ಹೊಸಪೇಟೆ: ಮಾದಿಗ ಸಮಾಜವನ್ನು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಪುನರ್ ಸಂಘಟನೆ ಮಾಡುವ ಅವಶ್ಯಕತೆ ಇದೆ. ಅಂಬೇಡ್ಕರ್ ಅವರ ತತ್ವ, ಸಿದ್ಧಾಂತ, ಹೋರಾಟದ ಮನೋಭಾವ ಅಳವಡಿಸಿಕೊಂಡು, ಹಿರಿಯರ ಮಾರ್ಗದರ್ಶನದಲ್ಲಿ ಯುವ ಸಮೂಹ ಸಮಾಜದ ಒಳಿತಿಗೆ ಶ್ರಮಿಸಬೇಕು ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.ಜಿಲ್ಲಾ ಮಾದಿಗ ಮಹಾಸಭಾದಿಂದ ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭವ್ಯ ಭಾರತ ಕಟ್ಟಲು ಮಕ್ಕಳ ಪಾತ್ರ ಮುಖ್ಯವಾಗಿದೆ. ಶಿಕ್ಷಕರು ಹಾಗೂ ಪೋಷಕರು ಉತ್ತಮ ವ್ಯಕ್ತಿಯಾಗಿ ಬೆಳೆಸಬೇಕಿದೆ. ಪ್ರತಿ ಜಿಲ್ಲೆಯಲ್ಲಿ ಬಡ ಮಕ್ಕಳಿಗೆ ಪಿಯುಸಿವರೆಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಇದರಿಂದ ಸಮಾಜ ಅಭಿವೃದ್ಧಿ ಆಗಲಿದೆ. ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮ ಮಕ್ಕಳಿಗೆ ಉತ್ತೇಜನ ನೀಡಲಿದೆ. ಸಮಾಜ ಅಂಬೇಡ್ಕರ್ ಚಿಂತನೆ ಹಾದಿಯಲ್ಲಿ ಮುನ್ನಡೆಯಬೇಕು. ಇದರಿಂದ ಸಮ ಸಮಾಜ ನಿರ್ಮಾಣಕ್ಕೆ ಸಹಕಾರಿ ಆಗಲಿದೆ ಎಂದರು.
ಮೂಲ ದಲಿತ ಜನಾಂಗವಾಗಿರುವ ಮಾದಿಗ ಸಮಾಜ ಸರ್ಕಾರದ ಸೌಲಭ್ಯದಿಂದ ವಂಚಿತವಾಗುತ್ತಿದೆ. ಪ್ರತಿಯೊಬ್ಬರು ಜಾಗೃತರಾಗಿ ಸಂಘಟಿತರಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಆಸ್ತಿಯನ್ನಾಗಿ ರೂಪಿಸಬೇಕು. ಶೈಕ್ಷಣಿಕ ಪ್ರಗತಿಯಿಂದ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು.
ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ಚಾಮಿ ಮಾತನಾಡಿ, ಒಳ ಮೀಸಲಾತಿಗಾಗಿ ನಾವು ಹೋರಾಟ ನಡೆಸಿದ್ದೇವೆ. ಸಮಾಜ ಯುವಕರು ಶಿಕ್ಷಣ ಪಡೆದು ಉನ್ನತ ಹುದ್ದೆ ಪಡೆಯಬೇಕು. ಅಂಬೇಡ್ಕರ್ ಉನ್ನತ ಶಿಕ್ಷಣ ಪಡೆದು, ದೇಶಕ್ಕೆ ಸಂವಿಧಾನದ ಕೊಡುಗೆ ನೀಡಿದ್ದಾರೆ ಎಂದರು.ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ನಾವು ಮೊದಲು ಶಿಕ್ಷಣಕ್ಕೆ ಒತ್ತು ನೀಡಬೇಕು. ಉನ್ನತ ಶಿಕ್ಷಣದ ಜೊತೆಗೆ ವೃತ್ತಿಪರ ಶಿಕ್ಷಣಕ್ಕೂ ಆದ್ಯತೆ ನೀಡಬೇಕು ಎಂದರು.
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಮಾದಿಗ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ರಾಣಿ ಸಂಯುಕ್ತ ನೀಡಿದರೆ, ಸಿದ್ದಾರ್ಥ ಸಿಂಗ್ ಶಾಲಾ ಬ್ಯಾಗ್‌ಗಳ ಕೊಡುಗೆ ನೀಡಿದರು. ಸಂತೋಷ ಲಾಡ್ ಫೌಂಡೇಶನ್ ಪ್ರತಿಭಾವಂತ ಮಕ್ಕಳ ಖಾತೆಗಳಿಗೆ ಪ್ರತಿಭಾ ಪುರಸ್ಕಾರದ ಹಣ ಜಮೆ ಮಾಡಲಿದೆ.