ಕನ್ನಡಪ್ರಭ ವಾರ್ತೆ ಕೋಲಾರಮಳೆಯಿಂದಾಗಿ ಕೋಲಾರ ತಾಲೂಕು ಪಂಚಾಯಿತಿ ಸಭಾಂಗಣ ಸೋರುತ್ತಿದೆ. ತಾಲೂಕು ಪಂಚಾಯಿತಿ ಗ್ರಾಮೀಣ ಜನಪ್ರತಿನಿಧಿಗಳ ಧ್ವನಿಯಾಗಿ ಕೆಲಸ ಮಾಡುತ್ತಿದ್ದು, ತಾಲೂಕಿನಾದ್ಯಂತ ೨೩ ಸದಸ್ಯರ ಆಯ್ಕೆಯೊಂದಿಗೆ ೩೪ ಗ್ರಾಮ ಪಂಚಾಯಿತಿಗಳ ಕಾರ್ಯವೈಖರಿಯ ಉಸ್ತುವಾರಿಯನ್ನು ಹೊಂದಿದೆ.
೩ ಶಾಸಕರಿಗೂ ಕೇಂದ್ರ ಸ್ಥಾನ:ಜಿಲ್ಲಾ ಕೇಂದ್ರವಾಗಿರುವ ಇಲ್ಲಿ ಕೋಲಾರ, ಶ್ರೀನಿವಾಸಪುರ ಮತ್ತು ಬಂಗಾರಪೇಟೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಿರುವುದರಿಂದ ಆಯಾ ಕ್ಷೇತ್ರ ವ್ಯಾಪ್ತಿಯ ಹೋಬಳಿಗಳ ಪ್ರಗತಿ ಪರಿಶೀಲನೆಯನ್ನು ಆ ಮೂರು ಶಾಸಕರು ಇದೇ ಸಭಾಂಗಣದಲ್ಲಿ ನಡೆಸುವುದು ವಿಶೇಷವಾಗಿದೆ.ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಕೋಲಾರ ತಾಲ್ಲೂಕಿನ ಹೋಳೂರು, ಸುಗಟೂರು ಹೋಬಳಿಗಳ ಪ್ರಗರಿಪರಿಶೀಲನೆ ಅಲ್ಲಿನ ಶಾಸಕರ ಅಧ್ಯಕ್ಷತೆಯಲ್ಲಿ ಇದೇ ಸಭಾಂಗಣದಲ್ಲಿ ನಡೆಯುತ್ತದೆ. ಅದೇ ರೀತಿ ಬಂಗಾರಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಸಬಾ,ಹುತ್ತೂರು ಹೋಬಳಿಗಳ ಪ್ರಗತಿ ಪರಿಶೀಲನೆಯೂ ಅಲ್ಲಿನ ಶಾಸಕರಿಂದ ಇದೇ ಕೋಲಾರ ತಾಪಂ ಸಭಾಂಗಣದಲ್ಲಿ ನಡೆಯುತ್ತದೆ. ಕೋಲಾರ ತಾಲ್ಲೂಕಿನ ಉಳಿದ ಹೋಬಳಿಗಳ ಪ್ರಗತಿಪರಿಶೀಲನೆ, ತಾಪಂ ಸಾಮಾನ್ಯಸಭೆ, ತ್ರೈಮಾಸಿಕ ಪ್ರಗತಿಪರಿಶೀಲನೆ ಇದೇ ಸಭಾಂಗಣದಲ್ಲಿ ನಡೆಯುತ್ತದೆ.ಸೋರುವ ಮಾಳಿಗೆ ಕೂರಲು ಇಕ್ಕಟ್ಟು ಕೋಲಾರ ತಾಪಂ ಸಭಾಂಗಣ ಸೋರುತ್ತಿದೆ. ಸಾಮಾನ್ಯ ಸಭೆ, ಪ್ರಗತಿ ಪರಿಶೀಲನಾ ಸಭೆಗೆ ೨೩ ಸದಸ್ಯರು, ತಾಲೂಕಿನ ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯ ೨೮ ಇಲಾಖೆಗಳ ಅಧಿಕಾರಿಗಳು ಭಾಗವಹಿಸುವ ಸಭಾಂಗಣದಲ್ಲಿ ಇರುವುದು ೪೦ ಜನ ಕೂರಲು ಮಾತ್ರವೇ ಸ್ಥಳಾವಕಾಶ. ಅತಿ ಇಕ್ಕಟ್ಟಿನಲ್ಲಿ ಸಭೆಗಳು ನಡೆಯುತ್ತಿದ್ದು, ಜಿಲ್ಲಾಕೇಂದ್ರದಲ್ಲಿರುವ ತಾಲೂಕು ಪಂಚಾಯತಿ ಕಚೇರಿಯಲ್ಲಿ ಒಂದು ಸುಂದರ ಹಾಗೂ ಸುಸಜ್ಜಿತ ಸಭಾಂಗಣದ ತುರ್ತು ಅಗತ್ಯವಿದೆ.
