ಗವಿಸಿದ್ದೇಶ್ವರ ಜಾತ್ರೆ- ಅಂಗವಿಕಲರಿಗೆ ಮದುವೆ ಜತೆ ಬದುಕಿಗೊಂದು ದಾರಿ

KannadaprabhaNewsNetwork | Published : Dec 21, 2023 1:15 AM

ಸಾರಾಂಶ

ನೋಂದಾಯಿತ ಜೋಡಿಗಳಿಗೆ ಜೀವನೋಪಾಯಕ್ಕಾಗಿ ಸೆಲ್ಕೋ ಫೌಂಡೇಶನ್‌ ಸಹಯೋಗದಲ್ಲಿ ಝರಾಕ್ಸ್ ಯಂತ್ರ, ಸಣ್ಣ ಅಂಗಡಿಯ ವ್ಯವಸ್ಥೆ ಮಾಡಲಾಗುವುದು. ಈ ಮೂಲಕ ವಿಕಲಚೇತನರ ಮದುವೆ ಜತೆಗೆ ಅವರ ಬದುಕಿಗೆ ದಾರಿ ಮಾಡಿಕೊಡುತ್ತಿರುವುದರಿಂದ ವಿಕಲಚೇತನರು ನಿಶ್ಚಿಂತೆಯಿಂದ ಮದುವೆಯಾಗಬಹುದು ಎನ್ನುವ ಸಂದೇಶ ರವಾನೆಯಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:ಸದಾ ಒಂದಿಲ್ಲೊಂದು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಹೆಸರಾದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಥದ್ದೇ ಮತ್ತೊಂದು ಕಾರ್ಯಕ್ಕೆ ಮುಂದಾಗಿದೆ. 2024ನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ವಿಕಲಚೇತನರಿಗೆ ಸಾಮೂಹಿಕ ಮದುವೆ ಮತ್ತು ಬದುಕಿಗೊಂದು ದಾರಿ ಕಲ್ಪಿಸುವ ಸಹಾಯಹಸ್ತ ಚಾಚಲು ಮುಂದಾಗಿದೆ.

ಕೇವಲ ಮದುವೆ ಮಾಡಿದರೆ ಸಾಲದು, ಆ ಜೋಡಿ ನೆಮ್ಮದಿಯ ಜೀವನ ನಡೆಸಲು ಉದ್ಯೋಗ ಅಗತ್ಯ. ಸ್ವ-ಉದ್ಯೋಗಕ್ಕೆ ದಾರಿ ಮಾಡಿಕೊಡಲು ಶ್ರೀಮಠ ಮುಂದಾಗಿದೆ. ಇದು ರಾಜ್ಯಗಳ ಜಾತ್ರೆಯ ಪರಂಪರೆಯಲ್ಲೇ ವಿಶಿಷ್ಟ ಎನ್ನಲಾಗಿದೆ.ದೇಹದ ಅಂಗವೊಂದು ವೈಕಲ್ಯತೆಯಿಂದ ಕೂಡಿದೆ ಎಂದು ಪರಿತಪಿಸಬಾರದು. ಅದು ಅಂಗವಿಕಲತೆಯೇ ಹೊರತು ಬದುಕಿನ ವಿಕಲತೆಯಲ್ಲ. ಬದುಕು ಬವಣೆಗಳ ಗೂಡಾಗದೇ ಭರವಸೆಯ ಬೆಳಕಾಗಬೇಕು. ಅಂಗವಿಕಲತೆ ಮನೋವಿಕಲತೆಗೆ ದಾರಿ ಮಾಡಿಕೊಡಬಾರದು ಎನ್ನುವ ಕಳಕಳಿಯೊಂದಿಗೆ ಇದೇ ಮೊದಲ ಬಾರಿ ವಿಕಲಚೇತನ ಸಾಮೂಹಿಕ ವಿವಾಹವನ್ನು ಗವಿಮಠದಲ್ಲಿ ಹಮ್ಮಿಕೊಳ್ಳಲಾಗಿದೆ. 2024ರ ಜನೇವರಿ 21ರಂದು ಶ್ರೀಮಠದ ಆವರಣದಲ್ಲಿ ನಡೆಯುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ 50 ನವ ಜೋಡಿಗಳಿಗೆ ಅವಕಾಶವಿದೆ.ಬದುಕಿಗೆ ದಾರಿ: ನೋಂದಾಯಿತ ಜೋಡಿಗಳಿಗೆ ಜೀವನೋಪಾಯಕ್ಕಾಗಿ ಸೆಲ್ಕೋ ಫೌಂಡೇಶನ್‌ ಸಹಯೋಗದಲ್ಲಿ ಝರಾಕ್ಸ್ ಯಂತ್ರ, ಸಣ್ಣ ಅಂಗಡಿಯ ವ್ಯವಸ್ಥೆ ಮಾಡಲಾಗುವುದು. ಈ ಮೂಲಕ ವಿಕಲಚೇತನರ ಮದುವೆ ಜತೆಗೆ ಅವರ ಬದುಕಿಗೆ ದಾರಿ ಮಾಡಿಕೊಡುತ್ತಿರುವುದರಿಂದ ವಿಕಲಚೇತನರು ನಿಶ್ಚಿಂತೆಯಿಂದ ಮದುವೆಯಾಗಬಹುದು ಎನ್ನುವ ಸಂದೇಶ ರವಾನೆಯಾಗಿದೆ.ನೋಂದಣಿಗಾಗಿ ಸರ್ವೋದಯ ಸಂಸ್ಥೆಯ ಮುಖ್ಯಸ್ಥ ನಾಗರಾಜ ದೇಸಾಯಿ (9448263019), ವಿಕಲಚೇತನರ ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ವೈ. ಪೂಜಾರ (9901501235) ಅವರನ್ನು ಸಂಪರ್ಕಿಸಬಹುದು.ಹೊಸ ಭರವಸೆ: ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ದು, ಅದರಲ್ಲೂ ವಿಕಲಚೇತನರ ಸಾಮೂಹಿಕ ವಿವಾಹ ಆಯೋಜಿಸುತ್ತಿರುವುದು ವಿಕಲಚೇತನರ ಬಾಳಲ್ಲಿ ಹೊಸ ಪರಂಪರೆಗೆ ನಾಂದಿ ಹಾಡಿದೆ.ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ವಿಕಲಚೇತನರ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ. ಇದು ಹೊಸ ಪರಂಪರೆಯಾಗಿದೆ. ಮದುವೆ ಜತೆ ಬದುಕಿಗೂ ದಾರಿ ಮಾಡಿಕೊಡುತ್ತಿರುವುದು ಬಹುದೊಡ್ಡ ಕಾರ್ಯ. ಇದರಿಂದ ವಿಕಲಚೇತನರ ಬಾಳಲ್ಲಿ ಆಶಾಕಿರಣ ಮೂಡಿದಂತಾಗಿದೆ ಎಂದು ವಿಕಲಚೇತನರ ಸಾಮೂಹಿಕ ವಿವಾಹ ಆಯೋಜಕ ನಾಗರಾಜ ದೇಸಾಯಿ ತಿಳಿಸಿದ್ದಾರೆ.

Share this article