ದೇವಸ್ಥಾನಕ್ಕೆ 3ನೇ ಹಂತದ ಹಣ ಬಿಡುಗಡೆ ಮಾಡಿ

KannadaprabhaNewsNetwork |  
Published : Oct 15, 2023, 12:45 AM IST

ಸಾರಾಂಶ

ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ದೇವಾಲಯಗಳ ಅಭಿವೃದ್ಧಿಗೆ ಮಂಜೂರಾದ ಹಣ ಕೂಡಲೇ ಬಿಡುಗಡೆ ಮಾಡುವಂತೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕಾರವಾರ

ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ದೇವಾಲಯಗಳ ಅಭಿವೃದ್ಧಿಗೆ ಮಂಜೂರಾದ ಹಣ ಕೂಡಲೇ ಬಿಡುಗಡೆ ಮಾಡುವಂತೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರ ಇರುವಾಗ ದೇವಾಲಯಗಳ ಅಭಿವೃದ್ಧಿಗೆ ಒಟ್ಟೂ ₹ 11 ಕೋಟಿ ಯೋಜನೆ ರೂಪಿಸಲಾಗಿತ್ತು. ಆ ಪ್ರಕಾರ ಮೊದಲ ಹಂತದಲ್ಲಿ ₹ 2 ಕೋಟಿ ಕ್ರಿಯಾಯೋಜನೆ ರೂಪಿಸಿ ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದು, ವಿವಿಧ, ದೇವಾಲಯಗಳಿಗೆ ನೀಡಲಾಗಿದೆ. ಎರಡನೇ ಹಂತದಲ್ಲಿ ₹ 4 ಕೋಟಿ ಬಿಡುಗಡೆಯಾಗಿ ದೇವಾಲಯಗಳಿಗೆ ಹಸ್ತಾಂತರಿಸಲಾಗಿದೆ ಎಂದರು ತಿಳಿಸಿದ್ದಾರೆ.

ಬಿಜೆಪಿ ಸರ್ಕಾರ ಇದ್ದಾಗ ಮೂರು ಹಂತದ ಅನುದಾನ ಮಂಜೂರಾತಿ ಆದೇಶ ಆಗಿತ್ತು. ಎರಡು ಹಂತದ ಹಣ ಬಿಡುಗಡೆಯೂ ಆಗಿತ್ತು. ಅದನ್ನು ಆಯಾ ದೇವಾಲಯಗಳಿಗೆ ಹಸ್ತಾಂತರಿಸಲಾಗಿದ್ದು, ಅಭಿವೃದ್ಧಿ ಕಾಮಗಾರಿಯೂ ನಡೆಯುತ್ತಿದೆ. ಅಷ್ಟರಲ್ಲಿ ವಿಧಾನಸಭೆ ಚುನಾವಣೆ ನಡೆದು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂತು. ಆದರೆ ಈ ಸರ್ಕಾರ ಮೂರನೇ ಹಂತದ ₹ 5 ಕೋಟಿ ಬಿಡುಗಡೆ ಮಾಡಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.ತಮ್ಮ ದೇವಾಲಯಗಳ ಅಭಿವೃದ್ಧಿಗೆ ಸರ್ಕಾರದಿಂದ ಹಣ ಬಿಡುಗಡೆಯಾಗಲಿದೆ ಎಂದು ಕೆಲವೆಡೆ ಕಟ್ಟಡ ನಿರ್ಮಾಣಕ್ಕೆ ಯೋಜಿಸಿದ್ದರು. ಸರ್ಕಾರದ ಹಣದ ನಿರೀಕ್ಷೆಯಲ್ಲಿ ಕೆಲವೆಡೆ ಪ್ರಾಥಮಿಕ ಕಾಮಗಾರಿಗಳನ್ನೂ ಆರಂಭಿಸಿದ್ದರು. ಆದರೆ ಈಗ ಹಣ ಬಿಡುಗಡೆಯಾಗದೆ ಇರುವುದಿಂದ ಆ ಎಲ್ಲ ದೇವಾಲಯಗಳ ಅಭಿವೃದ್ಧಿ ಕಾರ್ಯ ನನೆಗುದಿಗೆ ಬಿದ್ದಂತಾಗಿದೆ. ದೇವಾಲಯಗಳ ಆಡಳಿತ ಮಂಡಳಿಗೆ ತೀವ್ರ ನಿರಾಶೆಯಾಗಿದೆ ಎಂದು ರೂಪಾಲಿ ಬೇಸರ ವ್ಯಕ್ತಪಡಿಸಿದ್ದಾರೆ.ನಾನು ವಿಶೇಷ ಪ್ರಯತ್ನದಿಂದ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಕ್ಷೇತ್ರದ ಹಲವು ದೇವಾಲಯಗಳ ಅಭಿವೃದ್ಧಿಗೆ ₹ 11 ಕೋಟಿ ನೀಡಲು ಯೋಜನೆ ರೂಪಿಸಿದ್ದು ಅದರಂತೆ ಆದೇಶವೂ ಆಗಿತ್ತು. ಈಗಿನ ಸರ್ಕಾರ ಯಾವ ಕಾರಣಕ್ಕೆ ದೇವಾಲಯಗಳಿಗೆ ನೀಡಬೇಕಾದ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎನ್ನುವುದು ತಿಳಿಯುತ್ತಿಲ್ಲ. ಯಾವುದೇ ಅಭಿವೃದ್ಧಿ ಕಾಮಗಾರಿ ಸರ್ಕಾರದಿಂದ ನಡೆಯುತ್ತಿಲ್ಲ. ಇದು ಜನತೆಯಲ್ಲೂ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ದೇವಾಲಯಕ್ಕೂ ಹಣ ನೀಡದಷ್ಟು ಬಡತನ ಸರ್ಕಾರಕ್ಕೆ ಬಂದಿದೆಯೇ ಅಥವಾ ಉದ್ದೇಶಪೂರ್ವಕವಾಗಿ ಸೇಡಿನ ರಾಜಕಾರಣ ಮಾಡುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಉದ್ಭವವಾಗಿದೆ. ದೇವಾಲಯದ ವಿಷಯದಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂದು ಗುಡುಗಿದ್ದಾರೆ.ಮೂರನೇ ಹಂತದ ಹಣ ಬಿಡುಗಡೆಗೆ ಈಗಾಗಲೆ ವಿಳಂಬವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿ ಕೂಡಲೆ ಈ ಹಣ ಬಿಡುಗಡೆಗೆ ಕ್ರಮಕೈಗೊಳ್ಳಬೇಕೆಂದು ರೂಪಾಲಿ ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿನೇದಿನೇ ಏರುತ್ತಿರುವ ಚಿನ್ನದ ದರ ಇಳಿಯಲಿ ಎಂದು ಭಕ್ತನ ಹರಕೆ !
₹70 ಲಕ್ಷ ವಿದ್ಯುತ್‌ ಬಿಲ್‌ ಬಾಕಿ: ಸಿದ್ಧಗಂಗಾ ಮಠಕ್ಕೆ ನೀರು ಬಂದ್‌!