ದೇಶ ಸೇವೆಗಾಗಿ ಸೇನೆ ಸೇರುವವರಲ್ಲಿ ರಾಯಚೂರು ಭಾಗದವರು ಅದರಲ್ಲಿಯೂ ಮಹಿಳೆಯರು ಇರುವುದು ಅಪರೂಪವಾಗಿದೆ. ಅಂತಹ ಸೇವೆಗೆ ಸಿದ್ಧಗೊಂಡಿರುವ ಶ್ರೀದೇವಿ ಈ ಸಾಧನೆ ಮಾಡಿದ ಲಿಂಗಸಗೂರು ತಾಲೂಕಿನ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ.
ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುಅಪ್ಪ-ಅಮ್ಮ, ಪುಟ್ಟ ಮನೆ, ಎರಡು ಎಕರೆ ಹೊಲ, ನಾಲ್ವರು ಮಕ್ಕಳು, ಕೃಷಿ ಕೂಲಿ ಕಾಯಕ, ಬಡತನದಲ್ಲಿಯೇ ಹುಟ್ಟಿ ಬೆಳೆದು ಕಷ್ಟಪಟ್ಟು ಓದಿ ಇದೀಗ ದೇಶ ಸೇವೆ ಮಾಡಲು ಹೊರಟಿರುವ ಯುವತಿಯ ಸಾಧನೆಯ ಹಾದಿ ಇತರರಿಗೆ ಮಾದರಿ.ಹೌದು, ಇದು ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ನರಕಲದಿನ್ನಿ ಗ್ರಾಮದ ಯುವತಿ ಶ್ರೀದೇವಿ ಫಕೀರಪ್ಪ ಅವರ ಯಶೋಗಾಥೆ. ಕಳೆದ ವರ್ಷ ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ-ಜಿಡಿ) ಕೈಗೊಂಡ ದೈಹಿಕ ಹಾಗೂ ಲಿಖಿತ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು, ಇದೀಗ ಪಶ್ಚಿಮ ಬಂಗಾಳದ ಗಡಿ ಭದ್ರತಾ ಪಡೆ (ಬಿಎಸ್ಎಫ್- ಪ್ಯಾರಾ ಮಿಲಿಟರಿ)ಗೆ ಆಯ್ಕೆಯಾಗಿದ್ದು, ಈ ಸಾಧನೆ ಮಾಡಿದ ಲಿಂಗಸುಗೂರು ತಾಲೂಕಿನ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.ಶ್ರಮದ ಫಲ: ನರಕಲದಿನ್ನಿ ಗ್ರಾಮದ ಫಕೀರಪ್ಪ-ಲಕ್ಷ್ಮೀಬಾಯಿ ದಂಪತಿಯ ನಾಲ್ವರು ಮಕ್ಕಳಲ್ಲಿ ಶ್ರೀದೇವಿ ಕೊನೆ ಮಗಳಾಗಿದ್ದು, ಮೂರು ಜನ ಹೆಣ್ಣು ಮತ್ತು ಒಬ್ಬ ಗಂಡು ಮಗುವನ್ನು ಹೊಂದಿರುವ ದಂಪತಿ ಇರುವ ಎರಡು ಎಕರೆಯಲ್ಲಿಯೇ ಮಕ್ಕಳನ್ನು ಓದಿಸಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿಯೇ ಪೂರ್ಣಗೊಳಿಸಿದ ಶ್ರೀದೇವಿ, ಪ್ರೌಢ, ಪದವಿ ಪೂರ್ವ ಮತ್ತು ಪದವಿ (ಬಿಎಸ್ಸಿ) ಶಿಕ್ಷಣವನ್ನು ಲಿಂಗಸುಗೂರು ಪಟ್ಟಣದಲ್ಲಿ ಪಡೆದಿದ್ದಾಳೆ. ನಂತರ ಹುಬ್ಬಳ್ಳಿಯಲ್ಲಿ ಬಿ.