ದುಶ್ಚಟಗಳ ದಾಸನಾದ ಯುವಕ ದೇಶಕ್ಕೆ ಭಾರ: ಸುರೇಶ ವಗ್ಗನವರ

KannadaprabhaNewsNetwork |  
Published : Jun 01, 2025, 05:32 AM IST
ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ಬ್ಯಾಡಗಿಯಲ್ಲಿ ಜರುಗಿದ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಕಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ ಉದ್ಘಾಟಿಸಿದರು. | Kannada Prabha

ಸಾರಾಂಶ

ಬ್ಯಾಡಗಿಯಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ಜರುಗಿದ ಕಾನೂನು ಸಾಕ್ಷರತಾ ಕಾರ್ಯಕ್ರಮ ನಡೆಯಿತು. ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿರುವ ಕುರಿತು ಗಣ್ಯರು ಕಳವಳ ವ್ಯಕ್ತಪಡಿಸಿದರು.

ಬ್ಯಾಡಗಿ: ದುಶ್ಚಟಗಳಿಗೆ ದಾಸನಾದ ಯುವಕ ಕುಟುಂಬಕ್ಕಾಗಿ, ಸಮಾಜಕ್ಕಾಗಿ ಏನನ್ನೂ ಮಾಡದಿದ್ದರೆ ಆತ ಬದುಕಿದ್ದೂ ಸತ್ತಂತೆ. ಅಷ್ಟೇ ಏಕೆ? ಮುಂದೊಂದು ದಿವಸ ಆತ ದೇಶಕ್ಕೂ ಭಾರವಾಗಬಲ್ಲ ಎಂದು ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ಕಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ ಹೇಳಿದರು.

ಪಟ್ಟಣದ ಶ್ರೀ ಮಹಾಂತೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ, ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ಜರುಗಿದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶ ಯುವಕರಿಂದ ನಿರೀಕ್ಷೆಗಳನ್ನಿಟ್ಟುಕೊಂಡಿದೆ. ಸರಿಸುಮಾರು ಶೇ. 45ರಷ್ಟು ಯುವಕರನ್ನು ಹೊಂದಿರುವ ಭಾರತ ದೇಶವು ಅವರಿಂದ ಬಹಳಷ್ಟು ನಿರೀಕ್ಷೆಯನ್ನಿಟ್ಟುಕೊಂಡಿದೆ. ಆದರೆ ಇತ್ತೀಚಿಗೆ ಕೆಲವು ವಿದ್ಯಮಾನಗಳನ್ನು ಅವಲೋಕಿಸಿದರೆ ಬಹುಶಃ ಇಟ್ಟುಕೊಂಡಿರುವಂತಹ ನಿರೀಕ್ಷೆಗಳು ಈಡೇರುವುದಿಲ್ಲವೇನೋ ಎಂಬ ಅನುಮಾನಗಳು ಕಾಡುತ್ತಿವೆ. ಇದಕ್ಕೆ ಪ್ರಮುಖ ಕಾರಣ ಅವರು ರೂಢಿಸಿಕೊಳ್ಳುತ್ತಿರುವ ದುಶ್ಚಟಗಳು. ಅವರನ್ನು ಏನನ್ನೂ ಮಾಡದಂತೆ, ನಿರ್ಜೀವ ವಸ್ತುಗಳಂತೆ ಮಾಡುತ್ತಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜು ಶಿಡೇನೂರ ಮಾತನಾಡಿ, ದುಶ್ಚಟಗಳ ಪರಿಣಾಮವು ನಗರಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು, ಕೃಷಿ ಚಟುವಟಿಕೆ ನಡೆಸಿ ದೇಶದ ಬೆನ್ನುಲುಬಾಗಿ ನಿಲ್ಲಬೇಕಾಗಿದ್ದ ಯುವ ರೈತರು ದುಶ್ಚಟಗಳ ದಾಸರಾಗಿ, ಸಾಲ ಮಾಡಿ, ವಯೋವೃದ್ಧ ತಂದೆ-ತಾಯಿ ಸೇರಿದಂತೆ ಕುಟುಂಬವನ್ನೇ ಬಿಟ್ಟು, ಹಳ್ಳಿಗಳನ್ನು ತೊರೆಯುತ್ತಿರುವುದು ಒಂದು ಭಾಗವಾದರೆ, ಇನ್ನೊಂದು ಭಾಗದಲ್ಲಿ ದುಶ್ಚಟಗಳನ್ನು ಮಾಡಲೆಂದೇ ದುಡಿಯುವ ನೆಪದಲ್ಲಿ ಯುವಕರು ನಗರಗಳತ್ತ ವಲಸೆ ಹೋಗುತ್ತಿರುವವರ ಸಂಖ್ಯೆ ಸಾಕಷ್ಟಿದೆ. ಇವೆರಡೂ ಪ್ರಕ್ರಿಯೆಗಳು ಬಹುಶಃ ದೇಶಕ್ಕೆ ಅತ್ಯಂತ ಮಾರವಾಗುವುದರಲ್ಲಿ ಎರಡು ಮಾತಿಲ್ಲ ಎಂದರು.

