ಅಶೋಕ ಸೊರಟೂರ ಲಕ್ಷ್ಮೇಶ್ವರ
ಒಣಭೂಮಿ ಅಧಿಕವಾಗಿರುವ ಗದಗ ಜಿಲ್ಲೆಯಲ್ಲಿ ಪಾಪಸ್ ಕಳ್ಳಿ ಜಾತಿಗೆ ಸೇರಿದ ಅಧಿಕ ಪೋಷಕಾಂಶ ಹೊಂದಿರುವ ಡ್ರ‍್ಯಾಗನ್ ಫ್ರೂಟ್ ಬೆಳೆಯಲು ರೈತರು ಮುಂದಾಗಿದ್ದಾರೆ.ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಗ್ರಾಮದಲ್ಲಿ ವೈ.ಡಿ. ಪಾಟೀಲ ಬಿಇಎಂಎಸ್ ಕಲಿತು ವೈದ್ಯರಾಗಿದ್ದಾರೆ. ತಮ್ಮದೆ ಕ್ಲಿನಿಕ್ ತೆರೆದು ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಸ್ವತಃ ದುಡಿಮೆಯಲ್ಲಿ ಉನ್ನತ ಸಾಧನೆ ಮಾಡಬೇಕೆಂಬ ಹಂಬಲದಿಂದ ಗೊಜನೂರ ಗ್ರಾಮದಲ್ಲಿ ಯಾರು ಖರೀದಿಸಲು ಆಸಕ್ತಿ ತೋರದ ಐದೂವರೆ ಎಕರೆ ಬರಡು ಭೂಮಿ ಖರೀದಿ ಮಾಡಿ ಕೃಷಿಯಲ್ಲಿ ತೊಡಗಿದ್ದಾರೆ.
ಕಡಿಮೆ ನೀರು ಇರುವ ಒಣಭೂಮಿ ಪ್ರದೇಶದಲ್ಲಿ ಬೆಳೆಯಲು ಸೂಕ್ತವಾಗಿರುವ ಡ್ರ‍್ಯಾಗನ್ ಫ್ರೂಟ್ ಬೆಳೆಯಬೇಕೆಂಬ ಇಚ್ಛೆಯಿಂದ ವೈ.ಡಿ. ಪಾಟೀಲ ಅವರು ೨೦೨೨ರಲ್ಲಿ ಉದ್ಯೋಗ ಖಾತ್ರಿ ಯೋಜನೆಯ ₹೧.೩೦ ಲಕ್ಷ ಅನುದಾನದಲ್ಲಿ ತಮ್ಮ ಒಂದು ಎಕರೆ ಭೂಮಿಯಲ್ಲಿ ಇಸ್ರೇಲ್ ಮಾದರಿ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಅಂದರೆ ಕಡಿಮೆ ಭೂಮಿಯಲ್ಲಿ ಹೆಚ್ಚು ಸಂಖ್ಯೆಯ ಡ್ರ‍್ಯಾಗನ್ ಫ್ರೂಟ್ ಸಸಿ ನಾಟಿ ಮಾಡಿದ್ದಾರೆ. ಅಂದರೆ ಸಾಮಾನ್ಯ ಪದ್ಧತಿಯಲ್ಲಿ ೩೨೦೦ ಸಸಿಗಳನ್ನು ಎರಡು ಎಕರೆಯಲ್ಲಿ ಪ್ರದೇಶದಲ್ಲಿ ನಾಟಿ ಮಾಡಬೇಕು. ಆದರೆ, ಇವರು ಒಂದೇ ಎಕರೆಯಲ್ಲಿ ೩೨೦೦ ಸಸಿ ನಾಟಿ ಮಾಡಿ ಅದರಲ್ಲಿ ಯಶಸ್ಸು ಕಂಡಿದ್ದಾರೆ.ಬೆಳೆಯುವ ವಿಧಾನ, ವೆಚ್ಚ: ಡ್ರ್ಯಾಗನ್ ಪ್ರೂಟ್ ಬೆಳೆ ಬೆಳೆಯಲು ಮೊದಲು ಕಲ್ಲಿನ ಕಂಬದ ಬದಿ ಸಸಿ ನಾಟಿ ಮಾಡಲಾಗುತ್ತದೆ. ೧ ಕಂಬದಿಂದ ೪ ಅಡಿ ಅಂತರದಲ್ಲಿ ಮತ್ತೊಂದು ಕಂಬ ಮತ್ತು ೮ ಅಡಿ ಅಂತರದ ಸಾಲು, ಎಕರೆಗೆ ೩೦೦ ಕಂಬಗಳು ಬರುತ್ತವೆ. ಒಂದು ಕಂಬಕ್ಕೆ ೪ ಹಣ್ಣಿನ ಸಸಿಗಳಂತೆ ಒಟ್ಟು ೩೨೦೦ ಸಸಿ ನಾಟಿ ಮಾಡಲಾಗಿದೆ. ಇವುಗಳಿಗೆ ಹನಿ ನೀರಾವರಿ ಮೂಲಕ ನೀರುಣಿಸಲಾಗುತ್ತದೆ. ₹ ೪.೫ ಲಕ್ಷ ವೆಚ್ಚ ಮಾಡಿದ್ದಾರೆ. ನಾಟಿ ಮಾಡಿದ ವರ್ಷದ ಆನಂತರ ಇಳುವರಿ ಆರಂಭವಾಗುತ್ತದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಕಟಾವು ಮಾಡಬಹುದಾಗಿದೆ. ಈ ಬೆಳೆಗೆ ರೋಗವು ಕಡಿಮೆ, ಸಾವಯವ ಪದ್ಧತಿಯಲ್ಲಿ ಕೋಳಿ, ಸಗಣಿ ಗೊಬ್ಬರ ಹಾಕಿ ಬೆಳೆಯುತ್ತಿದ್ದಾರೆ. ಇದಕ್ಕೆ ಒಂದು ಸಾರಿ ವೆಚ್ಚ ಮಾಡಿದರೆ ಸತತ ೨೦ ವರ್ಷಗಳ ಕಾಲ ಲಾಭ ಪಡೆಯಬಹುದಾದ ಬೆಳೆಯಾಗಿದೆ. ಮಾರುಕಟ್ಟೆಯಲ್ಲಿ ಈ ಹಣ್ಣಿಗೆ ಉತ್ತಮ ಬೆಲೆ ಹಾಗೂ ಬೇಡಿಕೆಯು ಇದೆ. ಪಾಟೀಲ ಅವರು