ತಾಯಿಯ ಅರಸಿ 26 ವರ್ಷ ಕಳೆದು ತವರಿಗೆ ಮರಳಿದ ಯುವಕ!

KannadaprabhaNewsNetwork |  
Published : Jun 12, 2026, 02:45 AM IST
ಮರಳಿ ಬಂದ | Kannada Prabha

ಸಾರಾಂಶ

ಹಿಂದೂ ಧರ್ಮದಲ್ಲಿ ಹುಟ್ಟಿ, ಹುಟ್ಟೂರು ಬಿಟ್ಟು ತೆರಳಿದ 26 ವರ್ಷಗಳ ಬಳಿಕ ಅಮ್ಮನನ್ನು ಕಾಣಲು ಮರಳಿದ ವ್ಯಕ್ತಿ ಮುಸ್ಲಿಂ ಧರ್ಮದ ವ್ಯಕ್ತಿಯಾಗಿ ಬಂದಿರುವುದು ಧರ್ಮಸ್ಥಳ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.

ಬೆಳ್ತಂಗಡಿ: ಹಿಂದೂ ಧರ್ಮದಲ್ಲಿ ಹುಟ್ಟಿ, ಹುಟ್ಟೂರು ಬಿಟ್ಟು ತೆರಳಿದ 26 ವರ್ಷಗಳ ಬಳಿಕ ಅಮ್ಮನನ್ನು ಕಾಣಲು ಮರಳಿದ ವ್ಯಕ್ತಿ ಮುಸ್ಲಿಂ ಧರ್ಮದ ವ್ಯಕ್ತಿಯಾಗಿ ಬಂದಿರುವುದು ಧರ್ಮಸ್ಥಳ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.

12 ವರುಷದ ಬಾಲಕ ಸತೀಶ್ ಎಂಬಾತ 26 ವರ್ಷಗಳ ಹಿಂದೆ ಅಂದರೆ 2000 ಇಸವಿಯ ಲಕ್ಷದೀಪೋತ್ಸವ ಸಮಯದಲ್ಲಿ ಸರ್ಕಸ್ ಕಂಪನಿಯೊಂದಿಗೆ ಕೆಲಸಕ್ಕೆಂದು ಹೋದಾತ ಜೂ. 9 ರಂದು ತನ್ನ ಹುಟ್ಟೂರಿಗೆ ಆಗಮಿಸಿದ್ದಾನೆ. ಈತ ಧರ್ಮಸ್ಥಳ ಗ್ರಾಮದ ಅಶೋಕ ನಗರದ ಶಿವಪಾರ್ವತಿ ನಿಲಯದ ಕುಂಞ-ಅಕ್ಕು ದಂಪತಿಯ ಪ್ರಥಮ ಪುತ್ರ.ಮಹಾರಾಷ್ಟ್ರದ ನಾಗಪುರದಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮುಗಿಸಿ, ವಾಸವಿದ್ದ ರೂಮ್‌ನ ಅಸುಪಾಸಿನಲ್ಲಿ ಸುತ್ತಾಡಿಕೊಂಡು ಬಂದತಾನಿಗೆ ತನ್ನ ಬಾಲ್ಯ ದಿನಗಳ ಮರುಕಳಿಸಿದವು. ತಾನು ಕಲಿತ ಎಸ್‌ಡಿಎಂ ಶಾಲೆ, ಆಟದ ಮೈದಾನ, ಬೆಳೆದ ಊರು ನೆನೆಪಿಗೆ ಬಂದು, ತನ್ನ ತಾಯಿಯನ್ನು ಹುಡುಕಿಕೊಂಡು ಧರ್ಮಸ್ಥಳ ಗ್ರಾಮ ಪಂಚಾಯಿತಿ ಕೆಳಭಾಗದಲ್ಲಿರುವ ಅಂಗಡಿಯೊಂದಕ್ಕೆ ಬಂದ ಸತೀಶ್ ತಾನು ಬಾಲ್ಯದಲ್ಲಿ ಈ ಊರಿನಲ್ಲಿ ಬೆಳೆದಿದ್ದು, ನಾನು 26 ವರ್ಷದ ಹಿಂದೆ ಊರು ಬಿಟ್ಟು ಹೋಗಿದ್ದೆ, ತನ್ನ ತಂದೆ-ತಾಯಿ, ತಮ್ಮಂದಿರ ಹೆಸರು ಹೇಳುತ್ತಿದ್ದಂತೆ ಅಂಗಡಿಯ ಮಾಲಿಕ ಯತೀಶ್ ಯಕ್ಷ ಎಂಬವರು ಆತನ ಕುಟುಂಬದವರಿಗೆ ವಿಷಯ ತಿಳಿಸಿದ್ದಾರೆ.ಲಕ್ಷ ದೀಪೋತ್ಸವ ಸಮಯ ಸರ್ಕಸ್ ಕಂಪನಿಯೊಂದಿಗೆ ಅಶೋಕ ನಗರದ 4 ಮಂದಿ ಕೆಲಸಕ್ಕೆಂದು ಹೋಗಿದ್ದರು. ಸುಬ್ರಹ್ಮಣ್ಯ, ಸುಳ್ಯ, ಭದ್ರಾವತಿಯಲ್ಲಿ ಕೆಲಸ ಮಾಡಿದ್ದರು ಬಳಿಕ ಕಂಪನಿಯು ಮುಂಬೈಗೆ ಹೋಗುವುದಾಗಿ ತಿಳಿಸಿದಾಗ ಮೂವರು ಮುಂಬೈಗೆ ಹೋಗದೆ ಮರಳಿ ಊರಿಗೆ ಬಂದಿದ್ದರು. ಆದರೆ ಸತೀಶ್ ಮಾತ್ರ ತಾನು ಬರುವುದಿಲ್ಲ ನೀವು ಹೋಗಿ ಎಂದು ಮಹಾರಾಷ್ಟ್ರದಲ್ಲಿ ಮದುವೆ ಹಾಲ್, ಡೆಕೋರೇಶನ್, ಚಾಲಕ, ಹೋಟೆಲ್‌ಗಳಲ್ಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡ ಸತೀಶ ಸಲೀಂ ಅಬ್ದುಲ್ ಅನ್ಸಾರಿಯಾಗಿ (38) ಬದಲಾಗಿ ಹೊಸ ಜೀವನ ನಡೆಸತೊಡಗಿದ.