ತಂಬಾಕಿನಿಂದ ದೂರವಿರಿ: ತಾಲೂಕು ಆರೋಗ್ಯಾಧಿಕಾರಿ ಡಾ. ಕಾಂತೇಶ್ ಭಜಂತ್ರಿ ಮಾತನಾಡಿ, ತಂಬಾಕು ನೋಡುವುದಕ್ಕೆ ಅತ್ಯಂತ ಸಣ್ಣ ವಸ್ತು, ಆದರೆ ಒಬ್ಬ ವ್ಯಕ್ತಿಯ ಆರೋಗ್ಯಕ್ಕೆ ಮತ್ತು ಜೀವಕ್ಕೆ ಕಂಟಕಪ್ರಾಯವಾದಂತಹ ಎಲ್ಲ ಹಾನಿಕಾರಕ ಅಂಶಗಳು ಅದರಲ್ಲಿವೆ. ವಿದ್ಯಾರ್ಥಿಗಳು, ಯುವಕರು ಮೊದಲು ತಂಬಾಕಿನಿಂದ ಮತ್ತು ಅದರಿಂದ ಸಿದ್ಧವಾಗುವ ಸಿಗರೇಟು, ಗುಟಕಾ, ಇನ್ನಿತರ ವಸ್ತುಳಿಂದ ದೂರವಿರುವಂತೆ ಸಲಹೆ ನೀಡಿದರು.

ಸಹಾಯಕ ಸರ್ಕಾರಿ ಅಭಿಯೋಜಕ ರಾಜಣ್ಣ ನ್ಯಾಮತಿ, ಮಹಾಂತೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ಕಾರ್ಯದರ್ಶಿ ಸಂಜೀವ ಅಂಗಡಿ, ಪ್ರಾಚಾರ್ಯ ಮಾರುತಿ ಗಣಜೂರು, ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಸಂತೋಷ್ ಹಾಲುಂಡಿ, ಆರೋಗ್ಯ ಇಲಾಖೆ ಹಿರಿಯ ಮೇಲ್ವಿಚಾರಕ ಪ್ರಶಾಂತ ನವಲೆ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವಿ. ಮಮತಾ, ನ್ಯಾಯವಾದಿಗಳ ಸಂಘದ ಸಹ ಕಾರ್ಯದರ್ಶಿ ಮಂಜುನಾಥ ಕುಮ್ಮೂರ, ನ್ಯಾಯವಾದಿಗಳಾದ ಶಂಕರ ಬಾರ್ಕಿ, ಎಂ.ಜೆ. ಮುಲ್ಲಾ, ಭಾರತಿ ಕುಲ್ಕರ್ಣಿ, ಎನ್.ಎಸ್. ಬಟ್ಟಲಕಟ್ಟಿ, ಎಸ್.ಎಸ್. ಕೊಣ್ಣೂರ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಮಹಾಂತೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?