ನೀಟ್ ಪರೀಕ್ಷೆ; ಬಳ್ಳಾರಿ ಜಿಲ್ಲೆಯಲ್ಲಿ 692 ವಿದ್ಯಾರ್ಥಿಗಳು ಗೈರು

KannadaprabhaNewsNetwork |  
Published : Jun 22, 2026, 02:15 AM IST
ಬಳ್ಳಾರಿಯ ಎಎಸ್‌ಎಂ ಕಾಲೇಜಿನಲ್ಲಿ ಜರುಗಿದ ನೀಟ್ ಪರೀಕ್ಷೆ ಶುರು ಮುನ್ನ ಪರೀಕ್ಷಾರ್ಥಿಗಳನ್ನು ತಪಾಸಣೆ ಮಾಡಲಾಯಿತು.  | Kannada Prabha

ಸಾರಾಂಶ

ಬಳ್ಳಾರಿ ನಗರದಲ್ಲಿ ಶಾಂತಿಯುತ ಹಾಗೂ ಕಟ್ಟುನಿಟ್ಟಿನ ಭದ್ರತೆಯ ನಡುವೆ ನಡೆಯಿತು.

ಬಳ್ಳಾರಿ: ದೇಶಾದ್ಯಂತ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಪದವಿ ಪ್ರವೇಶಕ್ಕಾಗಿ ಅತ್ಯಂತ ಮಹತ್ವದ್ದೆಂದು ಪರಿಗಣಿಸಲ್ಪಡುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಭಾನುವಾರ ಬಳ್ಳಾರಿ ನಗರದಲ್ಲಿ ಶಾಂತಿಯುತ ಹಾಗೂ ಕಟ್ಟುನಿಟ್ಟಿನ ಭದ್ರತೆಯ ನಡುವೆ ನಡೆಯಿತು.

ನಗರದ 11 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ 4,127 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರೂ ಅವರಲ್ಲಿ 3,435 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದು, 692 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ.

ಜಿಲ್ಲೆಯಲ್ಲಿ ಈ ಬಾರಿ ಶೇ.83.23ರಷ್ಟು ಹಾಜರಾತಿ ದಾಖಲಾಗಿದ್ದು, ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಆಸಕ್ತಿ ಮುಂದುವರಿದಿರುವುದನ್ನು ಇದು ಪ್ರತಿಬಿಂಬಿಸಿದೆ. ವೈದ್ಯಕೀಯ ಶಿಕ್ಷಣದ ಕನಸು ಹೊತ್ತ ಸಾವಿರಾರು ವಿದ್ಯಾರ್ಥಿಗಳು ಬೆಳಗ್ಗೆಯೇ ಪರೀಕ್ಷಾ ಕೇಂದ್ರಗಳತ್ತ ಆಗಮಿಸಿ ಪರೀಕ್ಷೆ ಬರೆದರು.

ಪರೀಕ್ಷೆಯು ಮಧ್ಯಾಹ್ನ ನಿಗದಿತ ವೇಳೆಗೆ ಆರಂಭವಾಗುವ ಮುನ್ನವೇ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಯಾವುದೇ ರೀತಿಯ ಅಕ್ರಮ ಅಥವಾ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು.

ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಕಡ್ಡಾಯ ತಪಾಸಣೆ ನಡೆಸಲಾಯಿತು. ಅಭ್ಯರ್ಥಿಗಳ ಪ್ರವೇಶ ಪತ್ರ, ಗುರುತಿನ ಚೀಟಿ ಹಾಗೂ ಇತರ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಕೇಂದ್ರದೊಳಗೆ ಪ್ರವೇಶ ನೀಡಲಾಯಿತು. ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಬ್ಲೂಟೂತ್ ಸಾಧನ, ಕ್ಯಾಲ್ಕುಲೇಟರ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕೇಂದ್ರದೊಳಗೆ ತೆಗೆದುಕೊಂಡು ಹೋಗಲು ಅವಕಾಶ ಇರಲಿಲ್ಲ. ವಿದ್ಯಾರ್ಥಿನಿಯರ ಆಭರಣ, ಕೂದಲಿನ ಕ್ಲಿಪ್ ಸೇರಿದಂತೆ ಅನುಮಾನಾಸ್ಪದ ವಸ್ತುಗಳನ್ನು ತಪಾಸಣೆಗೊಳಪಡಿಸಲಾಯಿತು.