ಹಿಂದಿನ ತಾಪಂ ಇಒ ಆಗಿದ್ದ ಮುನಿಯಪ್ಪ ಅವರು ತಮ್ಮ ಅವಧಿಯಲ್ಲಿ ತಾಪಂ ಸಭಾಂಗಣ ನವೀಕರಣ, ಕೊಳವೆ ಬಾವಿ ತೋಡಲು, ಇಓ ವಸತಿ ನಿರ್ಮಾಣ ಮತ್ತಿತರ ಮೂಲಸೌಲಭ್ಯಗಳಿಗಾಗಿ ಸ್ಟಾಂಪ್ ಡ್ಯೂಟಿ ಅಥವಾ ಅಧಿಭಾರ ಶುಲ್ಕದಡಿ ಇದ್ದ ೬೨ ಲಕ್ಷ ರು.ಗಳ ಕ್ರಿಯಾಯೋಜನೆ ತಯಾರಿಸಿ ಜಿಪಂಗೆ ಅನುಮೋದನೆಗಾಗಿ ಕಳುಹಿಸಿದ್ದರು. ಆದರೆ ಕಡತ ಕಳುಹಿಸಿ ಆರೇಳು ತಿಂಗಳಾದರೂ ಇನ್ನೂ ಅನುಮೋದನೆ ಸಿಕ್ಕಿಲ್ಲ ಎಂಬುದು ತಾಪಂ ಮಾಜಿ ಸದಸ್ಯರ ಆರೋಪವಾಗಿದ್ದು, ಸಭಾಂಗಣ ನಿರ್ಮಾಣಕ್ಕೆ ಕೂಡಲೇ ಅನುಮತಿ ಸಿಗಲಿ ಎಂದು ಒತ್ತಾಯಿಸಿದ್ದಾರೆ.ಸುಸಜ್ಜಿತ ಸಭಾಂಗಣ ಅಗತ್ಯ
ಜಿಲ್ಲಾ ಕೇಂದ್ರದ ಘನತೆಗೆ ತಕ್ಕಂತೆ ಒಂದು ಸುಂದರ ಹಾಗೂ ಸುಸಜ್ಜಿತ ಸಭಾಂಗಣ ನಿರ್ಮಾಣಕ್ಕೆ ಸ್ಟಾಂಪ್ ಡ್ಯೂಟಿ ಅನುದಾನ ಸಾಕಾಗದಿದ್ದರೆ ಇದೇ ಸಭಾಂಗಣದಲ್ಲಿ ವರ್ಷಪೂರ್ತಿ ತಮ್ಮ ವ್ಯಾಪ್ತಿಯ ಪ್ರಗತಿ ಪರಿಶೀಲನೆ ನಡೆಸುವ ಮೂವರು ಶಾಸಕರು ತಮ್ಮ ಶಾಸಕರ ಪ್ರದೇಶಾಭಿವೃದ್ದಿ ನಿಧಿಯಲ್ಲಿ ಒಂದಿಷ್ಟು ಅನುದಾನ ನೀಡುವ ಮೂಲಕ ನೆರವಾಗಬಹುದಾಗಿದೆ. ಕೋಟ್ತಾಪಂ ಸಭಾಂಗಣ ಅತಿ ತುರ್ತು ಎಂಬುದು ನಿಜ. ಆದರೆ ನಾವು ಕ್ರಿಯಾಯೋಜನೆ ತಯಾರಿಸಿ ಜಿಪಂಗೆ ಕಳುಹಿಸಿಕೊಟ್ಟಿದ್ದೇವೆ. ಜಿಪಂ ಸಿಇಒ ಅವರು ರಜಾ ಮೇಲೆ ಇರುವುದರಿಂದ ತಡವಾಗುತ್ತಿದ್ದು, ಅವರು ಬಂದೊಡನೇ ಕಡತ ವಿಲೇವಾರಿಯಾಗಲಿದ್ದು, ನವೀಕರಣ ಕಾರ್ಯ ಆರಂಭಗೊಳ್ಳಲಿದೆ.- ಜೋಸೆಫ್, ತಾಪಂ ಇಒ, ಕೋಲಾರ.