ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಶರಣ ಸಾಹಿತ್ಯ ಪರಿಷತ್ತು, ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆ, ಸಿವಿಜಿ ಪಬ್ಲಿಕೇಷನ್ಸ್ ಜಂಟಿಯಾಗಿ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಎಚ್.ಲಿಂಗಪ್ಪನವರ ‘ಬುದ್ದನಂತೆ ಚಿಂತಿಸಿದ ಅಲ್ಲಮ’ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿ, ಬಸವಣ್ಣ, ಬುದ್ದ, ಅಲ್ಲಮನಂತೆ ಎಲ್ಲರೂ ವೈಚಾರಿಕತೆಯನ್ನು ಬೆಳೆಸಿಕೊಳ್ಳೋಣ ಎಂದರು.
ಆಧುನಿಕ ಸಂದರ್ಭದ ಈ ವೇಳೆ ನೆತ್ತಿಯ ಹಸಿವು ನೀಗಿಸಲು ಜ್ಞಾನದ ಹಸಿವನ್ನು ತುಂಬಬೇಕಿದೆ. ಪ್ರತಿಯೊಂದನ್ನು ವಿಚಾರ, ವಿಮರ್ಶೆ, ತರ್ಕ ಮಾಡಿ ಪ್ರಶ್ನಿಸುವಂತ ಗುಣ ಬೆಳೆಸಿಕೊಳ್ಳುವಂತೆ ವೈಚಾರಿಕ ಸಂದೇಶವ ಅಲ್ಲಮ ನೀಡಿದ್ದು ಅದನ್ನು ಅನುಸರಿಸುವುದು ಅಗತ್ಯವೆಂದರು.ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿ, ಅಧ್ಯಾತ್ಮ ಲೋಕದ ನಕ್ಷತ್ರಗಳಂತಿದ್ದ ಬುದ್ದ, ಅಲ್ಲಮ ಇವರುಗಳ ಪ್ರಭಾವ ಸಮಾಜದ ಮೇಲೆ ದಟ್ಟವಾಗಿ ಹಬ್ಬಿದೆ .ಪ್ರಖರ ವಿಚಾರವಾದಿ, ವೈಚಾರಿಕ ಶಿಖರವಾಗಿದ್ದ ಬುದ್ದನಿಗೆ ಬಹಳಷ್ಟು ಬ್ರಾಹ್ಮಣ ಶಿಷ್ಯಂದಿರಿದ್ದರು. ಹಾಗಾಗಿ ಉತ್ತರ ಭಾರತದಲ್ಲಿ ಬೌದ್ದ ಧರ್ಮ ಹರಡಲು ಸಾಧ್ಯವಾಯಿತು ಎಂದರು.
ಹಿರಿಯೂರಿನ ಪ್ರೊ.ಎಂ.ಜಿ.ರಂಗಸ್ವಾಮಿ ಮಾತನಾಡಿ, ಕನ್ನಡವನ್ನು ಓದುವವರು, ಬರೆಯುವವರು ಕಡಿಮೆಯಾಗಿರುವುದರಿಂದ ಯುವ ತಲೆಮಾರುಗಳಿಗೆ ಕನ್ನಡವನ್ನು ಮುಟ್ಟಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಹನ್ನೆರಡನೆ ಶತಮಾನದಲ್ಲಿ ರಚನೆಯಾಗಿರುವ ವಚನಗಳು ಇಂದಿನ ಸಮಾಜಕ್ಕೆ ಪ್ರಸ್ತುತ ಎಂದರು.
ಜಾನಪದ ತಜ್ಞ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಮಾತನಾಡಿ, ಪಂಪ, ರನ್ನ, ಕುಮಾರವ್ಯಾಸ ಇವರುಗಳೆಲ್ಲಾ ಜ್ಞಾನ ಪರಂಪರೆಯನ್ನು ಕಟ್ಟಿಕೊಟ್ಟವರು. ಚರಿತ್ರೆ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗಬೇಕಿದೆ. ಅಲ್ಲಮನ ದೊಡ್ಡ ಬೆರಗನ್ನು ಅರ್ಥೈಸಿಕೊಳ್ಳುವುದು ಸುಲಭದ ಕೆಲಸವಲ್ಲ.ಅಲ್ಲಮನನ್ನು ಬಸವಣ್ಣ ಅನುಭವ ಮಂಟಪದ ಅಧ್ಯಕ್ಷನಾಗಿ ಮಾಡುತ್ತಾರೆ. ಅಲ್ಲಮನ ಜತೆ ಬುದ್ದನ ಬದುಕು ತಾಳೆಯಾಗುತ್ತದೆ ಎಂದು ನುಡಿದರು.
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್ ಅಧ್ಯಕ್ಷತೆ ವಹಿಸಿದ್ದರು. ಬಾಪೂಜಿ ಸಮೂಹ ಸಂಸ್ಥೆ ಬಿಇಡಿ. ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಆರ್.ಜಯಲಕ್ಷ್ಮಿ, ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ವೇದಿಕೆಯಲ್ಲಿದ್ದರು. ಉಪ ಪ್ರಾಚಾರ್ಯ ಶಿವಕುಮಾರ್, ಉಪನ್ಯಾಸಕ ಹನುಮಂತರೆಡ್ಡಿ, ರೈತ ಮುಖಂಡ ದಯಾನಂದ್, ಕವಿ ರಾಜೇಂದ್ರ ಪ್ರಸಾದ್, ರಂಗಸ್ವಾಮಿ, ಕೆ.ಪಿ.ಎಂಗಣೇಶಯ್ಯ, ಯಶೋಧಮ್ಮ ಡಾ.ಬಿ.ರಾಜಶೇಖರಪ್ಪ ಇದ್ದರು.