ನಾಗ್ಪುರ ಜಿಲ್ಲೆಯ ಕಲ್ಮೇಶ್ವರದ ದಹೆಂಗಾವ್‌ನಲ್ಲಿ ಬಾಡಿಗೆ ಮನೆಯೊಂದರಲ್ಲಿ ಪತ್ನಿ ತಾಲೀಮಾ ಅವರೊಂದಿಗೆ ಸಂಸಾರ ನಡೆಸುತ್ತಿರುವ ಅವರಿಗೆ ಪುತ್ರಿ ಖುಷಿ (14) ಹಾಗೂ ಪುತ್ರ ಅಝಂ(9 ) ಇದ್ದು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ.

2015ರಿಂದ ದಹೆಂಗಾವ್‌ನ ಶರ್ಮ ಡಾಬಾದ ವ್ಯವಸ್ಥಾಪಕರಾಗಿ ವೃತ್ತಿ ಜೀವನ ನಡೆಸುತ್ತಿದ್ದಾರೆ. ಬದುಕು ಕಟ್ಟಿಕೊಂಡ ಸತೀಶ್ ಯಾನೆ ಸಲೀಂ ಅನ್ಸಾರಿ ದಹೆಂಗಾವ್‌ನಿಂದ ತನ್ನ ಸಹೋದ್ಯೋಗಿ ರಮೇಶ್‌ರೊಂದಿಗೆ 1258 ಕಿ.ಮೀ.ಕ್ರಮಿಸಿ ಹುಟ್ಟೂರಿಗೆ ಮರಳಿ ಬಂದಿದ್ದಾರೆ. 26 ವರ್ಷದ ಬಳಿಕ ಹುಟ್ಟೂರಿಗೆ ಮರಳಿ ಬಂದ ಸತೀಶ್ ಅವರನ್ನು ನೋಡಲು ತನ್ನ ಕುಟುಂಬದವರು, ಸಾಲು ಸಾಲು ಹಿತೈಷಿಗಳು ಬಂದು ಅವರನ್ನು ತಬ್ಬಿಕೊಂಡು ಆನಂದ ಭಾಷ್ಪ ಸುರಿಸಿದರು.

ಹರಕೆ ಕಟ್ಟಿಕೊಂಡಿದ್ದೆ: ಮಗ ಮರಳಿ ಬರಲು ಹೆತ್ತವ್ವ ಅಕ್ಕು ಧರ್ಮಸ್ಥಳ, ಕಟೀಲು, ಪಣೋಲಿಬೈಲು ಮೊದಲಾದ ಕ್ಷೇತ್ರಕ್ಕೆ ಹರಕೆ ಕಟ್ಟಿಕೊಂಡಿದ್ದರು. ಇತ್ತೀಚೆಗೆ ತನ್ನ ಮಕ್ಕಳಾದ ಹರೀಶ್ ಮತ್ತು ನಾಗೇಶರ ಬಳಿ ನಾನು ಸಾವನ್ನಪ್ಪುವ ಮೊದಲು ನನಗೆ ನನ್ನ ಹಿರಿಮಗ ಸತೀಶನನ್ನು ನೋಡಬೇಕು ಎಂದು ತಾಯಿ ಹೇಳಿದ್ದರು. ಭಕ್ತಿಯ ಪ್ರಾರ್ಥನೆಯೋ, ದೈವೇಚ್ಛೆಯೋ 26 ವರ್ಷದ ಬಳಿಕ ತಾಯಿ ಮಗ ಒಂದಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಲ್ಲಿ ಶಿಸ್ತು, ಕೌಶಲ್ಯ ರೂಪಿಸುವ ಸೈನಿಕ ಶಾಲೆ: ಅರ್ಲೆಕರ್‌
ಕಾಪು-ಲೋಕ ಕಲ್ಯಾಣ ಮೇಳ : 11 ಮಂದಿಗೆ ಸಾಲ ವಿತರಣೆ