ್ಕ ಸಿಕ್ಕ ಕೂಡಲೇ ಈ ಟ್ಯಾಂಕ್ ನೆಲಸಮಗೊಳಿಸಲು ಕ್ರಮ ಕೈಗೊಳ್ಳುತ್ತೇವೆ.
-ದಾವಲಬೀ ಹುಸೇನಸಾಬ ಸೋಲಾಪುರ, ಗ್ರಾಪಂ ಅಧ್ಯಕ್ಷೆ, ಕೊಂಡಗೂಳಿ.--
ನನ್ನ ಗಮನಕ್ಕೆ ಬಂದ ಸಮಸ್ಯೆಗಳಿಗೆ ತಕ್ಷಣವೇ ಅಧಿಕಾರಿಗಳಿಗೆ ಹೇಳಿ ಕ್ರಮ ಕೈಗೊಳ್ಳುವ ಕೆಲಸ ಮಾಡಿದ್ದೇನೆ. ಈ ಶಿಥಿಲಗೊಂಡ ಟ್ಯಾಂಕ್ ಬಗ್ಗೆ ನನ್ನ ಗಮನಕ್ಕೆ ಇಲ್ಲ. ಈ ಕುರಿತು ಸಂಬಂಧಿತ ಅಧಿಕಾರಿಗಳಿಗೆ ಮಾತನಾಡಿ, ಟ್ಯಾಂಕ್ ನೆಲಸಮಗೊಳಿಸಲು ಸೂಚಿಸುತ್ತೇನೆ. ಯಾವುದೇ ಕಾರಣಕ್ಕೂ ಮಕ್ಕಳ ಜೀವಕ್ಕೆ ತೊಂದರೆ ಆಗಲು ಬಿಡುವುದಿಲ್ಲ.-ರಾಜುಗೌಡ ಪಾಟೀಲ್, ದೇವರಹಿಪ್ಪರಗಿ ಶಾಸಕ.