ಎಡ್ ಮುಗಿಸಿ, ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ (ಗಣಿತ)ದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪದವಿ ವಿದ್ಯಾಭ್ಯಾಸದ ಸಮಯದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ತೊಡಗಿದ್ದ ಶ್ರೀದೇವಿ ಅವರು, ಕಳೆದ ಫೆ.22 ರಂದು ಕಲಬುರಗಿಯಲ್ಲಿ ನಡೆದ ಎಸ್‌ಎಸ್‌ಸಿ-ಜಿಡಿ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆದು ಪಾಸಾಗಿದ್ದು, ನ.7 ರಂದು ಬೆಳಗಾವಿಯ ಹಾಲಬಾವಿಯಲ್ಲಿರುವ ಐಟಿ-ಬಿಟಿ ಕ್ಯಾಂಪಸ್ ನಲ್ಲಿ ದೈಹಿಕ ಪರೀಕ್ಷೆಯನ್ನು ಎದರಿಸಿ ಅದರಲ್ಲಿಯೂ ಉತ್ತೀರ್ಣಗೊಮಂಡಿದ್ದಾಳೆ. ದಾಖಲೆಗಳ ಪರಿಶೀಲನೆ ನಂತರ ಪಶ್ಚಿಮ ಬಂಗಾಳದ ಗಡಿ ಭದ್ರತಾ ಪಡೆ (ಬಿಎಸ್ಎಫ್) ಪ್ಯಾರಾ ಮಿಲಿಟರಿ ಸೇವೆಗೆ ನೇಮಕಗೊಂಡಿದ್ದಾಳೆ. ಇದೇ ಜ.21 ರಂದು ತರಬೇತಿಗೆ ತೆರಳುತ್ತಿದ್ದಾರೆ.ದೇಶ ಸೇವೆ ಸಿದ್ಧಳಾದ ಮೊದಲ ಮಹಿಳೆ : ದೇಶ ಸೇವೆಗಾಗಿ ಸೇನೆ ಸೇರುವವರಲ್ಲಿ ರಾಯಚೂರು ಭಾಗದವರು ಅದರಲ್ಲಿಯೂ ಮಹಿಳೆಯರು ಇರುವುದು ಅಪರೂಪವಾಗಿದೆ. ಅಂತಹ ಸೇವೆಗೆ ಸಿದ್ಧಗೊಂಡಿರುವ ಶ್ರೀದೇವಿ ಈ ಸಾಧನೆ ಮಾಡಿದ ಲಿಂಗಸಗೂರು ತಾಲೂಕಿನ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ. ಬಿಎಸ್‌ಎಫ್ ಗೆ ಆಯ್ಕೆಯಾಗಿರುವ ಶ್ರೀದೇವಿಯ ಸಾಧನೆಗೆ ಇಡೀ ಗ್ರಾಮವಷ್ಟೇ ಅಲ್ಲ ತಾಲೂಕು, ಜಿಲ್ಲೆ ಜನರು ಹರ್ಷಗೊಳ್ಳುವಂತೆ ಮಾಡಿದೆ.ಬಡತನದಲ್ಲಿಯೇ ಬೆಳೆದ ನನಗೆ ತಂದೆ-ತಾಯಿ ಕೃಷಿಯನ್ನು ಮಾಡಿ ಓದಿಸಿದ್ದಾರೆ. ಪಾಲಕರ ಆಶೀರ್ವಾದ, ಅಕ್ಕ-ಅಣ್ಣನ ಪ್ರೋತ್ಸಾಹದಿಂದ ನಿರಂತರ ಅಭ್ಯಾಸ ಮಾಡಿ ಕನ್ನಡದಲ್ಲಿಯೇ ಎಸ್‌ಎಸ್‌ಸಿ ಜಿಡಿ ಪರೀಕ್ಷೆ ಎದುರಿಸಿ ಬಿಎಸ್‌ಎಫ್ ನೇಮಕಗೊಂಡಿರುವುದು ತುಂಬಾ ಸಂತೋಷ ತಂದಿದೆ ಎನ್ನುತ್ತಾರೆ ಸಾಧಕಿ ಶ್ರೀದೇವಿ ಫಕೀರಪ್ಪ.
ತಂಗಿ ಕಷ್ಟಪಟ್ಟು ಓದಿದ್ದಕ್ಕೆ ಫಲ ಸಿಕ್ಕಿದೆ. ಅದರಲ್ಲಿಯೂ ದೇಶ ಸೇವೆ ಮಾಡಲು ಹೋಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಶ್ರೀದೇವಿಯ ಸಾಧನೆ ಇಡೀ ಕುಟುಂಬದ ಘನತೆ-ಗೌರವವನ್ನು ಹೆಚ್ಚಿಸಿದೆ ಎಂದು ಶ್ರೀದೇವಿ ಅಕ್ಕ ಬಸಮ್ಮ ನುಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.