ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಶಿವನಸಮುದ್ರ (ಬ್ಲಫ್) ಸಮೀಪದ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರದ ಕೆನಾಲ್(ಕಾಲುವೆ)ಗೆ ಶನಿವಾರ ರಾತ್ರಿ ಕಾಡಾನೆ ಬಿದ್ದಿದ್ದು, ಸೋಮವಾರ ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು ಕೆನಾಲ್‌ನಿಂದ ಆನೆಯನ್ನು ಮೇಲೆತ್ತಲು ಸಾಕಷ್ಟು ಹರಸಾಹಸ ಪಡುತ್ತಿದ್ದಾರೆ.ಭಾನುವಾರ ಬೆಳಗ್ಗೆ 11.15ರ ಸುಮಾರಿಗೆ ಕಾವೇರಿ ನದಿಗೆ ಹೊಂದಿಕೊಂಡಂತೆ ಇರುವ ಬ್ಲಫ್‌ನ ಪಯನಿಯರ್ ಜಂಕೋ ಲಿಮಿಟೆಡ್ ಪವರ್ ಜನರೇಶನ್ ಯುನಿಟ್‌ನ 20 ಅಡಿ ಆಳದ ಕ್ಯಾನಲ್‌ಗೆ ನೀರು ಕುಡಿಯಲು ಬಂದು ಗಂಡಾನೆ ಆಕಸ್ಮಿಕವಾಗಿ ಇಳಿದಿದೆ. ನಂತರ ನೀರಿನ ಹರಿವಿನ ರಭಸಕ್ಕೆ ವಾಪಸ್ ಕೆನಾಲ್‌ನಿಂದ ಮೇಲೆ ಬಾರದೆ ಕೆನಾಲ್‌ನಲ್ಲಿಯೇ ಉಳಿದಿದೆ.
ಭಾನುವಾರ ಕೆನಾಲ್‌ನಲ್ಲಿ ಆನೆ ಓಡಾಟವನ್ನು ಗಮನಿಸಿದ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರದ ಸಿಬ್ಬಂದಿ ಆನೆ ವಾಪಸ್ ಹೋಗಬಹುದು ಎಂದು ಕಾದಿದ್ದಾರೆ. ಆದರೆ, ಭಾನುವಾರ ಸಂಜೆಯಾದರೂ ಕಾಡಾನೆ ಮೇಲೆ ಬಾರದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.ಸೋಮವಾರ ಬೆಳಗ್ಗೆ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಯು ಕೆನಾಲ್‌ನಿಂದ ಮೇಲೆ ಬರುವಂತೆ ಮಾಡಿದ ಪ್ರಯತ್ನ ವಿಫಲವಾಗಿವೆ. ಕಾವೇರಿ ನದಿಯಲ್ಲಿ ಹೆಚ್ಚಿನ ನೀರು ಹರಿಯುತ್ತಿದೆ. ಇದರಿಂದ ಆನೆಯು ಕೆನಾಲ್ ನ ಗೇಟ್ ನಿಂದ ಹೊರಬಾರದ ಹಿನ್ನೆಲೆಯಲ್ಲಿ ಕೆಆರ್ ಎಸ್ ಹಾಗೂ ಕಬಿನಿ ಜಲಾಶಯದಿಂದ ನೀರಿನ ಹರಿವಿನ ಪ್ರಮಾಣವನ್ನು ಕಡಿತ ಮಾಡಲು ಸೂಚಿಸಲಾಗಿದೆ.
ಮೂರು ದಿನಗಳಿಂದ ಆಹಾರವಿಲ್ಲದೇ ಆನೆ ಚಿರಾಟವನ್ನು ಗಮನಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಬ್ಬು ಸೇರಿದಂತೆ ಇತರೆ ಆಹಾರವನ್ನು ಕೆನಾಲ್‌ಗೆ ಹಾಕಿ ಆನೆ ರಕ್ಷಣೆಗೆ ಎಲ್ಲಾ ಸುರಕ್ಷತೆಗಳನ್ನು ಕೈಗೊಳ್ಳಲಾಗಿದೆ.ಕಾರ್ಯಾಚರಣೆ ಬಗ್ಗೆ ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಡಿ.ರಘು ಪ್ರತಿಕ್ರಿಯಿಸಿ, ಕೆನಾಲ್‌ಗೆ ಇಳಿದಿರುವ ಕಾಡಾನೆ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕ್ರೇನ್ ಮತ್ತು ಡ್ರೋನ್ ಸಹಾಯದಿಂದ ಆನೆಯನ್ನು ಗೇಟ್ ಮೂಲಕ ಹೊರ ತೆಗೆಯಲು ಮುಂದಾದರೂ ನೀರಿನ ರಭಸ ಹೆಚ್ಚಿರುವುದರಿಂದ ಸಾಧ್ಯವಾಗಿಲ್ಲ.
