ಸುಂಟಿಕೊಪ್ಪ: ಟಾಟಾ ಕಾಫಿ ತೋಟದಲ್ಲಿ ಕಾರ್ಮಿಕ ಮಹಿಳೆಯೋರ್ವರ ಮೇಲೆ ಕಾಡು ಹಂದಿ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ವರದಿಯಾಗಿದೆ.ಬುಧವಾರ ಬೆಳಗ್ಗೆ 7.30 ರ ಸಂದರ್ಭ ಸುಂಟಿಕೊಪ್ಪ ಟಾಟಾ ಕಾಫಿ ತೋಟದಲ್ಲಿ ಕಾರ್ಮಿಕರು ಕಾಫಿ ಕೊಯ್ಯುವ ಕೆಲಸದಲ್ಲಿ ನಿರತರಾಗುವ ಸಂದರ್ಭ ಘಟನೆ ನಡೆದಿದೆ. ಸರಸ್ವತಿ ಎಂಬುವವರು ಇತರೆ ಕಾರ್ಮಿಕರೊಂದಿಗೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ದಿಢೀರನೆ ಕಾಡು ಹಂದಿ ಪ್ರತ್ಯಕ್ಷವಾಗಿದೆ. ಸರಸ್ವತಿ ಅವರ ಮೇಲೆ ಎರಗಿದಾಗ ಜೊತೆಗಿದ್ದ ಕಾರ್ಮಿಕರು ರಕ್ಷಣೆಗೆ ಧಾವಿಸಿ ಕಾಡು ಹಂದಿಯಿಂದ ಸರಸ್ವತಿ ಅವರನ್ನು ರಕ್ಷಿಸಿದ್ದಾರೆ. ವಿಷಯ ಅರಿತು ಕೂಡಲೇ ಧಾವಿಸಿ ಬಂದ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರು ಕೆ.ಕೆ. ಪ್ರಸಾದ್ ಕುಟ್ಟಪ್ಪ ಹಾಗೂ ಕೆ.ಎಂ. ಆಲಿಕುಟ್ಟಿ ಅವರು ಇತರೆ ಕಾರ್ಮಿಕರೊಂದಿಗೆ ಗಾಯಾಳು ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಸಾಗಿಸಿ ಚಿಕಿತ್ಸೆ ಕೊಡಿಸುವಲ್ಲಿ ನೆರವಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾಡಾನೆ ಹಾಗೂ ಹುಲಿ ದಾಳಿಗಳ ಬಗ್ಗೆ ಆಗಿಂದಾಗ್ಗೆ ಘಟನೆಗಳು ನಡೆಯುತ್ತಿದ್ದು ಇದೀಗ ಆ ಸಾಲಿಗೆ ಕಾಡು ಹಂದಿ ಸೇರ್ಪಡೆಗೊಂಡಿರುವುದು ಕಾರ್ಮಿಕರಲ್ಲಿ, ತೋಟದ ಮಾಲೀಕರಿಗೆ ಆತಂಕ ಭಯ ಉಂಟುಮಾಡಿದೆ.
-----------------------------------ಸುರಕ್ಷಿತ ಅಂತರ್ಜಾಲ ದಿನಮಡಿಕೇರಿ : ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುರಕ್ಷಿತ ಅಂತರ್ಜಾಲ ದಿನ ಕಾರ್ಯಕ್ರಮವನ್ನು ಮಂಗಳವಾರ ನಡೆಯಿತು.ಈ ಕಾರ್ಯಕ್ರಮವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಉದ್ಘಾಟಿಸಿ ಮಾತನಾಡಿ ಸುರಕ್ಷಿತ ಅಂತರ್ಜಾಲ ದಿನದ ಬಗ್ಗೆ ಮಾಹಿತಿಯನ್ನು ನೀಡಿದರು. ಎನ್‌ಐಸಿ ಅಧಿಕಾರಿಗಳಾದ ಸಿಂಧೂರ ತಳವಾರ ಅವರು ಸುರಕ್ಷಿತ ಇಂಟರ್ನೆಟ್ ಬಳಕೆ ಹಾಗೂ ಉಪಯೋಗದ ಬಗ್ಗೆ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಅಧಿಕಾರಿಗಳು ಹಾಗೂ ಆಡಳಿತ ಸಿಬ್ಬಂದಿ ಭಾಗಿಯಾಗಿದ್ದರು ಮತ್ತು ಎನ್‌ಐಸಿ ಸಿಬ್ಬಂದಿ ಭಾಗಿಯಾಗಿದ್ದರು.
----------------------------------