ರಾಜ್ಯದಲ್ಲಿ ಈ ಬಾರಿ ಮಳೆ ಕಡಿಮೆಯಾಗಿ ಸಹಜವಾಗಿಯೇ ಆಹಾರ ಬೆಳೆ ಉತ್ಪಾದನೆ ಕಡಿಮೆಯಾಗಿದೆ, ಆದರೆ ಆಹಾರ ಕೊರತೆಯಾಗಂತೆ ರಾಜ್ಯ ಸರ್ಕಾರ ನಿರ್ವಹಣೆ ಮಾಡುತ್ತದೆ ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆ ಆಗಿದೆ, ವಿದ್ಯುತ್ ಕೊರತೆ ಆಗಿದೆ, ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ, ರೈತರಿಗೆ ಸಮಸ್ಯೆಯಾಗಿದೆ. ಆದ್ದರಿಂದ ದುಬಾರಿಯಾದರೂ ವಿದ್ಯುತ್ ಖರೀದಿ ಅನಿವಾರ್ಯ, ಈ ಬಗ್ಗೆ ವಾರದೊಳಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ಹೇಳಿದ್ದಾರೆ. ಉಡುಪಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈ ಬಾರಿ ಮಳೆ ಕಡಿಮೆಯಾಗಿ ಸಹಜವಾಗಿಯೇ ಆಹಾರ ಬೆಳೆ ಉತ್ಪಾದನೆ ಕಡಿಮೆಯಾಗಿದೆ, ಆದರೆ ಆಹಾರ ಕೊರತೆಯಾಗಂತೆ ರಾಜ್ಯ ಸರ್ಕಾರ ನಿರ್ವಹಣೆ ಮಾಡುತ್ತದೆ ಎಂದರು. ರಾಜ್ಯದಲ್ಲಿ ಮೊದಲ ಹಂತದಲ್ಲಿ 195 ಮತ್ತು ಎರಡನೇ ಹಂತದಲ್ಲಿ 21 ತಾಲೂಕು ಸೇರಿ ಒಟ್ಟು 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಕೇಂದ್ರದಿಂದ 6000 ಕೋಟಿ ರುಪಾಯಿ ಪರಿಹಾರವನ್ನು ಕೇಳಿದ್ದೇವೆ. ಬರ ಪರಿಹಾರದ ಬಗ್ಗೆ ಕೇಂದ್ರ ಸರ್ಕಾರದಿಂದ ಧನಾತ್ಮಕ ಸ್ಪಂದನೆಯ ನೀರೀಕ್ಷೆಯಲ್ಲಿದ್ದೇವೆ, ರಾಜ್ಯದಿಂದ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ನೀಡಲಾದ ಹಣವನ್ನೇ ಕೇಳಿದ್ದೇವೆ, ಯಾರ ಮನೆಯಿಂದ ಕೊಡಿ ಎಂದು ಕೇಳಿಲ್ಲ ಎಂದರು. ಬ್ರಹ್ಮಾವರದಲ್ಲಿ ಕೃಷಿ ಕಾಲೇಜು: ರಾಜ್ಯದಲ್ಲಿ 10 - 15 ಕಡೆಗಳಲ್ಲಿ ಕೃಷಿ ಕಾಲೇಜು ಸ್ಥಾಪನೆಗೆ ಬೇಡಿಕೆ ಬಂದಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿಯೂ ಕೃಷಿ ಕಾಲೇಜು ಆರಂಭಿಸುವಂತೆ ಜಿಲ್ಲೆಯ ನಮ್ಮ ನಾಯಕರು ಒತ್ತಾಯಿಸುತ್ತಿದ್ದಾರೆ. ಇಲ್ಲಿ 350 ಎಕ್ರೆ ಭೂಮಿ ಇದೆ, ಕೃಷಿ ಸಂಶೋಧನಾ ಕೇಂದ್ರ ಇದೆ, ಹಾಸ್ಟೇಲ್ ಇದೆ, ಇದ್ದ ಡಿಪ್ಲೋಮಾ ಕಾಲೇಜು ಮುಚ್ಚಿದೆ, ಆದ್ದರಿಂದ ಕೃಷಿ ಕಾಲೇಜಿಗೆ ಇದು ಸೂಕ್ತವಾಗಿದೆ ಎಂದು ನನಗನ್ನಿಸುತ್ತಿದೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಹಳೆಯ ಯಂತ್ರೋಪಕರಣಗಳ ಮಾರಾಟದಲ್ಲಿ 15 ಕೋಟಿ ರು. ಅವ್ಯವಹಾರ ಆಗಿದೆ ಎಂದು ಇಲ್ಲಿನ ಕಾಂಗ್ರೆಸ್ ನಾಯಕರು ದೂರು ನೀಡಿದ್ದಾರೆ. ಈ ಬಗ್ಗೆ ಸಿಎಂ, ಡಿಸಿಎಂ ಅವರ ಗಮನಕ್ಕೆ ತರಲಾಗಿದೆ, ಸರ್ಕಾರ ತನಿಖೆ ಮಾಡಲಿದೆ ಎಂದೂ ಹೇಳಿದರು. ನಮ್ಗೆ 20, ಉಳಿದದ್ದು ಅವರ ಪಾಲು: ಚುನಾವಣೆಗೆ ಜೆಡಿಎಸ್ ಜೊತೆ ನಾವೂ ಹಿಂದೆ ಮೈತ್ರಿ ಮಾಡಿ ಅನುಭವಿಸಿದ್ದೇವೆ, ಬಿಜೆಪಿಗೆ ಅನುಭವ ಇಲ್ಲ, ಅದಕ್ಕೆ ಮೈತ್ರಿ ಮಾಡಿದ್ದಾರೆ, ಈ ಮೈತ್ರಿಯಿಂದ ಜೆಡಿಎಸ್‌ಗೂ ಲಾಭ ಇಲ್ಲ ಬಿಜೆಪಿಗೂ ಲಾಭ ಆಗುವುದಿಲ್ಲ. ಆದರೆ ಕಾಂಗ್ರೆಸ್ ಲೋಕಸಭೆಯ 20 ಸೀಟ್ ಗೆಲ್ಲುವುದು ಗ್ಯಾರಂಟಿ. ಉಳಿದಿದ್ದರಲ್ಲಿ ಅವರ ಪಾಲು ಎಷ್ಟೆಷ್ಟು ನೋಡೋಣ ಎಂದು ಚೆಲುವರಾಯಸ್ವಾಮಿ ಹೇಳಿದರು. ಅವರು ರಾಜಿನಾಮೆ ನೀಡಿದ್ದರಾ?: ಬೆಂಗಳೂರಿನಲ್ಲಿ ಮಾಜಿ ಕಾರ್ಪೋರೇಟರ್ ಮನೆಯಲ್ಲಿ 42 ಕೋಟಿ ರು. ಸಿಕ್ಕಿದ್ದಕ್ಕೆ ಸಿಎಂ ರಾಜಿನಾಮೆ ನೀಡಬೇಕು ಎಂಬ ಬಿಜೆಪಿ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಸಚಿವರು, ಯಾರದ್ದೋ ಮನೆಯಲ್ಲಿ ಹಣ ಸಿಕ್ಕಿದ್ರೆ ಅದಕ್ಕೆ ಮುಖ್ಯಮಂತ್ರಿ ರಾಜಿನಾಮೆ ಯಾಕೆ ನೀಡಬೇಕು, ಬಿಜೆಪಿ ಸರ್ಕಾರ ಇರುವಾಗಲೂ ಯಾರ್ಯಾದೊ ಮನೆಯಲ್ಲಿ ಹಣ ಸಿಕ್ಕಿದಾಗ ಅವರು ರಾಜಿನಾಮೆ ನೀಡಿದ್ದರಾ ಎಂದು ಮರುಪ್ರಶ್ನಿಸಿದರು. ಈಶ್ವರಪ್ಪ - ಕಟೀಲ್ ಅಣ್ಣತಮ್ಮಂದಿರು, ದಿನಾ ಬೆಳಗಾದ್ರೆ ಟಿವಿ ಮುಂದೆ ಸ್ಟೇಟ್‌ಮೆಂಟ್ ಕೊಡ್ತಾರೆ, ಅಶ್ವತ್ಥನಾರಾಯಣ, ಸಿಟಿ ರವಿ ಹೇಳಿಕೆಗಳಲ್ಲಿ ತಿರುಳಿಲ್ಲ, ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ, ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದರು. ಬಿಜೆಪಿಗೆ ಲೋಕಸಭಾ ಎದುರಿಸುವುದಕ್ಕೆ ಆಗುತ್ತಿಲ್ಲ ಇಲ್ಲ ಹೆದರಿಕೆ ಆಗುತ್ತಿದೆ, ಅದಕ್ಕೆ ವಿಷಯಾಂತರ ಮಾಡಲಿಕ್ಕೆ ಕಾಂಗ್ರೆಸ್ ಸರ್ಕಾರದ ಮೇಲೆ ಆರೋಪ ಮಾಡ್ತಿದ್ದಾರೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.