ಹಾವೇರಿ: ನಗರದ ಐದು ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್-ಯುಜಿ) ಬಹುತೇಕ ಸುಗಮವಾಗಿ ನಡೆಯಿತು.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ, ಪರೀಕ್ಷಾ ಕೇಂದ್ರಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪರೀಕ್ಷಾ ಮಾರ್ಗಸೂಚಿಗಳನ್ವಯ ಅಭ್ಯರ್ಥಿಗಳ ಪರಿಶೀಲನೆ, ಪ್ರವೇಶ ದ್ವಾರಗಳ ನಿರ್ವಹಣೆ ಹಾಗೂ ಭದ್ರತಾ ಕ್ರಮಗಳನ್ನು ನಿಯೋಜಿಸಲಾಗಿತ್ತು. ಮಧ್ಯಾಹ್ನ 1 ಗಂಟೆಯಷ್ಟೊತ್ತಿಗೆ ಬಹುತೇಕ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಉಪಸ್ಥಿತರಿದ್ದು, ಎಲ್ಲ ಹಂತದ ತಪಾಸಣೆಗೆ ಒಳಗಾಗಿ ಕೊಠಡಿಯಲ್ಲಿ ಆಸೀನರಾಗಿದ್ದರು. ಒಟ್ಟಿನಲ್ಲಿ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನೀಟ್ ಪರೀಕ್ಷೆ ಸುಸೂತ್ರವಾಗಿ ನಡೆಯಿತು.
409 ಅಭ್ಯರ್ಥಿಗಳು ಗೈರು: ನಗರದಲ್ಲಿ ನೀಟ್ ಪರೀಕ್ಷೆಗೆ ನಿಯೋಜಿಸಿದ ಐದು ಪರೀಕ್ಷಾ ಕೇಂದ್ರಗಳಲ್ಲಿ 2,532 ಅಭ್ಯರ್ಥಿಗಳು ನೊಂದಾಯಿಸಿಕೊಂಡಿದ್ದರು. ಈ ಪೈಕಿ 2,123 ಅಭ್ಯರ್ಥಿಗಳು ಹಾಜರಾಗಿದ್ದು, 409 ಅಭ್ಯರ್ಥಿಗಳು ಗೈರು ಹಾಜರಾಗಿದ್ದರು ಎಂದು ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್. ತಿಳಿಸಿದ್ದಾರೆ.