ಕನ್ನಡಪ್ರಭ ವಾರ್ತೆ ಮೈಸೂರು
ಮಲಗುವಾಗ ರೈತರು, ಏಳುವಾಗ ಸೈನಿಕರನ್ನು ನೆನಪಿಸಿಕೊಳ್ಳಬೇಕು ಎಂದು ನಿವೃತ್ತ ಹವಾಲ್ದಾರ್ ಕೆ.ಪಿ. ದಿವಾಕರ್ ತಿಳಿಸಿದರು.ನಗರದ ವಿಜಯ ವಿಠಲ ವಿದ್ಯಾಶಾಲೆಯಲ್ಲಿ 25ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್ ಆಚರಣೆಯಲ್ಲಿ ಮಾತನಾಡಿದ ಅವರು, ದೇಶ ಸೇವೆ ಮಾಡುವುದು ಪುಣ್ಯದ ಕೆಲಸ. ಮೊದಲು ತಂದೆ ತಾಯಿ, ಗುರುಗಳ ಸೇವೆ ನಂತರ ದೇಶ ಸೇವೆ ಮಾಡಬೇಕು. ಸೈನ್ಯಕ್ಕೆ ಹೆಚ್ಚು ಯುವಕರು ಸೇರಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಿಜಯ ವಿಠಲ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಆರ್. ವಾಸುದೇವ್ ಭಟ್ ಮಾತನಾಡಿ, ಭಾರತೀಯರೆಲ್ಲ ನೆಮ್ಮದಿಯಿಂದ ಇದ್ದೇವೆ ಎಂದರೆ ಅದಕ್ಕೆ ಕಾರಣ ದೇಶದ ಗಡಿಯನ್ನು ಕಾಯುತ್ತಿರುವ ಸೈನಿಕರು. ಸಮಾಜದಲ್ಲಿ ಒಳ್ಳೆಯ ಸ್ಥಾನದಲ್ಲಿದ್ದು, 4 ಜನರಿಗೆ ಉಪಯೋಗವಾಗುವ ಹಾಗೆ ಬದುಕುವುದು ಕೂಡ ಒಂದು ದೇಶ ಸೇವೆ. ದೇಶಕ್ಕೋಸ್ಕರ ಪ್ರಾಣ ತ್ಯಾಗ ಮಾಡಲು ಸದಾ ಸಿದ್ಧರಿರಬೇಕು ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.ಭಾರತೀಯ ವಾಯುಪಡೆ ತಂಡದ 1999 ನಾಯಕ ಶಿವರಾಜ್ ಮಾತನಾಡಿ, 1999 ರಲ್ಲಿ ನಡೆದ ಕಾರ್ಗಿಲ್ ಯುದ್ಧವು ಭಾರತ ಮತ್ತು ಪಾಕಿಸ್ತಾನದ ನಡುವಿನ ಮಹತ್ವದ ಸಂಘರ್ಷವಾಗಿತ್ತು. ಇದು ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ನಡೆಯಿತು. ಇದು ವಿಶ್ವದ ಅತಿ ಎತ್ತರದ ಯುದ್ಧ ಭೂಮಿಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.
ಇದೇ ವೇಳೆ ದೇಶಕ್ಕಾಗಿ ಸೇವೆ ಸಲ್ಲಿಸಿ ವೈರಿಗಳ ದಾಳಿಗೆ ತುತ್ತಾಗಿ ವೀರಮರಣ ಅಪ್ಪಿದಸುಬೇದಾರ್ ರಮೇಶ್ ಕೆ.ಪಿ. ಪಾಟೀಲ್ ಅವರ ಪತ್ನಿ ಲಕ್ಷ್ಮಿ ಪಾಟೀಲ್ ಅವರನ್ನು ಗೌರವಿಸಲಾಯಿತು. ವಿಶೇಷವಾಗಿ ಶಾಲೆಯ ಎನ್.ಸಿ.ಸಿ ವಿದ್ಯಾರ್ಥಿಗಳು ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ಸೈನಿಕರಿಗೆ ಗೌರವ ಸಲ್ಲಿಸಿದರು.ವಿಜಯ ವಿಠಲ ವಿದ್ಯಾಶಾಲೆಯ ಪ್ರಾಂಶುಪಾಲೆ ಎಸ್.ಎ ವೀಣಾ, ವಿವಿಧ ವಿಭಾಗದ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು.