ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ

KannadaprabhaNewsNetwork | Published : Apr 1, 2024 12:45 AM

ಸಾರಾಂಶ

ಕ್ಷುಲ್ಲಕ ಕಾರಣಕ್ಕೆ ಸಹೋದರರಿಬ್ಬರು ಯುವಕನೋರ್ವನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಾಲೂಕಿನ ಹಿರೇಅಣಜಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ಬ್ಯಾಡಗಿ: ಕ್ಷುಲ್ಲಕ ಕಾರಣಕ್ಕೆ ಸಹೋದರರಿಬ್ಬರು ಯುವಕನೋರ್ವನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಾಲೂಕಿನ ಹಿರೇಅಣಜಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ಆರೋಪಿಗಳನ್ನು ಅದೇ ಗ್ರಾಮದ ಈರಪ್ಪ ನಾಗಪ್ಪ ಬೆಲವಂತನಕೊಪ್ಪ, ಜಗದೀಶ ನಾಗಪ್ಪ ಬೆಲವಂತನಕೊಪ್ಪ ಎಂದು ಗುರುತಿಸಲಾಗಿದೆ. ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಬಸವರಾಜ ಮಲ್ಲೇಶಪ್ಪ ಪೂಜಾರ ಎಂಬಾತನನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ತರಲಾಗಿತ್ತು. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ದೇವಸ್ಥಾನದ ಪೂಜೆ ಜಗಳಕ್ಕೆ ಕಾರಣ: ಗ್ರಾಮದ ದೇವಸ್ಥಾನಗಳಲ್ಲಿ ಮಲ್ಲೇಶಪ್ಪ ರುದ್ರಪ್ಪ ಪೂಜಾರ ಕುಟುಂಬವು ಪೂಜೆ ಮಾಡಿಕೊಂಡು ಜೀವನ ನಡೆಸುತ್ತಿತ್ತು. ಆರೋಪಿ ಈರಪ್ಪ ಬೆಲವಂತನಕೊಪ್ಪ ಕುಡಿದ ಮತ್ತಿನಲ್ಲಿ ನೀನು ದೇವರ ಪೂಜೆ ಸರಿಯಾಗಿ ಮಾಡುತ್ತಿಲ್ಲ ಎಂಬುದಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಿಮ್ಮನ್ನು ಜೀವ ಸಹಿತ ಉಳಿಸುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದಾನೆ. ಬಳಿಕ ಪೂಜಾರ ಮಲ್ಲೇಶಪ್ಪ ತನ್ನ ಪುತ್ರ ಬಸವರಾಜನೊಂದಿಗೆ ತೆರಳಿ ನಮ್ಮ ಮೇಲೆ ಸುಳ್ಳು ನಿಂದನೆ ಏಕೆ ಎಂದು ಪ್ರಶ್ನಿಸಿದ್ದಾರೆ. ನಾವು ಪೂಜಾರಿಕೆ ಮಾಡಿಕೊಂಡು ಬದುಕುತ್ತಿದ್ದೇವೆ, ನಮ್ಮನ್ನು ಬದುಕಲು ಬಿಟ್ಟುಬಿಡಿ ಎಂದು ಪೂಜಾರ ಮಲ್ಲೇಶಪ್ಪ ಹಾಗೂ ಪುತ್ರ ಬಸವರಾಜ ಅಂಗಲಾಚಿದ್ದಾರೆ. ಆದರೂ ಕೈಬಿಡದ ಈರ್ವರು ಆರೋಪಿಗಳು ಬಸವರಾಜನ ಕೈಗಳನ್ನು ಬೆನ್ನ ಹಿಂದೆ ಕಟ್ಟಿ ಮಚ್ಚಿನಿಂದ ತಲೆಯ ಕೆಳಭಾಗಕ್ಕೆ ಹೊಡೆದಿದ್ದಾರೆ.

ಇಂತಹುದೇ ಕ್ಷುಲ್ಲಕ ಕಾರಣಗಳಿಗೆ ಈರಪ್ಪ ಬೆಲವಂತನಕೊಪ್ಪನ ವಿರುದ್ಧ ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಬೇರೆ ಬೇರೆ ವ್ಯಕ್ತಿಗಳು 3 ದೂರುಗಳನ್ನು ದಾಖಲಿಸಿದ್ದು, ಜಾಮೀನಿನ ಮೇಲೆ ಹೊರ ಬಂದಿದ್ದಾಗಿ ತಿಳಿದು ಬಂದಿದೆ.

ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸಿಪಿಐ ಮಹಾಂತೇಶ ಲಂಬಿ, ಪಿಎಸ್‌ಐ ಭಾರತಿ ಕುರಿ ಸಿಬ್ಬಂದಿ ಪ್ರಮುಖ ಆರೋಪಿ ಈರಪ್ಪ ನಾಗಪ್ಪ ಬೆಲವಂತನಕೊಪ್ಪನನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಜಗದೀಶ ನಾಗಪ್ಪ ಬೆಲವಂತನಕೊಪ್ಪನಿಗಾಗಿ ಹುಡುಕಾಟ ನಡೆಸಿದ್ದಾರೆ. ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article