ಪರೀಕ್ಷಾ ಕೇಂದ್ರಗಳ ಪ್ರವೇಶ ದ್ವಾರಗಳಲ್ಲಿ ಮೆಟಲ್ ಡಿಟೆಕ್ಟರ್‌ಗಳ ಮೂಲಕ ಪರಿಶೀಲನೆ ನಡೆಸಲಾಯಿತು. ಮಹಿಳಾ ಅಭ್ಯರ್ಥಿಗಳಿಗಾಗಿ ಪ್ರತ್ಯೇಕ ತಪಾಸಣಾ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಅನಗತ್ಯ ಜನಸಂದಣಿ ಸೇರುವುದನ್ನು ನಿಯಂತ್ರಿಸಲಾಗಿತ್ತು. ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ ವಿದ್ಯಾರ್ಥಿಗಳೊಂದಿಗೆ ಬಂದಿದ್ದ ಪೋಷಕರು ಕೇಂದ್ರಗಳ ಹೊರಭಾಗದಲ್ಲಿ ಕಾದು ಕುಳಿತ ದೃಶ್ಯ ಸಾಮಾನ್ಯವಾಗಿತ್ತು.

ಜಿಲ್ಲಾಡಳಿತ ಹಾಗೂ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಪರೀಕ್ಷೆ ವೇಳೆ ಯಾವುದೇ ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಿದ್ದರಿಂದ ಪರೀಕ್ಷೆ ಸುಗಮವಾಗಿ ಜರುಗಿತು. ಎಲ್ಲ ಕೇಂದ್ರಗಳಲ್ಲೂ ರಾಷ್ಟ್ರೀಯ ಪರೀಕ್ಷಾ ಮಂಡಳಿಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದ್ದು, ಪರೀಕ್ಷೆಯ ಪಾರದರ್ಶಕತೆ ಹಾಗೂ ವಿಶ್ವಾಸಾರ್ಹತೆ ಕಾಪಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಮಹತ್ವದ ಪರೀಕ್ಷೆಯಾಗಿರುವ ನೀಟ್, ಪ್ರತಿವರ್ಷ ಲಕ್ಷಾಂತರ ವಿದ್ಯಾರ್ಥಿಗಳ ಬರೆಯಲಿದ್ದು, ಬಳ್ಳಾರಿಯಲ್ಲಿ ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದು ಕಂಡು ಬಂತು.

ಪರೀಕ್ಷೆ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಬೆಳಿಗ್ಗೆಯೇ ಪೋಷಕರೊಂದಿಗೆ ನಗರಕ್ಕೆ ಆಗಮಿಸಿ, ಪರೀಕ್ಷಾ ಕೇಂದ್ರಕ್ಕೆ ತೆರಳಿದರು. ಬಸ್ ಸಮಸ್ಯೆ ಹಿನ್ನೆಲೆಯಲ್ಲಿ ಬೆಳಿಗ್ಗೆಯೇ ನಗರಕ್ಕೆ ಆಗಮಿಸಿದ್ದೇವೆ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಕನ್ನಡಪ್ರಭಕ್ಕೆ ತಿಳಿಸಿದರು. ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ಆರೋಪದ ಹಿನ್ನಲೆಯಲ್ಲಿ ರದ್ದಾಗಿದ್ದ ನೀಟ್ ಮರುಪರೀಕ್ಷೆ ದೇಶಾದ್ಯಂತ ಬಿಗಿ ಬಂದೋಬಸ್ತ್ ನಲ್ಲಿ ಭಾನುವಾರ ಜರುಗಿತು.

ಉಡದಾರ ಕಟ್‌:

ನೀಟ್‌ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಉಡದಾರವನ್ನು ಪರೀಕ್ಷಾ ಕೇಂದ್ರದ ಬಳಿ ಸಿಬ್ಬಂದಿ ಕಟ್‌ ಮಾಡಿದ್ದಾರೆ. ಈ ವೇಳೆ ಕೆಲ ವಿದ್ಯಾರ್ಥಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದರು ಎನ್ನಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತ ಜಗತ್ತಿಗೆ ಯೋಗ ಗುರು: ಅಭಿನವ ಕರಿಬಸವ ಶ್ರೀಗಳು
ನಿಯಮಿತ ಯೋಗಾಭ್ಯಾಸದಿಂದ ಆರೋಗ್ಯಕರ ಜೀವನ