ಕನ್ನಡಪ್ರಭ ವಾರ್ತೆ ತುಮಕೂರುಮನುಕುಲದ ಒಳಿತಿಗಾಗಿ ತತ್ವ, ಸಿದ್ಧಾಂತಗಳನ್ನು ಸಾರಿದ ಶಂಕರಾಚಾರ್ಯರು, ಶಾಂತಿ, ಸೌಹಾರ್ದ ಸಮಾಜಕ್ಕಾಗಿ ಮಾರ್ಗದರ್ಶನ ನೀಡಿದರು. ಅವರ ಆದರ್ಶಗಳನ್ನು ಪಾಲನೆ ಮಾಡುತ್ತಾ ಮಾದರಿ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗೋಣ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಹೇಳಿದರು.ನಗರದ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಬ್ರಾಹ್ಮಣ ಸಭಾ, ಶ್ರೀ ಶಂಕರ ಸೇವಾ ಸಮಿತಿ ಆಶ್ರಯದಲ್ಲಿ ಶಂಕರಾಚಾರ್ಯರ ಜಯಂತಿ ಆಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಧರ್ಮ ಪರಿಪಾಲನೆ, ಧಾರ್ಮಿಕ ಮನೋಭಾವದ ಮೂಲಕ ಮಾನವ ಬದುಕು ಸುಧಾರಣೆಗೆ ಶಂಕರಾಚಾರ್ಯರು ಮಾರ್ಗದರ್ಶನ ನೀಡಿದ್ದಾರೆ. ಅಲ್ಲದೆ ಮಠಗಳನ್ನು ಸ್ಥಾಪನೆ ಮಾಡಿ ಧರ್ಮ ರಕ್ಷಣೆ ಮಾಡಿದ್ದಾರೆ. ಇಂದಿನ ಸಮಾಜದ ಪ್ರಕ್ಷಬ್ಧ ಪರಿಸ್ಥಿತಿ, ವಿದ್ರೋಹ ಕೃತ್ಯಗಳ ನಿಯಂತ್ರಣಕ್ಕೆ ಇಂತಹ ಮಹನೀಯರ ಆದರ್ಶ, ಮಾರ್ಗದರ್ಶನ ಸಮಾಜಕ್ಕೆ ಅತ್ಯಗತ್ಯವಾಗಿವೆ. ಇವರ ವಿಚಾರಧಾರೆಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಸರ್ಕಾರ ಇಂತಹ ಮಹನೀಯರ ಜಯಂತಿ ಆಚರಣೆ ಮಾಡುತ್ತಿದೆ ಎಂದರು.ದೇಶಾದ್ಯಂತ ಸಂಚಾರ ಮಾಡಿದ ಶಂಕರಾಚಾರ್ಯರು ಸಮಾಜದ ಲೋಪದೋಷಗಳನ್ನು ತಿದ್ದುತ್ತಾ ಮಾನವ ಕಲ್ಯಾಣಕ್ಕಾಗಿ ತಮ್ಮ ತತ್ವ ಸಂದೇಶಗಳನ್ನು ಪ್ರಚಾರ ಮಾಡಿದರು. ಸಮಾಜ ಪರಿವರ್ತನೆಯ ಪ್ರಯತ್ನ ಮಾಡಿದರು. ಮುಂದಿನ ತಲೆಮಾರಿಗೆ ಅವರ ತತ್ವ, ಸಿದ್ಧಾಂತ ಪರಿಚರಿಸುವ ಕಾರ್ಯವಾಗಬೇಕು ಎಂದು ಹೇಳಿದರು.ಶೃಂಗೇರಿ ಶಂಕರ ಮಠದ ಶಂಕರ ತತ್ವ ಪ್ರಚಾರ ಸಂಯೋಜಕ ಎಂ.ಕೆ.ನಾಗರಾಜರಾವ್ ಮಾತನಾಡಿ, ಶಂಕರಾಚಾರ್ಯರು ನಮ್ಮ ಭಾರತದ ಆಧ್ಯಾತ್ಮಿಕತೆ, ಸನಾತನ ಧರ್ಮದ ಮೌಲ್ಯ ಪ್ರಚಾರ ಮಾಡಿ ಉಳಿಸಿ, ಬೆಳೆಸುವ ಪ್ರಯತ್ನ ಮಾಡಿದರು. ಜನರಲ್ಲಿ ಆಧ್ಯಾತ್ಮಿಕ, ಬೌದ್ಧಿಕ ಚಿಂತನೆ, ರಾಷ್ಟ್ರೀಯತೆಯ ಜಾಗೃತಿ ಮೂಡಿಸುವ ಮೂಲಕ ಮಾರ್ಗದರ್ಶನ ನೀಡಿದ ಶೇಷ್ಠ ಸಮಾಜ ಚಿಂತಕರು ಎಂದು ಹೇಳಿದರು.ಎಲ್ಲಾ ವರ್ಗದವರಿಗೂ ತಮ್ಮ ತತ್ವಾದರ್ಶಗಳು ತಲುಪಲು ಸಾಹಿತ್ಯ ರಚನೆ ಮಾಡಿ, ಅದನ್ನು ಸ್ಥಳೀಯ ಭಾಷೆಗಳಲ್ಲಿ ತಲುಪಿಸುವ ಪ್ರಯತ್ನ ಮಾಡಿದರು. ನಮ್ಮ ರಾಷ್ಟ್ರೀಯತೆ, ಗುರು ಪರಂಪರೆಯ ಮೌಲ್ಯಗಳನ್ನು ಸಾರಿ ಹೇಳಿದ ಶಂಕರಾಚಾರ್ಯರು, ಆಧ್ಯಾತ್ಮಕ ಸಂಪತ್ತು ಬೆಳೆಸಿ ಜನರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸಲು ಶ್ರಮಿಸಿದರು ಎಂದು ಹೇಳಿದರು.ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಎಚ್.ಎನ್.ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಹೊಳ್ಳ, ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಹಿರಿಯ ವಕೀಲ ಜಿ.ಎಸ್.ನಾರಾಯಣ್, ಶಂಕರ ಸೇವಾ ಸಮಿತಿ ಉಪಾಧ್ಯಕ್ಷ ಎಚ್.ಕೆ.ರಮೇಶ್, ಕಂದಾಯ ಇಲಾಖೆ ಸಹಾಯಕ ಆಯುಕ್ತ ಅನಂತರಾಮು, ಶ್ರೀ ಕೃಷ್ಣ ಬ್ಯಾಹ್ಮಣ ಸಭಾ ಅಧ್ಯಕ್ಷ ಎಚ್.ಎಸ್.ನಾಗಭೂಷಣ್, ಜಿಲ್ಲಾ ಬ್ರಾಹ್ಮಣ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ರಾಘವೇಂದ್ರ ಇದ್ದರು.