ಹಾವೇರಿ: ಬಿಡದಿ ರೈತರ ಹೋರಾಟವನ್ನು ಬೆಂಬಲಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ಮುರುಘರಾಜೇಂದ್ರ ಮಠದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಹೊರಟು ಕಾಗಿನೆಲೆ ವೃತ್ತದಲ್ಲಿ ರಸ್ತೆ ತಡೆದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಪ್ರತಿಭಟನಾ ನೇತೃತ್ವವಹಿಸಿದ್ದ ವೇದಿಕೆಯ ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ ಮಾತನಾಡಿ, ರಾಜ್ಯ ಸರ್ಕಾರ ಜೂ.13ರಂದು ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನಶಿಪ್ ಯೋಜನೆಗಾಗಿ 516 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಅಂತಿಮ ಅಧಿಸೂಚನೆ ಹೊರಡಿಸಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ನೂರಾರು ವರ್ಷಗಳಿಂದ ವಿಶಾಲ ಹಸಿರು ಮತ್ತು ಸಸ್ಯ ಸಮೃದ್ಧ ಕೃಷಿ ಭೂಮಿಯಾಗಿದ್ದ ಬಿಡದಿ ಸುತ್ತಮುತ್ತಲಿನ ಊರುಗಳನ್ನು ಕಾಂಕ್ರೀಟ್ ಕಟ್ಟಡಗಳಿಂದ ಕೂಡಿದ ಟೌನಶಿಪ್ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ. ಭೂಸ್ವಾಧೀನ ಅಧಿಸೂಚನೆ ಹೊರಬರುತ್ತಿದ್ದಂತೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಸ್ವಾಧೀನಕ್ಕೆ ಗುರುತಿಸಲಾದ ಭೂಮಿ ಅತ್ಯಂತ ಫಲವತ್ತಾಗಿದ್ದು ಕೃಷಿಗೆ ಅವಶ್ಯಕವಾಗಿದೆ. ಈ ಭೂಮಿಯಲ್ಲಿ ರೇಷ್ಮೆ, ತೆಂಗು, ಹೀಗೆ ಹತ್ತಾರು ಬೆಳೆಗಳನ್ನು ಬೆಳೆದು ಜೀವನ ನಡೆಸುತ್ತಿದ್ದಾರೆ. ಈ ಯೋಜನೆ ಎಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ರೂಪಿಸಿದ್ದರು. ಆಗ ರೈತರು ವಿರೋಧ ವ್ಯಕ್ತಪಡಿಸಿದಾಗ ಯೋಜನೆಯನ್ನು ಕೈಬಿಡಲಾಗಿತ್ತು. ಆದರೆ ಈಗಿನ ಸರ್ಕಾರ ರೈತರ ವಿರೋಧದ ನಡುವೆಯು ಜಾರಿಗೆ ತರುತ್ತಿದೆ. ಇದರ ಹಿಂದಿನ ಉದ್ದೇಶ ಏನು ಅಂತ ತಿಳಿಯದು. ಈ ಯೋಜನೆಗೆ ಸುಮಾರು ಏಳು ಸಾವಿರಕ್ಕೂ ಹೆಚ್ಚು ಎಕೆರೆ ಭೂಮಿ ಬೇಕಾಗಿದ್ದು, ಭೂಮಿಯನ್ನು ಕಸಿದುಕೊಂಡರೆ ರೈತರ ಗತಿ ಏನು? ಕೂಡಲೇ ರಾಜ್ಯ ಸರ್ಕಾರ ಈ ಯೋಜನೆಯನ್ನು ಕೈ ಬಿಟ್ಟು ರೈತರ ನೆರವಿಗೆ ಬರಬೇಕು. ಇಲ್ಲವಾದರೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರ ಶೆಟ್ಟಿ ಬಣ) ರಾಜ್ಯಾದ್ಯಂತ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಎಂದು ಈ ಮೂಲಕ ಎಚ್ಚರಿದರು.ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಪುಟ್ಟಪ್ಪ ಹಿತ್ತಲಮನಿ,ನೂರಹ್ಮದ ಲಕ್ಷ್ಮೇಶ್ವರ, ಮಾರುತಿ ಹಾಲಗಿ, ಮಾದೇವಪ್ಪ ಹೆಡಿಗೊಂಡ, ಖಲಂದರ ಎಲೆದಹಳ್ಳಿ, ವಿಜಯಕುಮಾರ ಎನ್.ಎಂ., ಫಕ್ಕೀರಪ್ಪ ಕಟ್ಟಿಮನಿ, ಅನಸೂಯಾ ಸಿದ್ದಪ್ಪಳವರ, ಕುಮಾರ ಸುಳ್ಳನವರ, ಮೌಲಾಸಾಬ ನಧಾಫ, ಮಾಲತೇಶ ಜಿ.ಕೆ., ಮೌಲಾಲಿ ಯರೆಮನಿ, ರಾಜಕುಮಾರ ದೊಡ್ಮನಿ, ಬರಮಪ್ಪ ಡಮ್ಮಳ್ಳಿ, ರಾಜು ನವಲಗುಂದ, ರಮೇಶ ದಾಸಪ್ಪನವರ, ಮಾಂತೇಶ ಶಿಗ್ಗಟ್ಟಿ, ಸುರೇಶ ಲಚ್ಚಮಣ್ಣನವರ, ಪವನ ವಡ್ಡರ, ಅಶೋಕ ಗದಗ ಸೇರಿದಂತೆ ಇತರರು ಇದ್ದರು.