ಗದಗ, ಲಕ್ಷ್ಮೇಶ್ವರದ ತಮ್ಮ ಪರಿಚಿತ ಹಣ್ಣು ಮಾರಾಟಗಾರರಿಗೆ ₹ ೮೦ಗೆ ಕೆಜಿಯಂತೆ ಮಾರಾಟ ಮಾಡಿ ಕಳೆದ ವರ್ಷ ₹1 ಲಕ್ಷ ಆದಾಯ ಪಡೆದಿದ್ದಾರೆ. ಸದ್ಯ ₹ ೧೨೦ ಕೆಜಿಯಂತೆ ಮಾರಾಟ ಮಾಡುತ್ತಿದ್ದು ₹ ೨-೩ ಲಕ್ಷ ಆದಾಯದ ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಪ್ರಯೋಜನಗಳು: ಡ್ರ್ಯಾಗನ್ ಫ್ರೂಟ್‌ನ ವೈಜ್ಞಾನಿಕ ಹೆಸರು ಹಿಲೊಸೆರಾಸ್ ಉಂಡಸ್. ಡ್ರ‍್ಯಾಗನ್ ಫ್ರೂಟ್‌ನಲ್ಲಿ ಕಬ್ಬಿಣಾಂಶ, ಅಧಿಕ ಪ್ರೋಟಿನ್, ಅಧಿಕ ಕ್ಯಾಲೋರಿ ಹೊಂದಿದೆ. ಅದರಲ್ಲೂ ಮಳೆಗಾಲದಲ್ಲಿ ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಲಿದೆ. ಸೋಂಕನ್ನು ಕಡಿಮೆ ಮಾಡುವ ವಿಟಮಿನ್ ಸಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಚರ್ಮಕ್ಕೆ ತುಂಬ ಪ್ರಯೋಜನಕಾರಿಯಾಗಿದ್ದು, ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ರಕ್ಷಿಸುತ್ತದೆ. ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಶೀತ, ಕೆಮ್ಮು ಮತ್ತು ಜ್ವರದಂತಹ ರೋಗಗಳ ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ. ಡ್ರ್ಯಾಗನ್ ಹಣ್ಣು ತಿನ್ನುವುದರಿಂದ ಹೃದಯದ ಆರೋಗ್ಯವೂ ಸುಧಾರಿಸುತ್ತದೆ. ಇದು ಹೃದಯದ ಸ್ನಾಯುವನ್ನು ಬಲಪಡಿಸಲು ಮತ್ತು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಪ್ರಮುಖವಾಗಿದ್ದು. ಯೋಜನೆಯಲ್ಲಿ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿ ಎಂದು ಭಾಗಗಳಿವೆ. ತೋಟಗಾರಿಕೆ ಬೆಳೆ, ಅರಣ್ಯ ಬೆಳೆ ಬೆಳೆದುಕೊಳ್ಳಲು ಅವಕಾಶವಿದೆ. ರೈತರು ಸ್ವ ಇಚ್ಛೆ ಹಾಗೂ ಆಸಕ್ತಿಯಿಂದ ಯೋಜನೆಯಡಿ ದೊರೆಯುವ ಅನುದಾನ ಬಳಕೆ ಮಾಡಿಕೊಂಡು ಗೊಜನೂರ ಗ್ರಾಮದಲ್ಲಿ ವೈ.ಡಿ. ಪಾಟೀಲ ಅವರಂತೆ ಆರ್ಥಿಕವಾಗಿ ಸಬಲರಾಗಬೇಕು ಎಂಬುದು ಯೋಜನೆಯ ಉದ್ದೇಶವಾಗಿದೆ. ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ತಿಳಿಸಿದ್ದಾರೆ.ಗದಗ ಜಿಪಂ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಡ್ರ‍್ಯಾಗನ್ ಫ್ರೂಟ್ ಬೆಳೆಯಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಅದರಂತೆ ₹೧,೩೦,೦೦೦ ಅನುದಾನದಲ್ಲಿ ತಮ್ಮ ಒಂದು ಎಕರೆ ಡ್ರ್ಯಾಗನ್ ಫ್ರೂಟ್ ಬೆಳೆದಿದ್ದೇನೆ. ಸರ್ಕಾರದ ಯೋಜನೆ ಸದ್ಬಳಕೆ ಮಾಡಿಕೊಂಡು ಕೃಷಿ ಕ್ಷೇತ್ರದಲ್ಲಿಯೇ ಲಾಭ ಪಡೆದು ನೆಮ್ಮದಿಯ ಜೀವನ ಕಟ್ಟಿಕೊಳ್ಳಬಹುದಾಗಿದೆ ಎಂದು ಡ್ರ‍್ಯಾಗನ್ ಫ್ರೂಟ್ ಬೆಳೆಗಾರ ವೈ.ಡಿ. ಪಾಟೀಲ ತಿಳಿಸಿದ್ದಾರೆ.