ಕನ್ನಡಪ್ರಭ ವಾರ್ತೆ ಮಳವಳ್ಳಿ
ಮನೆಗೆ ಸೀಮಿತವಾಗಿದ್ದ ಮಹಿಳೆ ಪ್ರಸ್ತುತದಲ್ಲಿ ಎಲ್ಲಾ ರಂಗದಲ್ಲಿಯೂ ಸಾಧನೆ ಮಾಡುವ ಜೊತೆಗೆ ಪುರುಷರಿಗಷ್ಟೆ ಸಮಾನಾಗಿ ನಿಂತಿದ್ದಾರೆ ಎಂದು ತಹಸೀಲ್ದಾರ್ ಎಸ್.ವಿ.ಲೋಕೇಶ್ ತಿಳಿಸಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಕೇಂದ್ರ ಸಂವಹನ ಇಲಾಖೆ, ತಾಲೂಕು ಆಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ಪೋಷಣ್ ಮಾಸಾಚರಣೆ ಹಾಗೂ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಸ್ವತಂತ್ರ‍್ಯ ಮತ್ತು ಸಂವಿಧಾನದ ನಂತರ ಎಲ್ಲವೂ ಬದಲಾಗಿವೆ. ಸರ್ಕಾರ ಪೋಷಣ್ ಮಾಸಾಚರಣೆಗೆ ಬಹಳ ಮಹತ್ವವನ್ನು ನೀಡಿ ಮಹಿಳೆ ಸಶಕ್ತೀಕರಣಕ್ಕೆ ಒತ್ತು ನೀಡುತ್ತಿದೆ. ಮಹಿಳೆಗೆ ವಿದ್ಯೆ ಕಲಿತರೇ ಕುಟುಂಬ ಬೆಳಗುತ್ತದೆ. ಆರ್ಥಿಕ ಸ್ವಾವಲಂಬಿಯಾದರೆ ಆ ಮನೆಯೇ ಬ್ಯಾಂಕ್ ಆಗಿ ರೂಪುಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.ಕೇಂದ್ರ ಸಂವಹನ ಇಲಾಖೆ ಮೈಸೂರಿನ ಕ್ಷೇತ್ರ ಪ್ರಚಾರ ಅಧಿಕಾರಿ ಎಸ್.ಟಿ.ಶೃತಿ ಮಾತನಾಡಿ, ಪೋಷಣ ಮಾಸಾಚರಣೆ ಮೂಲಕ ದೇಶಾದ್ಯಂತ ಮಹಿಳೆಯರಲ್ಲಿ ಆರೋಗ್ಯ ಹಾಗೂ ಆಹಾರ ಸೇವನೆ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಮಹಿಳೆಯರ ಅಭಿವೃದ್ದಿಗಾಗಿ ಹಲವು ಸೌಲಭ್ಯ ನೀಡಲಾಗುತ್ತಿದೆ. ಮಾಹಿತಿ ಪಡೆದು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ತಾಲೂಕು ವೈದ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ ಮಾತನಾಡಿ, ಮಹಿಳೆಯರು ಉತ್ತಮ ಆರೋಗ್ಯಕ್ಕಾಗಿ ಮೊಳಕೆ ಕಾಳು, ಸೊಪ್ಪು ತರಕಾರಿ ಹಾಲು ಹಣ್ಣುಗಳನ್ನು ಸಮರ್ಪಕವಾಗಿ ಸೇವನೆ ಮಾಡಬೇಕು, ಆಶಾ ಕಾರ್ಯಕರ್ತರು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾಮೀಣ ಜನರು ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಇ.ನಂಜಾಮಣಿ ಮತ್ತು ಆರ್ಥಿಕ ಸಾಕ್ಷರತೆ ಸಂಯೋಜಕ ವಿನೋದ್ ವಿ.ಜೋಶಿ ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಬಹುಮಾನ ವಿತರಿಸಲಾಯಿತು. ನಶೆ ಮುಕ್ತ ಭಾರತ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಆರೋಗ್ಯ ಸಿಬ್ಬಂದಿ ಇದ್ದರು.