ಉಡುಪಿಯ ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದ ಸುಧಾಕರ ಪೂಜಾರಿ ಅವರ ಪುತ್ರಿ ಚೈತ್ರಾ ಅವರೇ ಈ ನತದೃಷ್ಟ ಯುವತಿ. ರಸ್ತೆ ಅಪಘಾತದಿಂದಾದ ಗಾಯದ ತೀವ್ರತೆ ಅಂದಾಜಿಸದೆ ತಪ್ಪಾಗಿ ಚಿಕಿತ್ಸೆ ನೀಡಿದ ವೈದ್ಯರಿಂದಾಗಿ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ.
ಸಂದೀಪ್ ವಾಗ್ಲೆ ಕನ್ನಡಪ್ರಭ ವಾರ್ತೆ ಮಂಗಳೂರು ಸೇನೆ ಸೇರುವ ಅತ್ಯಾಸೆಯಲ್ಲಿದ್ದು, ಅದಕ್ಕಾಗಿ ನಿರಂತರ ತರಬೇತಿಯನ್ನೂ ಪಡೆಯುತ್ತಿದ್ದ ಉಡುಪಿಯ ಯುವತಿಯೊಬ್ಬರು ವೈದ್ಯರ ಲೋಪದಿಂದ ಅಂಗ ವೈಕಲ್ಯಕ್ಕೆ ಒಳಗಾಗಿ ಸೇನೆ ಸೇರುವ ಅವಕಾಶದಿಂದ ಶಾಶ್ವತವಾಗಿ ವಂಚಿತರಾಗಿದ್ದಾರೆ. ಮಾತ್ರವಲ್ಲದೆ, ಈಗ ಶಸ್ತ್ರಚಿಕಿತ್ಸೆಗೆ ಹಣವಿಲ್ಲದೆ ಕೂಲಿ ಕೆಲಸ ಮಾಡಿಕೊಂಡಿರುವ ಆಕೆಯ ತಂದೆ- ತಾಯಿ ಕೈಚೆಲ್ಲಿ ಕೂತಿದ್ದಾರೆ. ಉಡುಪಿಯ ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದ ಸುಧಾಕರ ಪೂಜಾರಿ ಅವರ ಪುತ್ರಿ ಚೈತ್ರಾ ಅವರೇ ಈ ನತದೃಷ್ಟ ಯುವತಿ. ರಸ್ತೆ ಅಪಘಾತದಿಂದಾದ ಗಾಯದ ತೀವ್ರತೆ ಅಂದಾಜಿಸದೆ ತಪ್ಪಾಗಿ ಚಿಕಿತ್ಸೆ ನೀಡಿದ ವೈದ್ಯರಿಂದಾಗಿ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ. 2021ರ ನವೆಂಬರ್ 15ರಂದು ತಮ್ಮನ ಜತೆ ಚೈತ್ರಾ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ವಾಹನವೊಂದು ಡಿಕ್ಕಿಯಾಗಿ ಮೊಣಕಾಲಿಗೆ ಗಾಯವಾಗಿತ್ತು. ಮೊಣಕಾಲಿನ ಹಿಂದಿನ ಎಲುಬು ತುಂಡಾಗಿದ್ದು ಮಾತ್ರವಲ್ಲದೆ ಕಾಲಿನ ನರಕ್ಕೂ ತೀವ್ರ ಘಾಸಿಯಾಗಿತ್ತು. ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರದ ಪ್ರತಿಷ್ಠಿತ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿನ ವೈದ್ಯರು ಮೂಳೆ ಮುರಿತ, ನರಕ್ಕಾದ ಹಾನಿಯ ತೀವ್ರತೆಯನ್ನು ನಿರ್ಲಕ್ಷಿಸಿ ಶಸ್ತ್ರಚಿಕಿತ್ಸೆ ಮಾಡದೆ ಗಾಯಕ್ಕಷ್ಟೇ ಸ್ಟಿಚ್ ಹಾಕಿ 16 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದರು. ‘ಆದರೆ ಮೂರ್ನಾಲ್ಕು ತಿಂಗಳು ಕಳೆದ ಮೇಲೆ ನೋವು ಕಡಿಮೆಯಾಗದೆ ನಡೆಯಲೂ ಕಷ್ಟವಾಗಿ ಕಾಲು ಕಪ್ಪಾಗತೊಡಗಿತ್ತು. ಆದರೂ ವೈದ್ಯರು ಸರಿಯಾಗುತ್ತದೆ ಎನ್ನುತ್ತಲೇ ಇದ್ದರು. ನೋವು ನಿವಾರಕ ಮಾತ್ರೆಗಳನ್ನೇ ನೀಡುತ್ತಿದ್ದರು. ಕೊನೆಗೆ ಇದು ಸಾಧ್ಯವಿಲ್ಲ ಎಂದು ಉಡುಪಿ ಸಮೀಪದ ಇನ್ನೊಂದು ದೊಡ್ಡ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿದಾಗ ಮೊಣಕಾಲಿನ ಒಳಗಿನ ಎಲುಬು ತುಂಡಾಗಿರುವುದು ಗೊತ್ತಾಗಿದೆ. ಅಲ್ಲಿನ ವೈದ್ಯರು ಕೂಡಲೆ ಶಸ್ತ್ರಚಿಕಿತ್ಸೆ ನಡೆಸಿದರು. ಅದಾಗಿ ಆರೇಳು ತಿಂಗಳು ಔಷಧಿ ತೆಗೆದುಕೊಂಡರೂ ನೋವು ಕಡಿಮೆ ಆಗಲೇ ಇಲ್ಲ’ ಎಂದು ಚೈತ್ರಾ ಅವರ ತಮ್ಮ ಚೈತನ್ಯ ‘ಕನ್ನಡಪ್ರಭ’ದೊಂದಿಗೆ ಅಳಲು ತೋಡಿಕೊಂಡರು. ಶಸ್ತ್ರಚಿಕಿತ್ಸೆ ಬಳಿಕವೂ ನಡೆಯಲು ತೀವ್ರ ಕಷ್ಟವಾಗತೊಡಗಿದಾಗ ಕೊನೆ ಪ್ರಯತ್ನ ಎಂಬಂತೆ ಮಂಗಳೂರಿನ ಹೆಸರಾಂತ ಮೂಳೆತಜ್ಞರ ಬಳಿ ಆಗಮಿಸಿ ಪರೀಕ್ಷಿಸಿದಾಗ ಮೊಣಕಾಲಿನ ಒಳಗೆ ಲೋಹದಂತಹ ವಸ್ತು ಜತೆಗೆ ಮೂಳೆ ಚೂರು ಮತ್ತಿತರ ವಸ್ತುಗಳು ಇರುವುದು ಬೆಳಕಿಗೆ ಬಂದಿದೆ. ಅಲ್ಲದೆ ಕಾಲಿನ ನರಗಳಿಗೂ ತೀವ್ರ ಪೆಟ್ಟಾಗಿರುವುದು ತಿಳಿದುಬಂದಿದೆ. ಈ ಕಾರಣದಿಂದ ಚೈತ್ರಾ ಅವರ ಕಾಲಿನ ಮೂರು ಬೆರಳುಗಳು ಚಲನೆಯನ್ನು ನಿಲ್ಲಿಸಿದ್ದವು. ಮತ್ತೊಮ್ಮೆ ಶಸ್ತ್ರಚಿಕಿತ್ಸೆ ನಡೆಸಬೇಕಾದರೆ ಏನಿಲ್ಲವೆಂದರೂ 2.5 ಲಕ್ಷ ರು. ಖರ್ಚಾಗಲಿದೆ. ಅಪಘಾತ ನಡೆದ ಕೂಡಲೆ ಗಾಯದ ತೀವ್ರತೆಯನ್ನು ಅಂದಾಜಿಸಿ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಿರುತ್ತಿದ್ದರೆ ಗಾಯ ಇಷ್ಟು ಉಲ್ಭಣಿಸುತ್ತಿರಲಿಲ್ಲ. ಕೆಲವೇ ವಾರಗಳಲ್ಲಿ ಮರಳಿ ಆರೋಗ್ಯವಂತಳಾಗಬಹುದಿತ್ತು. ಆದರೆ ವೈದ್ಯರ ನಿರ್ಲಕ್ಷ್ಯದಿಂದಾಗಿ ಶಾಶ್ವತವಾಗಿ ಅಂಗವೈಕಲ್ಯ ಅನುಭವಿಸಬೇಕಾಗಿದೆ. ಇಂಥ ಕಷ್ಟಕ್ಕೆ ಯಾರನ್ನೂ ತಳ್ಳಬಾರದು ಎಂದು ಚೈತನ್ಯ ನೋವು ತೋಡಿಕೊಂಡರು. ಕೂಲಿ ಮಾಡಿ ಸಂಸಾರ ಬಂಡಿ: ಚೈತ್ರಾ ಅವರ ತಂದೆ ತಾಯಿ ಇಬ್ಬರೂ ಕೂಲಿ ಕಾರ್ಮಿಕರು. ಈಗಾಗಲೇ ಶಸ್ತ್ರಚಿಕಿತ್ಸೆ, ಆಸ್ಪತ್ರೆ ವಾಸ, ಔಷಧಿಗಾಗಿ ಸಾಕಷ್ಟು ಖರ್ಚು ಮಾಡಿದ್ದಾರೆ. ಇದೀಗ ಮಂಗಳೂರು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ಅಗತ್ಯವಾಗಿ ಬೇಕಾದ 2.5 ಲಕ್ಷ ರು. ಹೊಂದಿಸಲಾಗದೆ ಕಂಗಾಲಾಗಿದ್ದಾರೆ. ದಾನಿಗಳು ಚೈತ್ರಾ ಅವರ ತಮ್ಮ ಚೈತನ್ಯ (ದೂ. 7483909826) ಅವರನ್ನು ಸಂಪರ್ಕಿಸಬಹುದು. ಕಮರಿದ ಸೇನೆ ಸೇರುವ ಅತ್ಯಾಸೆ ಚೈತ್ರಾ ಅವರಿಗೆ ಚಿಕ್ಕಂದಿನಿಂದಲೂ ಸೇನೆ ಸೇರುವ ಅತ್ಯಾಸೆ ಇತ್ತು. ಅದಕ್ಕಾಗಿ ಬಿಎ ಪದವಿ ಮುಗಿದ ಬಳಿಕ ಪೂರಕ ತರಬೇತಿಯನ್ನೂ ಪಡೆದಿದ್ದಾರೆ. ಕುಂದಾಪುರದ ತೆಕ್ಕಟ್ಟೆಯಲ್ಲಿರುವ ತೆಕ್ಕಟ್ಟೆ ಫ್ರೆಂಡ್ಸ್ ವತಿಯಿಂದ ಆಯೋಜಿಸಲಾದ ಉಚಿತ ದೈಹಿಕ ತರಬೇತಿ ಶಿಬಿರಕ್ಕೆ ಸೇರಿದ್ದರು. ಮಾಜಿ ಸೈನಿಕ ರವಿಚಂದ್ರ ಶೆಟ್ಟಿ ಅವರಿಂದ ತರಬೇತಿ ಪಡೆಯುತ್ತಿದ್ದರು. ಮನೆಯಿಂದ ಶಿಬಿರ ತುಂಬ ದೂರವಿದ್ದರೂ ತರಬೇತಿ ತಪ್ಪಿಸುತ್ತಿರಲಿಲ್ಲ. ಆದರೆ ಈಗ ಅದೆಲ್ಲ ಕನಸುಗಳೂ ಭಗ್ನಗೊಂಡಿವೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.