ಚಿತ್ರದುರ್ಗ: ಮಹಿಳೆ ಇಂದು ಅಡುಗೆ ಮನೆಗೆ ಸೀಮಿತವಾಗದೆ ಎಲ್ಲ ವಲಯದಲ್ಲಿಯೂ ಸಮಾನ ಅವಕಾಶ ಪಡೆದುಕೊಂಡು ದೇಶದ ಅಭಿವೃದ್ಧಿಯಲ್ಲಿ ತನ್ನ ಪಾಲುದಾರಿಕೆ ತೋರಿಸುತ್ತಿದ್ದಾಳೆ ಎಂದು ತಹಸೀಲ್ದಾರ್ ಡಾ.ನಾಗವೇಣಿ ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ವತಿಯಿಂದ ನಗರದ ಬರಗೇರಮ್ಮ ಸಮುದಾಯ ಭವನ ಸಭಾಂಗಣದಲ್ಲಿ ಆಯೋಜಿಸಿದ್ದ ಚಿತ್ರದುರ್ಗ ತಾಲೂಕು ಮಟ್ಟದ ಜ್ಞಾನವಿಕಾಸ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಅಬಲೆಯರಲ್ಲ, ಸಬಲೆಯರು ಎಂಬದು ಪ್ರತಿ ಹಂತದಲ್ಲಿಯೂ ಸಾಭೀತಾಗುತ್ತಿದೆ. ಮಹಿಳೆಯರಲ್ಲಿ ಸ್ವಾಭಿಮಾನದ ಬದುಕು ಮೂಡಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು. ಬಿಸಿ ಟ್ರಸ್ಟ್ ನ ಚಿತ್ರದುರ್ಗ ತಾಲೂಕು ಯೋಜನಾಧಿಕಾರಿ ಅಶೋಕ್ ಮಾತನಾಡಿ, ಜ್ಞಾನ ವಿಕಾಸ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡ ಮಹಿಳೆಯರ ಬದುಕಿನಲ್ಲಿ ಅನೇಕ ಮಹತ್ತರ ಬದಲಾವಣೆಗಳಾಗಿವೆ. ಧರ್ಮಸ್ಥಳ ಯೋಜನೆ ಕೇಂದ್ರದ ಮೂಲಕ ಸೌಲಭ್ಯಗಳ ಪಡೆದುಕೊಂಡು ಜೀವನದಲ್ಲಿ ಸದೃಢರಾಗುತ್ತಿದ್ದಾರೆ ಎಂದ ಅವರು, ಮಕ್ಕಳ ಲಾಲನೆ ಪಾಲನೆಯಲ್ಲಿ ತಾಯಿಯ ಪಾತ್ರ ಮುಖ್ಯವಾಗಿದೆ. ಅದೇ ರೀತಿ ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ಗಣನೀಯವಾಗಿದೆ ಎಂದು ತೋರಿಸಿಕೊಟ್ಟಿದ್ದಾಳೆ ಎಂದು ಹೇಳಿದರು. ಕೆಡಿಪಿ ಸದಸ್ಯ ಸಿ.ಬಿ.ನಾಗರಾಜ್ ಮಾತನಾಡಿ, ಸರ್ಕಾರದ ಕೈಲಿ ಮಾಡಲು ಸಾಧ್ಯವಿಲ್ಲದ ಕೆಲಸಗಳನ್ನು ಇಂದು ಧರ್ಮಸ್ಥಳ ಯೋಜನೆ ಮಾಡುತ್ತಿದೆ ಎಂದರು.
ಶರಣ ಸೇನೆ ಅಧ್ಯಕ್ಷ ಮರುಳಾರಾಧ್ಯ, ನಗರಸಭೆ ಎಂಟನೇ ವಾರ್ಡ್ ಸದಸ್ಯ ಜೆ.ಶಶಿಧರ, ಎಂ.ಜಿ.ಶಶಿಕಲಾ ಮೂರ್ತಿ, ಪ್ರಜಾಪಿತ ಬ್ರಹ್ಮಕುಮಾರಿ ರಾಜ ಯೋಗಿ ಅಕ್ಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ರಂಗೋಲಿ, ಹೂಗುಚ್ಛ, ಹೂಮಾಲೆ ತಯಾರಿ ಹಾಗೂ ನೃತ್ಯ ಕಾರ್ಯಕ್ರಮಗಳ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಾದವರನ್ನು ಬಹುಮಾನ ನೀಡಿ ಅಭಿನಂದಿಸಲಾಯಿತು. ವಲಯ ಮೇಲ್ವಿಚಾರಕ ಶಿವಕುಮಾರ್ ನಿರೂಪಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿಯಾದ ಚಂದ್ರಮ್ಮ ವಂದಿಸಿದರು. ಚಿತ್ರದುರ್ಗ ತಾಲೂಕಿನ 25 ಜ್ಞಾನ ವಿಕಾಸ ಕೇಂದ್ರಗಳನ್ನು ನಿರ್ವಹಿಸುತ್ತಿರುವ ಸೇವಾಪ್ರತಿನಿಧಿಗಳು ಹಾಗೂ ಸುಮಾರು 500ಕ್ಕಿಂತಲೂ ಹೆಚ್ಚಿನ ಸದಸ್ಯರು ಭಾಗವಹಿಸಿದ್ದರು.