ಹನೂರು: ಬೇಸಿಗೆಯಲ್ಲಿ ನೀರಿನಲ್ಲಿ ಆಡಿ ತಂಪಾಗಿಸಿಕೊಳ್ಳಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಹನೂರಿನ ಹೊಗೇನಕಲ್ ಜಲಪಾತಕ್ಕೆ ಬಂದ ಐವರು ಯುವಕರ ಪೈಕಿ ಓರ್ವ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿರುವ ಆಘಾತಕಾರಿ ಘಟನೆಯು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೊಗೇನಕಲ್‌ನಲ್ಲಿ ಶನಿವಾರ ಸಂಭವಿಸಿದೆ. ಘಟನೆ ಸಂಬಂಧ ಪೊಲೀಸರು ಶವ ಹೊರತೆಗೆದಿದ್ದಾರೆ.
ಶಶಿಕುಮಾರ್ ಸೇರಿ ಐವರು ಸ್ನೇಹಿತರು ವಾರಾಂತ್ಯದ ಕಾರಣ ಬೆಂಗಳೂರಿನಿಂದ ಹೊಗೇನಕಲ್ ನೋಡಲು ಬಂದಿದ್ದಾರೆ. ಈ ವೇಳೆ ಜಲಪಾತ ನೋಡಿ, ಹೊಳೆಯಲ್ಲಿ ಆಡಲು ನೀರಿಗೆ ಇಳಿದಿದ್ದಾರೆ. ಈ ವೇಳೆ ಶಶಿಕುಮಾರ್ ಅವರು ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ. ಮಾರಿಕೋಟ ಜಲಪಾತದ ಬಳಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಸ್ಥಳಕ್ಕೆ ತೆರಳಿ ನುರಿತ ಈಜುಗಾರರಿಂದ ಶೋಧ ನಡೆಸಿ, ಶವ ಮೇಲೆತ್ತಿದ್ದಾರೆ. ಘಟನೆಯಲ್ಲಿ ಮಿಕ್ಕ ನಾಲ್ವರು ಸುರಕ್ಷಿತರಾಗಿದ್ದಾರೆ. ಪ್ರಕರಣ ದಾಖಲಾಗಿದೆ.