ಹನುಮ ಜಯಂತಿ ದಶಮಂಟಪ ಮೆರವಣಿಗೆ: ಸೌಹಾರ್ದ ಸಭೆ

KannadaprabhaNewsNetwork | Published : Dec 21, 2023 1:15 AM

ಸಾರಾಂಶ

ಕುಶಾಲನಗರದಲ್ಲಿ ಡಿ.24ರಂದು ನಡೆಯಲಿರುವ ಹನುಮ ಜಯಂತಿಯ ದಶಮಂಟಪ ಮೆರವಣಿಗೆ ಕುರಿತಾಗಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅಧ್ಯಕ್ಷತೆಯಲ್ಲಿ ಸರ್ವಧರ್ಮ ಪ್ರಮುಖರ ಸೌಹಾರ್ದ ಸಭೆ

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರದಲ್ಲಿ ಡಿ.24ರಂದು ನಡೆಯಲಿರುವ ಹನುಮ ಜಯಂತಿಯ ದಶಮಂಟಪ ಮೆರವಣಿಗೆ ಕುರಿತಾಗಿ ಸರ್ವಧರ್ಮ ಪ್ರಮುಖರ ಸೌಹಾರ್ದ ಸಭೆ ಕುಶಾಲನಗರ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ದಶಮಂಟಪ ಸಮಿತಿ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹನುಮ ಜಯಂತಿಯ ದಶಮಂಟಪದ ಮೆರವಣಿಗೆಯ ಸಂದರ್ಭ ನ್ಯಾಯಾಲಯದ ಆದೇಶವನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಮೆರವಣಿಗೆಯ ಸಂದರ್ಭ ವಾಹನ ಸಂಚಾರಕ್ಕೆ ಅಡಚಣೆ ಆಗದಂತೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು. ದಶಮಂಟಪಗಳ ಅಲಂಕಾರಕ್ಕೆ ಅತೀ ಹೆಚ್ಚಿನ ವಿದ್ಯುತ್ ಅಲಂಕಾರಿಕಾ ಅಪಾಯಕಾರಿ ವಸ್ತುಗಳನ್ನು ಬಳಸದಂತೆ ಮತ್ತು ಅತಿ ಹೆಚ್ಚಿನ ಕರ್ಕಶ ಡಿ.ಜೆ. ಸೌಂಡ್‌ನಿಂದ ಸಾರ್ವಜನಿಕ ಕಿರಿಕಿರಿ ಉಂಟಾಗದಂತೆ ಎಚ್ಚರ ವಹಿಸಬೇಕು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಗುಂಡಿ ಬಿದ್ದಿರುವ ರಸ್ತೆಯನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಅಲ್ಲದೆ ಹನುಮ ಜಯಂತಿಯಂದು ಮೆರವಣಿಗೆ ವೀಕ್ಷಿಸಲು ಮತ್ತು ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಹೊರ ಜಿಲ್ಲೆಗಳಿಂದ ಆಗಮಿಸುವ ಸಾರ್ವಜನಿಕರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುವುದು. ಮೆರವಣಿಗೆಯಲ್ಲಿ ಯಾವುದೇ ರೀತಿಯಾದ ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗುವುದು ಎಂದು ತಿಳಿಸಿದ ಅವರು, ಪೊಲೀಸ್ ಇಲಾಖೆಯ ಸಿಬ್ಬಂದಿ ಜೊತೆಗೆ ದಶಮಂಟಪ ಸಮಿತಿಯ ಪದಾಧಿಕಾರಿಗಳು ಕೂಡ ರಕ್ಷಣಾ ಕಾರ್ಯದಲ್ಲಿ ಸಹಕರಿಸಬೇಕು ಎಂದು ತಿಳಿಸಿದರು.

ಡಿವೈಎಸ್ಪಿ ಗಂಗಾಧರಪ್ಪ ಮಾತನಾಡಿ, ಮೆರವಣಿಗೆಯ ಸಂದರ್ಭ ದಶಮಂಟಪಗಳು ಮೆರವಣಿಗೆಯಲ್ಲಿ ಕ್ರಮ ಬದ್ಧವಾಗಿ ಸಾಗುವ ಮೂಲಕ ಯಾವುದೇ ಸಂಚಾರ ವ್ಯವಸ್ಥೆ ಗೊಂದಲಕ್ಕೆ ಅವಕಾಶ ಮಾಡಿಕೊಡಬಾರದು. ಪೊಲೀಸ್ ಇಲಾಖೆಯಿಂದ ನೀಡಲಾಗುವ ಕೆಲ ಷರತ್ತುಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕು. ದಶ ಮಂಟಪಗಳ ಮೆರವಣಿಗೆಯು ಯಶಸ್ವಿಯಾಗಿ ನೆರವೇರುವಂತೆ ಸಮಿತಿಯ ಪ್ರತಿಯೊಬ್ಬರು ಜಾಗೃತಿ ವಹಿಸಬೇಕು ಎಂದರು.

ದಶಮಂಟಪ ಮೆರವಣಿಗೆಯ ಸಂದರ್ಭ ನಗರದ ಹೃದಯ ಭಾಗದಲ್ಲಿ ಆಗುವಂತಹ ಸಂಚಾರಿ ಅನಾನುಕೂಲದ ಬಗ್ಗೆ ಸಭೆಯಲ್ಲಿ ಉಪಸ್ಥಿತರಿದ್ದ ಕೆಲವರು ಎಸ್.ಪಿ. ಅವರ ಗಮನ ಸೆಳೆದರು.

ಸಭೆಯಲ್ಲಿ ಎ.ಎಸ್ಪಿ. ಸುಂದರ್ ರಾಜ್, ವೃತ್ತ ನಿರೀಕ್ಷಕರಾದ ರಾಜೇಶ್, ಪ್ರಕಾಶ್, ಠಾಣಾಧಿಕಾರಿಗಳಾದ ಚಂದ್ರಶೇಖರ್, ರವಿಕುಮಾರ್, ಭಾರತಿ, ಕಾಶೀನಾಥ್ ಬಗಲಿ, ಚಂದ್ರಪ್ಪ, ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರ ಬಾಬು, ದಶಮಂಟಪ ಸಮಿತಿ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ, ಕಾರ್ಯದರ್ಶಿ ದೇವರಾಜು, ಪ್ರಶಾಂತ್, ಪ್ರವೀಣ್, ಪುರಸಭಾ ಸದಸ್ಯ ಶೇಕ್ ಖಲೀಮುಲ್ಲಾ, ಸಂಘಸಂಸ್ಥೆಗಳ‌ ಪ್ರಮುಖರಾದ ಎಚ್.ಟಿ. ವಸಂತ್, ಶಬೀರ್ ಅಹ್ಮದ್ ಮತ್ತಿತರರು ಇದ್ದರು.

Share this article