ಹೀಗಾಗಿ ವನ್ಯಜೀವಿ ತಂಡ, ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರ ಪಡೆಯಲಾಗಿದೆ. ಎಲ್ಲಾ ಅಧಿಕಾರಿಗಳು ಸ್ಥಳದಲ್ಲೇ ಇದ್ದು, ಅಧಿಕ ತಾಂತ್ರಿಕ ಸಾಮರ್ಥ್ಯದ ಕ್ರೇನ್ ಬಳಸಲು ಅಥವಾ ಆನೆ ಪ್ರಜ್ಞೆ ತಪ್ಪಿಸಿ ಆನೆ ರಕ್ಷಣೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.ಸಾರ್ವಜನಿಕರ ಆಕ್ರೋಶ:
ಕಾಡಾನೆ ಕೆನಾಲ್‌ಗೆ ಬಿದ್ದು ಮೂರು ದಿನ ಕಳೆದರೂ ಆನೆಯನ್ನು ರಕ್ಷಿಸದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಕಿಡಿಕಾರಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಯನ್ನು ಗೌಪ್ಯವಾಗಿ ಇಡಲು ಖಾಸಗಿ ವಿದ್ಯುತ್ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಕೆಲಸ ಮಾಡುವ ಸ್ಥಳೀಯ ಉದ್ಯೋಗಿಗಳಿಗೆ ಸೋಮವಾರ ರಜೆ ನೀಡಲಾಗಿದೆ ಎಂಬ ಗಂಭೀರ ಆರೋಪ ಸಹ ಕೇಳಿ ಬರುತ್ತಿದೆ.ಕಾಲುವೆಯಲ್ಲಿ ಬೃಹದಾಕಾರದ ಮೊಸಳೆ ಪ್ರತ್ಯಕ್ಷ
ಶ್ರೀರಂಗಪಟ್ಟಣ:ತಾಲೂಕಿನ ಕಿರಂಗೂರು ಗ್ರಾಮದ ನಡುವೆ ಹಾದು ಹೋಗಿರುವ ಕಾಲುವೆಯಲ್ಲಿ ಬೃಹದಾಕಾರದ ಮೊಸಳೆ ಪ್ರತ್ಯಕ್ಷಗೊಂಡು ಜನರನ್ನು ಭಯಭೀತಗೊಳಿಸಿದೆ.
ಗ್ರಾಮದ ಬನ್ನಿಮಂಟಪ ಸಮೀಪದ ಕಿರಂಗೂರು ಪ್ರಕಾಶ್ ಹಾಗೂ ಗುಂಡಪ್ಪರಿಗೆ ಸೇರಿದ ಮನೆ ಹಾಗೂ ಜಾಗದ ಮಧ್ಯೆ ಹಾದು ಹೋಗಿರುವ ಕಿರುಕಾಲುವೆಯಲ್ಲಿ ಕಳೆದ15 ದಿನಗಳಿಂದ ಮೊಸಳೆ ಪ್ರತ್ಯಕ್ಷಗೊಂಡಿದೆ.ಕಾಲುವೆ ಅಕ್ಕಪಕ್ಕದಲ್ಲೇ ಮನೆ ಹಾಗೂ ವ್ಯಾಪಾರ ಮಳಿಗೆಗಳಿವೆ. ಜನ ಹೊರಬರಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂದ ಗ್ರಾಮಸ್ಥರು ಪಂಚಾಯ್ತಿ ಸೇರಿದಂತೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದರೂ ಅಧಿಕಾರಿಗಳ ಇತ್ತ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.
ಈ ಕಿರುಕಾಲುವೆ ಶ್ರೀರಂಗಪಟ್ಟಣ- ಪಾಂಡವಪುರ ಹಾಗೂ ಬೆಂಗಳೂರು- ಮೈಸೂರ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ಹೊಂದಿಕೊಂಡಂತಿದ್ದು, ಇಲ್ಲಿ ಗ್ರಾಮಸ್ಥರು ಮಾತ್ರವಲ್ಲದೆ ನಿತ್ಯ ಸಾವಿರಾರು ಮಂದಿ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಹಾದು ಹೋಗಲಿದ್ದಾರೆ. ಯಾವುದೇ ಅವಘಡ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮೊಸಳೆ ಹಿಡಿಯುವಂತೆ ಆಗ್ರಹಿಸಿದ್ದಾರೆ.