ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕಲಬುರುಗಿಯಲ್ಲಿ ಮಡಿವಾಳ ಸಮುದಾಯದ ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿರುವುದನ್ನು ಖಂಡಿಸಿ ವಿವಿಧ ಸಂಘ- ಸಂಸ್ಥೆಗಳ ಮುಖಂಡರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದವು.ಪಟ್ಟಣದ ತಾಲೂಕು ಕಚೇರಿ ಎದುರು ಮಡಿವಾಳ ಮಾಚಿ ದೇವರ ಟ್ರಸ್ಟ್, ಹಿಂದೂ ಜಾಗರಣಾ ವೇದಿಕೆ ಸೇರಿ ವಿವಿಧ ಸಂಘ- ಸಂಸ್ಥೆಗಳ ಮುಖಂಡರು ಸೇರಿ ಘಟನೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಲಬುರುಗಿಯ ದೇವನೂರು ಗ್ರಾಮದ ನಿವಾಸಿ ಅರ್ಜುನಪ್ಪ ಹನುಮಂತಪ್ಪ ಮಡಿವಾಳ ಎಂಬ ಯುವಕನಿಂದ 10 ಲಕ್ಷ ರು. ಹಣ ಬೇಡಿಕೆ ಇಟ್ಟು, ಬೆತ್ತಲೆಗೊಳಸಿ, ಮರ್ಮಾಂಗಕ್ಕೆ ಕರೆಂಟ್ ಶಾಕ್ ನೀಡಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಮಾಡಿರುವುದನ್ನು ಖಂಡಿಸಿದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.ದೇವನೂರು ಗ್ರಾಮದ ಮಡಿವಾಳ ಸಮಾಜದ ಯುವಕ ಅರ್ಜುನಪ್ಪ ಅವರು, ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ಮಾಡಿಕೊಂಡು ತನ್ನ ಜೀವನವನ್ನು ನಡೆಸುತ್ತಿದ್ದು, ಮೇ 4ರಂದು ಚಿತ್ತಾಪುರದ ರಮೇಶ ದೊಡ್ಡಮನಿ ಎನ್ನುವ ವ್ಯಕ್ತಿ ನನಗೆ ಒಂದು ಸೆಕೆಂಡ್ ಕಾರು ಬೇಕು ಎಂದು ಹೇಳಿ ಆತನನ್ನು ಕರೆಸಿಕೊಂಡು ಮನೆಯಲ್ಲಿ ಮತ್ತಿಬ್ಬರನ್ನು ಕೂಡಿ ಹಾಕಿ ಸುಮಾರು 10 ರಿಂದ 12 ಜನ ಮುಸ್ಲಿಂ ರೌಡಿಗಳು ಉದ್ದೇಶ ಪೂರ್ವಕವಾಗಿ ಅರ್ಜುನಪ್ಪ ಮತ್ತು ಸಂಗಡಿಗರನ್ನು ಬೆತ್ತಲೆಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರ್ಜುನಪ್ಪನ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ನೀಡಿ, ಗೋಮಾಂಸವನ್ನು ಬಲವಂತವಾಗಿ ಸೇವೆನೆ ಮಾಡಿಸಿದ್ದಾರೆ. ಈ ತರಹದ ಹೀನ ಕೃತ್ಯವನ್ನು ಎಸಗುವ ಮೂಲಕ ತಾಲಿಬಾನ್ ಉಗ್ರಗಾಮಿಗಳಂತೆ ವರ್ತಿಸಿದ್ದಾರೆ ಎಂದು ಕಿಡಿಕಾರಿದರು.ಇಂತಹ ಹೀನ ಕೃತ್ಯ ನಡೆಸಿ ಯುವಕರ ಮೇಲೆ ದೌರ್ಜನ್ಯವೆಸಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಮಾನಗೊಳಿಸಿದ್ದಾರೆ. ಇಷ್ಟಾದರೂ ಸಹ ಪೊಲೀಸ್ ಇಲಾಖೆಯಾಗಲಿ, ರಾಜ್ಯ ಸರ್ಕಾರವಾಗಲಿ ಯಾವುದೇ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿದರು.
ಮೂಲಭೂತವಾದಿಗಳಾದ ಅಲ್ಪಾ ಸಂಖ್ಯಾಂತರ ತುಷ್ಟೀಕರಣಗೊಳಿಸಲು ಸರ್ಕಾರ ಯಾವುದೇ ಕಾನೂನು ಕ್ರಮ ವಹಿಸದಿರುವುದು ಬೇಸರದ ಸಂಗತಿ. ಕೂಡಲೇ ಇಂತಹ ನೀಚರನ್ನು ಬಂಧಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಉಪ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯರಾದ ಎಸ್.ಪ್ರಕಾಶ್, ಶಿವು ಗಂಜಾಂ, ಶ್ರೀನಿವಾಸ್, ಕೃಷ್ಣಪ್ಪ, ವಿನುತಾ, ಎಸ್.ಟಿ.ರಾಜು, ಹಿಂದೂ ಜಾಗರಣೆ ವೇದಿಕೆಯ ಚಂದನ್, ಕರವೇ ಶಂಕರ್, ಉಗಮ ಟ್ರಸ್ಟ್‌ನ ಪ್ರಿಯಾ ರಮೇಶ್, ಬಿಜೆಪಿಯ ಸುಧಾಕರ್, ಉಮೇಶ್ ಕುಮಾರ್, ರಾಮಕೃಷ್ಣ, ಬಾಲರಾಜು ಸೇರಿ ಮಡಿವಾಳ ಮಾಚೇ ದೇವರ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು ಇದ್ದರು.